ಬೈಲಹೊಂಗಲ: ತಾಲೂಕಿನ ನೇಸರಗಿ ಬಸ್ ನಿಲ್ದಾಣದ ಪರಿಸ್ಥಿತಿ ಸುಧಾರಿಸಬೇಕಾದ ಅಗತ್ಯವಿದೆ. ಬಾಗಲಕೋಟೆ, ವಿಜಯಪುರ, ಇಳಕಲ್, ಬನಹಟ್ಟಿ, ಗೋವಾ, ರಾಯಚೂರ, ಗುಲಬುರ್ಗಾ, ಔರಂಗಬಾದ, ಬೀದರ, ಹೆ„ದ್ರಾಬಾದ್, ಗೋಕಾಕ ಸೇರಿದಂತೆ ಹಲವು ನಗರಗಳನ್ನು ಸಂಪರ್ಕಿಸುವ ಬಸ್ ಗಳು ನಿತ್ಯ ನೇಸರಗಿ ಮೇಲಿಂದ ಹಾಯ್ದು ಹೋಗುತ್ತವೆ.
ಇದೀಗ ಶಾಸಕ ಮಹಾಂತೇಶ ದೊಡ್ಡಗೌಡರ ಜತ್ತ-ಜಾಂಬೋಟಿ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಿರುವುದು ನಿಲ್ದಾಣದ ಅಭಿವೃದ್ಧಿಯ ಆಸೆ ಮೂಡಿಸಿದೆ. ಈ ರಸ್ತೆ ಬಸ್ ನಿಲ್ದಾಣದ ಎದುರಿನಿಂದ ಹಾಯ್ದು ಹೋಗುತ್ತಿದ್ದು, ನೂತನ ಯೋಜನೆಯಂತೆ ರಸ್ತೆ ಅಗಲೀಕರಣವಾದರೆ ಬಸ್‌ಗಳ ಸಂಚಾರ ಸುಲಲಿತವಾಗಿ, ರಸ್ತೆ ಮೇಲಿನ ದಟ್ಟಣೆ, ಟ್ರಾಫಿಕ್ ಜಾಮ್ ಇಲ್ಲವಾಗಲಿವೆ. ಸದ್ಯ ಬಸ್ ನಿಲ್ದಾಣ ರಸ್ತೆ ಚಿಕ್ಕದಾಗಿರುವುದರಿಂದ ದಟ್ಟಣೆ ಹೆಚ್ಚಾಗಿ ಬಾಗಲಕೋಟ ಮತ್ತು ಬೆಳಗಾವಿ ಕಡೆ ಹೋಗುವ ಅನೇಕ ಬಸ್ ಗಳು ಬಸ್ ನಿಲ್ದಾಣದೊಳಗೆ ಬಾರದೆ ನೇಸರಗಿ ಕ್ರಾಸ್ ಮೂಲಕ ನೇರವಾಗಿ ಸಂಚರಿಸುವ ಪರಿಪಾಠ ಇದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ಇಲ್ಲಿರುವ ಪ್ರಯಾಣಿಕರು ಕುಳಿತುಕೊಳ್ಳುವ ಹಾಸುಗಲ್ಲುಗಳು ಮುರಿದು ಹಾಳಾಗಿವೆ. ಅಲ್ಲಲ್ಲಿ ಕಸ ಬಿದ್ದರೂ ಕ್ಯಾರೆ ಎನ್ನುವರಿಲ್ಲ. ಹಳೆಯ ಶೌಚಾಲಯ ಕೆಡವಿ ಹೊಸದಾಗಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಹಳೆಯ ಶೌಚಾಲಯ ಕೆಡವಿದ ನಂತರವೂ ಕಲ್ಲು ಮಣ್ಣು ಹಾಗೆಯೇ ಬಿದ್ದಿದೆ. ಅದನ್ನು ಬೇರೆಡೆ ಸಾಗಿಸಿದರೆ ನಿಲ್ದಾಣ ಸ್ವತ್ಛ ಆಗುವುದಲ್ಲದೇ ಇನ್ನೊಂದೆರಡು ಬಸ್ ನಿಲ್ಲಲೂ ಅನುಕೂಲವಾಗುತ್ತದೆ.
ಪ್ರಯಾಣಿಕರಿಗೆ ಮೂಲ ಸೌಲಭ್ಯಗಳನ್ನು ಸಾರಿಗೆ ಸಂಸ್ಥೆ ಒದಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನೇಸರಗಿ ಗ್ರಾಮದ ಬಸ್ ನಿಲ್ದಾಣವು ರಾಜ್ಯ ಬಹುತೇಕ ಎಲ್ಲ ಪಟ್ಟಣಗಳನ್ನು ಸಂಪರ್ಕಿಸುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇಲ್ಲಿಂದ ಸಂಚರಿಸುತ್ತಾರೆ. ಕೂಡಲೇ ನಿಲ್ದಾಣದಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ.
ಮಹಾಂತೇಶ ಹಿರೇಮಠ, ಜಿಲ್ಲಾ ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ
ಸಿ.ವೈ.ಮೆಣಶಿನಕಾಯಿ