Advertisement

ಕೊಳ್ಳೇಗಾಲದಲ್ಲಿ ನರೇಗಾ ಕುಂಟಿತ

07:33 AM Feb 15, 2019 | |

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಹೆಚ್ಚು ಪ್ರಗತಿ ಸಾಧಿಸುವಂತೆ ಜಿಪಂ ಅಧ್ಯಕ್ಷೆ ಶಿವಮ್ಮ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕುವಾರು ಪ್ರಗತಿ ಪರಾಮರ್ಶಿಸಿದ ಜಿಪಂ ಅಧ್ಯಕ್ಷರು ಕೊಳ್ಳೇಗಾಲ ತಾಲೂಕು ಪ್ರಗತಿಯಲ್ಲಿ ಹಿಂದೆ ಬಿದ್ದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಗತಿ ಸಾಧನೆ: ತಾಪಂ ಇಒಗಳು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರಗತಿ ಕುಂಠಿತವಾಗಿರುವ ಬಗ್ಗೆ ಸೂಕ್ತ ಕಾರಣ ನೀಡಬೇಕು. ಕೆಲ ತಾಲೂಕುಗಳು ಹೆಚ್ಚಿನ ಪ್ರಗತಿ ಸಾಧಿಸಿವೆ. ಉಳಿದ ತಾಲೂಕುಗಳಲ್ಲಿ ಹಿಂದುಳಿದಿದೆ? ಪ್ರಗತಿ ಸಾಧನೆಗೆ ಎಷ್ಟು ಸಮಯಬೇಕಾಗಿದೆ ಎಂಬುದನ್ನು ಹೇಳಿ ಎಂದು ಪ್ರಶ್ನಿಸಿದರು.

ಇಒಗಳು ನಿಗಾವಹಿಸಲಿ: ಜಿಪಂ ಉಪಾಧ್ಯಕ್ಷ ಜೆ.ಯೋಗೀಶ್‌ ಮಾತನಾಡಿ, ಗ್ರಾಮ ಮಟ್ಟದಲ್ಲಿ ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದರೆ ಪ್ರಗತಿ ಹೆಚ್ಚಳವಾಗುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯೋಜನೆ ಬಗ್ಗೆ ಹೆಚ್ಚು ಕಾಳಜಿವಹಿಸಲು ತಾಪಂ ಇಒಗಳು ನಿಗಾವಹಿಸಬೇಕು ಎಂದರು. ಜಿಪಂ ಸಿಇಒ ಡಾ.ಕೆ.ಹರೀಶ್‌ಕುಮಾರ್‌ ಮಾತನಾಡಿ, ಪ್ರಗತಿ ಸಾಧನೆ ಹಿನ್ನಡೆಗೆ ಅಧಿಕಾರಿಗಳು ಅನಗತ್ಯವಾಗಿ ಸಬೂಬು ನೀಡಬಾರದು ಎಂದರು.

ಸಭೆಗೂ ಮೊದಲು ಸಾಕ್ಷರತೆ ಕುರಿತು ಭಿತ್ತಿಪತ್ರ ಹಾಗೂ ಮಡಿಕೆ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಚೆನ್ನಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ ಸಿದ್ದರಾಜು, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗದ ಮಣಿ, ಮುಖ್ಯ ಯೋಜನಾಧಿಕಾರಿ ಪದ್ಮಾಶೇಖರ್‌ ಪಾಂಡೆ ಇತರರು ಉಪಸ್ಥಿತರಿದ್ದರು.

Advertisement

ಬಿಳಿ ಚೀಟಿ ದಂಧೆ ಮಟ್ಟಹಾಕಿ
ಚಾಮರಾಜನಗರ:
ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳ ಅಕ್ರಮ ಬಿಳಿಚೀಟಿ ದಂಧೆಯಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಜಿಲ್ಲಾ ಪಂಚಾಯಿತಿ ತಂಡವೇ ಮಾರುಕಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.

ಕಳೆದ ಸಭೆಯಲ್ಲಿ ಹಲವು ಸದಸ್ಯರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬಿಳಿ ಚೀಟಿ ದಂಧೆಯಲ್ಲಿ ಬೆಳೆ ಬೆಳೆದ ರೈತರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ಬಿಳಿಚೀಟಿ ಪ್ರದರ್ಶಿಸಿ, ಕ್ರಮಕ್ಕೆ ಒತ್ತಾಯಿಸಿದ್ದರು. ಬುಧವಾರ ನಡೆದ ಸಭೆಯಲ್ಲಿ ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ಎಷ್ಟು ಜನರ ಲೈಸೆನ್ಸ್‌ ರದ್ದು ಪಡಿಸಿದ್ದೀರಿ ಎಂಬ ಮಾಹಿತಿ ಕೇಳಿದಾಗ ಎಪಿಎಂಸಿ ವ್ಯವಸ್ಥಾಪಕರು ಉತ್ತರಿಸಲು ತಡಕಾಡಿದರು.

ತಂಡವೇ ಬೇಡಿ: ಆಗ ಮಾತನಾಡಿದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಅವರ ವ್ಯವಹಾರವನ್ನು ಮಾರುಕಟ್ಟೆಯಿಂದ ಹೊರಗಡೆ ಇಟ್ಟುಕೊಳ್ಳಲಿ, ಮಾರುಕಟ್ಟೆ ಒಳಗೆ ಬೇಡ, ಮಾರುಕಟ್ಟೆ ಒಳಗೆ ಸರ್ಕಾರದ ನಿಯಮದಂತೆ ನಡೆಯಬೇಕು, ರೈತರಿಗೆ ಮೋಸ ತಪ್ಪಬೇಕು. ಸದಸ್ಯರ ಚರ್ಚೆಗೂ ಬೆಲೆ ಬರಬೇಕು, ಈ ಬಗ್ಗೆ ನೀವು ಕ್ರಮ ಕೈಗೊಳ್ಳದಿದ್ದರೆ, ನಮ್ಮ ತಂಡವೇ ಭೇಟಿ ನೀಡಿ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭಕ್ಕೂ ಮುನ್ನ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇಡುವಂತೆ ಕೃಷಿ ಇಲಾಖೆ ಉಪನಿರ್ದೇಶಕ ಎಂ. ತಿರುಮಲೇಶ್‌ ಅವರಿಗೆ ಸಭೆ ಸೂಚನೆ ನೀಡಿತು.  ಈ ಸಂದರ್ಭದಲ್ಲಿ ತಿರುಮಲೇಶ್‌ ಮಾತನಾಡಿ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳ ಕೆಲವೆಡೆ,

ಮಾರ್ಚ್‌ ಕೊನೆ ಹಾಗೂ ಏಪ್ರಿಲ್‌ ಮೊದಲ ವಾರದಲ್ಲಿ ಮಳೆಯಾಗುವ ಸಂಭವವಿದ್ದು, ಮುಂಚಿತವಾಗಿ ನಮಗೆ ಬಿತ್ತನೆ ಬೀಜ, ಗೊಬ್ಬರ ನೀಡಲು ಸಂಬಂಧಪಟ್ಟವರಿಗೆ ತಿಳಿಸಬೇಕು ಎಂದು ಹೇಳಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

15 ದಿನಗಳಲ್ಲಿ ಸರ್ವೆ ಮುಗಿಸಿ: ತೋಟಗಾರಿಕೆ ಇಲಾಖೆಯಿಂದ ತೆಂಗು ಬೆಳೆ ನಾಶಕ್ಕೆ ಬಂದಿರುವ ಪರಿಹಾರವನ್ನು ಶೀಘ್ರ ಸರ್ವೆ ಮಾಡಿಸಿ, ರೈತರಿಗೆ ನೀಡಬೇಕು. ಇದು ವಿಳಂಬವಾಗುತ್ತಿರುವ ಬಗ್ಗೆ ಸಭೆಯಲ್ಲಿ ಬೇಸರ ವ್ಯಕ್ತವಾಯಿತು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ಅಧಿಕಾರಿ ಈಗಾಗಲೇ 396 ಜನರ ತೋಟಗಳ ಸರ್ವೇ ನಡೆಸಿ, 70 ಜನರ ಖಾತೆಗಳಿಗೆ ಇನ್ನು ಮೂರು ದಿನದಲ್ಲಿ ಹಣ ಜಮಾ ಮಾಡಲಾಗುವುದು. ಉಳಿದವನ್ನು 15 ದಿನಗಳಲ್ಲಿ ಮುಗಿಸಲಾಗುವುದು ಎಂದು ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next