Advertisement
ಮಾಣಿ : ಬಂಟ್ವಾಳ ತಾಲೂಕಿನ ನೆಟ್ಲಮುಟ್ನೂರು ಗ್ರಾಮದ ಮಾಣಿ-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ನೇರಳಕಟ್ಟೆ ದ.ಕ. ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಶತಮಾನೋತ್ಸವದ ಸಿದ್ಧತೆಯಲ್ಲಿದೆ. ಊರಿನ ಗಣ್ಯರು ಹಾಗೂ ವಿದ್ಯಾಭಿಮಾನಿಗಳಿಂದ ನಿರ್ಮಾಣಗೊಂಡ ಶಾಲೆಯು 1 ಎಕ್ರೆ 7 ಸೆಂಟ್ಸ್ ಸ್ಥಳವನ್ನು ಹೊಂದಿದೆ. ಉರ್ದಿಲ ಪಟೇಲರೆಂದೇ ಹೆಸರಾಗಿದ್ದ ಇಂದುಹಾಸ ರೈ ಸ್ಥಳದಾನ ಮಾಡಿದ್ದಾರೆ. ಯು.ಎಸ್.ಎ.ಯಲ್ಲಿರುವ ಉರ್ದಿಲಗುತ್ತು ರಾಮಪ್ರಸಾದ್ ರೈ ಅವರು ಊರಿಗೆ ಬಂದಾಗಲೆಲ್ಲ ಶಾಲೆಗೆ ಭೇಟಿ ನೀಡಿ ಶಾಲಾಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. 1919ರ ಎ. 1ರಂದು ಕಿ.ಪ್ರಾ. ಶಾಲೆ ಆರಂಭಗೊಂಡು 1975ರಲ್ಲಿ ಹಿ.ಪ್ರಾ. ಶಾಲೆಯಾಗಿ ಪರಿವರ್ತನೆಗೊಂಡಿತು. 2011ರಲ್ಲಿ 8ನೇ ತರಗತಿ ಆರಂಭಗೊಂಡು ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಾಯಿತು.
ಹಿಂದೆ ವಾರದ ಭಜನ ಕಾರ್ಯಕ್ರಮ ಶಾಲೆಯಲ್ಲಿ ನಡೆದುಕೊಂಡು ಬರುತ್ತಿತ್ತು. ಸ್ಥಳೀಯರಿಂದ ವರ್ಷಕೊಮ್ಮೆ ಏಕಾಹ ಭಜನೆ, ಸ್ಥಳೀಯ ಯುವಕ ವೃಂದದವರ ಸಹಭಾಗಿತ್ವದಲ್ಲಿ ವಾರ್ಷಿಕೋತ್ಸವ ಹಾಗೂ ನಾಟಕ ಪ್ರದರ್ಶನ ನಡೆಯುತ್ತಿದೆ. ಯಕ್ಷಗಾನ ಕಲಾವಿದ ಕರಾಯ ಕೊರಗಪ್ಪ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಕೂಟ ನಡೆದುಕೊಂಡು ಬರುತ್ತಿದೆ ಎಂದು ಶಾಲೆಯಲ್ಲಿ ಹಲವು ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ರಾಮಣ್ಣ ಆಳ್ವರು ನೆನಪಿಸಿಕೊಳ್ಳುತ್ತಾರೆ. ಹಳೆ ವಿದ್ಯಾರ್ಥಿಗಳು
ಶಾಲೆಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದು, ಡಾ| ಶ್ರೀಧರ ಆಳ್ವ ಉನ್ನತ ಶಿಕ್ಷಣ ಪಡೆದು ಅಮೆರಿಕಾದ ಹೆಲ್ತ್ ಕೇರ್ ಕಂಪೆನಿಯಲ್ಲಿ ಜಾಗತಿಕ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಗುರುತಿಸಿಕೊಂಡಿರುವ ವಸಂತ ಆಳ್ವ, ದಿನೇಶ್ ನಾಯ್ಕ, ನಿರಂಜನ್ ರೈ, ವಿಟuಲ ನಾಯ್ಕ, ಸುರೇಶ ರೈ, ಕೃಷ್ಣಪ್ರಸಾದ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಮಂಜುನಾಥ್ ಎನ್. ಮೊದಲಾದವರು ಈ ಶಾಲೆಯ ಹಳೆ ವಿದ್ಯಾರ್ಥಿಗಳು.
Related Articles
ವೆಂಕಟ್ರಮಣ ಭಟ್ ಮಿತ್ತೂರು (ಬಚ್ಚ ಮಾಸ್ಟ್ರೆ), ಜತ್ತಪ್ಪ ರೈ ಕೆ.ಎನ್., ಶಂಕರನಾರಾಯಣ, ಬಾಲಕೃಷ್ಣ ಶೆಟ್ಟಿ ಮುನ್ನೂರು, ವಿಶ್ವನಾಥ ರೈ ಅನಂತಾಡಿ, ನಾರಾಯಣ ಪೂಜಾರಿ ಸೂರ್ಯ, ಬಾಲಕೃಷ್ಣ ಕೊಂಡೆ, ವಿಶ್ವನಾಥ ನಾಯ್ಕ, ಜ್ಯೋತಿ, ಇಂದಿರಾ ಮೊದಲಾದವರು ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.
ಶಾಲೆಯು ಪ್ರಸ್ತುತ ವಿಶಾಲವಾದ ಆಟದ ಮೈದಾನ, ಕೈತೋಟವನ್ನು ಹೊಂದಿದೆ. ಸ್ಥಳೀಯ ಗ್ರಾಮಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರಸ್ತುತ ಏಮಾಜೆ ಕಿ.ಪ್ರಾ. ಶಾಲೆ, ಬಂಟ್ರಿಂಜ ಕಿ.ಪ್ರಾ. ಶಾಲೆ, ಪೆರಾಜೆ ಹಿ.ಪ್ರಾ. ಶಾಲೆ, ಅನಂತಾಡಿ, ಪಾಟ್ರಕೋಡಿ ಹಿ.ಪ್ರಾ. ಶಾಲೆಗಳಿಗೆ ಕೇಂದ್ರ ಸ್ಥಾನದಲ್ಲಿದೆ. 118 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 7 ಮಂದಿ ಶಿಕ್ಷಕರಿದ್ದಾರೆ.
Advertisement
ಸರಕಾರದ ಅನುದಾನದೊಂದಿಗೆ ಹೊಸ ಕಟ್ಟಡ ನಿರ್ಮಾಣವಾಗಿದ್ದು, ಎಸ್.ಡಿಎಂ.ಸಿ. ಜನಪ್ರತಿನಿಧಿಗಳು, ವಿದ್ಯಾರ್ಥಿಗಳ ಹೆತ್ತವರ ಸಹಕಾರದಿಂದ ಶತಮಾನೋತ್ಸವ ಆಚರಿಸಲಾಗುವುದು. ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮವಾಗಿದ್ದು ಪ್ರತಿವರ್ಷ ಶೇ. 100 ಫಲಿತಾಂಶ ದಾಖಲಾಗುತ್ತಿದೆ. ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿ, ರಂಗಮಂದಿರ ಮತ್ತು ಸುಸಜ್ಜಿತ ಅಡುಗೆ ಕೋಣೆಯ ಆವಶ್ಯಕತೆ ಇದೆ.-ಗೀತಾ ಕುಮಾರಿ ಕೆ.ಎಸ್.,ಪ್ರಭಾರ ಮುಖ್ಯ ಶಿಕ್ಷಕಿ. ನನ್ನ ಪ್ರಾಥಮಿಕ ಶಿಕ್ಷಣಕ್ಕೆ ಉತ್ತಮ ಅಡಿಪಾಯ ನೀಡಿದ ಶಾಲೆ ಶತಮಾನದ ಸಂಭ್ರಮದ ಸಿದ್ಧತೆಯಲ್ಲಿದೆ. ನನ್ನ ತಂದೆ ಈ ಶಾಲೆಯ ಬೆಳವಣಿಗೆಗೆ ವಿಶೇಷ ಕಾಳಜಿ ತೋರಿದ್ದರು. ನನ್ನ ಸಹೋದರ ಉರ್ದಿಲಗುತ್ತು ರಾಮಪ್ರಸಾದ್ ರೈ ಸಹಕಾರ ನೀಡುತ್ತಿದ್ದಾರೆೆ. ನಾನು ಕಲಿತ ಶಾಲೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂಬುದು ನನ್ನ ಮನದಾಳದ ಹಾರೈಕೆ.
-ಡಾ| ಅನಸೂಯಾ ಕಿಶೋರ್ ಶೆಟ್ಟಿ,
ಹಳೆ ವಿದ್ಯಾರ್ಥಿನಿ. - ಮಹೇಶ್ ಮಾಣಿ