ಕಾಠ್ಮಂಡು : ”ಭಾರತ – ಚೀನ ನಡುವಿನ ಡೋಕ್‌ಲಾಂ ಗಡಿ ವಿವಾದವನ್ನು ಉಭಯ ದೇಶಗಳು ಪರಸ್ಪರ ಮಾತುಕತೆಯ ಮೂಲಕ ಬಗೆ ಹರಿಸಿಕೊಳ್ಳಬೇಕು; ಯುದ್ಧಕ್ಕೆ ಆಸ್ಪದ ನೀಡಬಾರದು; ಒಂದೊಮ್ಮೆ ಭಾರತ – ಚೀನ ನಡುವೆ ಯುದ್ಧ ಸ್ಫೋಟಿಸಿತೆಂದರೆ ನೇಪಾಲಕ್ಕೆ ಭಾರೀ ಸಂಕಷ್ಟ ಉಂಟಾಗುವುದು ಖಚಿತ” ಎಂದು ನೇಪಾಲ ಸರಕಾರ ಕಳವಳ ವ್ಯಕ್ತಪಡಿಸಿದೆ.
ನೇಪಾಲದ ಉಪ ಪ್ರಧಾನಿ ಹಾಗೂ ವಿದೇಶ ವ್ಯವಹಾರಗಳ ಸಚಿವರಾಗಿರುವ ಕೃಷ್ಣ ಬಹಾದ್ದೂರ್ ಮಹಾರಾ ಅವರು “ಭಾರತ – ಚೀನ ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಬೇಕು; ಅಲಿಪ್ತ ನೀತಿ ಹೊಂದಿರುವ ನೇಪಾಲ ಈ ದಿಶೆಯಲ್ಲಿ ಉಭಯ ದೇಶಗಳನ್ನು ಒತ್ತಾಯಿಸುತ್ತದೆ” ಎಂದು ಹೇಳಿದರು.
‘ಭಾರತ – ಚೀನ ಯುದ್ಧ ಸ್ಫೋಟಿಸಿತೆಂದರೆ ನೇಪಾಲಕ್ಕೆ ಅಗತ್ಯವಿರುವ ವಸ್ತುಗಳು ಭಾರತದಿಂದ ಪೂರೈಕೆಯಾಗುವುದು ನಿಂತು ಹೋಗುತ್ತದೆ. ನೇಪಾಲದ ದುರ್ಗಮ ಉತ್ತರ ಭಾಗದಲ್ಲಿರುವ ಚೀನದಿಂದ ಸೂಕ್ತ ಸಾರಿಗೆ ಸೌಕರ್ಯ ಇಲ್ಲದಿರುವ ಕಾರಣಕ್ಕೆ ಅಗತ್ಯ ವಸ್ತುಗಳ ಪೂರೈಕೆ ಆಗುತ್ತಿಲ್ಲ’ ಎಂದವರು ಹೇಳಿದರು.
ಕೃಷ್ಣ ಬಹಾದ್ದೂರ್ ಅವರು ಇದೇ ಆಗಸ್ಟ್ 23ರಿಂದ 27ರ ವರೆಗೆ ಭಾರತ ಭೇಟಿ ಕೈಗೊಳ್ಳಲಿದ್ದಾರೆ.
ಈ ನಡುವೆ ಭಾರತ ಮತ್ತು ಚೀನ ವಿವಾದಿತ ಡೋಕ್‌ಲಾಂನಲ್ಲಿ ತಮ್ಮ ಸೇನಾ ಪಡೆಗಳನ್ನು, ಯುದ್ಧ ಪರಿಕರಗಳನ್ನು ದೊಡ್ಡ ಪ್ರಮಾಣದಲ್ಲಿ ಶೇಖರಿಸಿರುವುದಾಗಿ ವರದಿಯಾಗಿದೆ.