ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ನಡೆದ ಫ್ಯಾಶನ್ ಶೋ ಕಾರ್ಯಕ್ರಮವೊಂದು ಇದುವರೆಗೂ ಜಗತ್ತಿನ ಅತೀ ಎತ್ತರದ ಪ್ರದೇಶದಲ್ಲಿ ನಡೆದ ಫ್ಯಾಶನ್ ಶೋ ಕಾರ್ಯಕ್ರಮವಾಗಿ ದಾಖಲೆ ಪುಸ್ತಕಗಳಲ್ಲಿ ಜಾಗ ಪಡೆದುಕೊಂಡಿತು. ಸಮುದ್ರ ಮಟ್ಟದಿಂದ 5,340 ಮೀಟರ್ ಗಳಷ್ಟು ಎತ್ತರದಲ್ಲಿರುವ ಕಾಲಾ ಪತ್ತರ್ ಎಂಬ ಪ್ರಕೃತಿ ರಮಣೀಯ ಪ್ರದೇಶದಲ್ಲಿ ಈ ಫ್ಯಾಶನ್ ಶೋ ನಡೆಯಿತು. ಈ ಜಾಗ ಎವರೆಸ್ಟ್ ಬೇಸ್ ಕ್ಯಾಂಪ್ ಗೆ ಸಮೀಪದಲ್ಲಿದೆ.
ದಿ ಮೌಂಟ್ ಎವರೆಸ್ಟ್ ಫ್ಯಾಶನ್ ರನ್ ವೇ ಎಂಬ ಹೆಸರಿನ ವಿನೂತನ ಫ್ಯಾಶನ್ ಶೋ ಕಾರ್ಯಕ್ರಮವನ್ನು ಆರ್.ಬಿ. ಡೈಮಂಡ್ಸ್ ಹಾಗೂ ಕಾಸಾ ಸ್ಟೈಲ್ ಎಂಬೆರಡು ಸಂಸ್ಥೆಗಳು ನೇಪಾಳ ಪ್ರವಾಸೋದ್ಯಮ ಮಂಡಳಿಯ ಸಹಕಾರದೊಂದಿಗೆ ಆಯೋಜಿಸಿದ್ದವು.
ಫಿನ್ಲೆಂಡ್, ಇಟಲಿ, ಶ್ರೀಲಂಕಾ ಮತ್ತು ಸಿಂಗಾಪುರ ಸೇರಿದಂತೆ ವಿವಿಧ ದೇಶಗಳ ಮಾಡೆಲ್ ಗಳು ಈ ಫ್ಯಾಶನ್ ಶೋದಲ್ಲಿ ಭಾಗವಹಿಸಿದ್ದರು.
ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಫ್ಯಾಶನ್ ವಿಚಾರಗಳ ಉತ್ತೇಜನ ಈ ಫ್ಯಾಶನ್ ಶೋ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಲ್ಲಿ ಬಳಸಲಾಗಿದ್ದ ವಿನ್ಯಾಸಗಳು, ಬಟ್ಟೆಗಳ ವಿಧಗಳು ಎಲ್ಲವೂ ನೈಸರ್ಗಿಕವಾಗಿಯೇ ತಯಾರಿಸಲಾಗಿತ್ತು. ಇಲ್ಲಿ ಮಾಡೆಲ್ ಗಳು ಧರಿಸಿದ್ದ ಬಟ್ಟೆಗಳನ್ನು ನೇಪಾಳಿ ಪಶ್ಮಿನ, ಫೆಲ್ಟ್ ಮತ್ತು ಯಾಕ್ ಪ್ರಾಣಿಯ ಉಣ್ಣೆಯಿಂದ ತಯಾರಿಸಲಾಗಿತ್ತು ಮತ್ತು ಇವೆಲ್ಲವೂ ಚಳಿಗಾಲದ ಉಡುಪುಗಳಾಗಿ ಪ್ರಸಿದ್ಧಿಯನ್ನು ಪಡೆದಿವೆ.