ಕಾಠ್ಮಂಡು : ನೇಪಾಲ ಸಂಸತ್ತು ಮತ್ತು ಪ್ರಾಂತೀಯ ಅಸೆಂಬ್ಲಿಗೆ ನಡೆದಿರುವ ಐತಿಹಾಸಿಕ ಚುನಾವಣೆಯಲ್ಲಿ ಎಡ ಮೈತ್ರಿ ಕೂಟವು 30 ಸಂಸತ್ ಸ್ಥಾನಗಳ ಪೈಕಿ 26 ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷವಾಗಿರುವ ನೇಪಾಲ ಕಾಂಗ್ರೆಸ್‌ಗೆ ಕೇವಲ ಮೂರು ಸ್ಥಾನಗಳು ಮಾತ್ರವೇ ಪ್ರಾಪ್ತವಾಗಿವೆ.
ನೇಪಾಲ ಕಮ್ಯುನಿಸ್ಟ್ ಪಕ್ಷ ಮತ್ತು ಸಂಯುಕ್ತ ಮಾರ್ಕ್ಸಿಸ್ಟ್-ಲೆನಿನಿಸ್ಟ್ ಮೈತ್ರಿ ಕೂಟಕ್ಕೆ 18 ಸ್ಥಾನಗಳು ಲಭಿಸಿವೆ. ಇವುಗಳ ಮೈತ್ರಿ ಪಾಲುದಾರನಾಗಿರುವ ಪಿಪಿಎನ್ ಮಾವೋಯಿಸ್ಟ್ ಸೆಂಟರ್ ಪಕ್ಷಕ್ಕೆ ಎಂಟು ಸ್ಥಾನಗಳು ಲಭಿಸಿವೆ. ಪಕ್ಷೇತರರ ಪಾಲಿಗೆ ಕೇವಲ ಒಂದು ಸ್ಥಾನ ಮಾತ್ರವೇ ಸಿಕ್ಕಿದೆ.
ಸಂಸದೀಯ ಸ್ಥಾನಗಳಿಗೆ ಒಟ್ಟು 1,663 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರಾಂತೀಯ ಅಸೆಂಬ್ಲಿ ಸೀಟುಗಳಿಗೆ 2,819 ಅಭ್ಯರ್ಥಿಗಳು ಕಣದಲ್ಲಿದ್ದರು.
ಈ ಐತಿಹಾಸಿಕ ಚುನಾವಣೆ ಮೂಲಕ ನೇಪಾಲಕ್ಕೆ ಅತ್ಯಗತ್ಯವಿರುವ ರಾಜಕೀಯ ಸ್ಥಿರತೆ ಪ್ರಾಪ್ತವಾದೀತೆಂದು ತಿಳಿಯಲಾಗಿದೆ.
ನೇಪಾಲದ ಪ್ರತಿನಿಧಿ ಸಭೆಯು 275 ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ 165 ಪ್ರತಿನಿಧಿಗಳನ್ನು ನೇರವಾಗಿ ಚುನಾಯಿಸಲಾಗುತ್ತದೆ. ಉಳಿದ 110 ಮಂದಿ ಸಮಾನುಪಾತದ ಪ್ರಾತಿನಿಧಿಕ ವ್ಯವಸ್ಥೆಯ ಮೂಲಕ ಆಯ್ಕೆ ಯಾಗುತ್ತಾರೆ.
ಕಾಠ್ಮಂಡು ಜಿಲ್ಲೆಯ 10 ಸಂಸದೀಯ ಸ್ಥಾನಗಳಲ್ಲಿ ಸಿಪಿಎನ್-ಯುಎಂಎಲ್ ಮೂರನ್ನು ಗೆದ್ದುಕೊಂಡಿದೆ; ಎನ್‌ಸಿ ಗೆ ಎರಡು ಸ್ಥಾನ ದಕ್ಕಿದೆ.