Advertisement

ನೇಪಾಲದ ನಕ್ಷೆ ಮೊಂಡಾಟ

01:31 AM Jun 14, 2020 | Sriram |

ಕಾಠ್ಮಂಡು: ಚೀನದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿರುವ ನೇಪಾಲವು ವಿವಾದಿತ ನಕ್ಷೆಗೆ ಕೊನೆಗೂ ಸಂಸತ್ತಿನಲ್ಲಿ ಶನಿವಾರ ಅಂಗೀಕಾರದ ಮುದ್ರೆಯೊತ್ತಿದೆ. ಭಾರತದ ತೀವ್ರ ವಿರೋಧದ ನಡುವೆಯೂ ಉತ್ತರಾಖಂಡದ ಕಾಲಾಪಾನಿ, ಲಿಪುಲೇಕ್‌, ಲಿಂಪಿಯಾಧುರಾಗಳನ್ನು ತನ್ನದೆಂದು ಅಧಿಕೃತವಾಗಿ ಭೂಪಟದಲ್ಲಿ ಪ್ರಕಟಿಸಿ ಉದ್ಧಟತನ ಪ್ರದರ್ಶಿಸಿದೆ.

Advertisement

ನಕ್ಷೆ ಸಂಬಂಧಿತವಾಗಿ ಕೆ.ಪಿ. ಶರ್ಮಾ ಓಲಿ ಸರಕಾರ ಮಂಡಿಸಿದ್ದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಸತ್ತಿನಲ್ಲಿ ಸಂಪೂರ್ಣ ಬಹುಮತ ಸಿಕ್ಕಿದೆ. ಈ ವಿಚಾರದಲ್ಲಿ ಅಲ್ಲಿನ ವಿಪಕ್ಷಗಳೂ ಒಗ್ಗಟ್ಟು ಪ್ರದರ್ಶಿಸಿವೆ. ಎನ್‌ಸಿಪಿ, ನೇಪಾಲಿ ಕಾಂಗ್ರೆಸ್‌, ರಾಷ್ಟ್ರೀಯ ಜನತಾ ಪಕ್ಷ- ನೇಪಾಲ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಸಹಿತ ಎಲ್ಲ 258 ಸಂಸದರೂ ಮಸೂದೆಯ ಪರ ಮತ ಚಲಾಯಿಸಿದ್ದಾರೆ.

ಮತದಾನಕ್ಕೆ ಮುನ್ನ ಹೌಸ್‌ ಆಫ್ ರೆಪ್ರಸೆಂಟೇ ಟಿವ್ಸ್‌ನಲ್ಲಿ ಮಸೂದೆ ಕುರಿತು 4 ತಾಸುಗಳ ಚರ್ಚೆ ನಡೆದಿತ್ತು. ಕಾಲಾಪಾನಿ, ಲಿಪುಲೇಕ್‌, ಲಿಂಪಿಯಾ ಧುರಾಗಳನ್ನು ಸ್ವಾಧೀನಪಡಿಸಿಕೊಳ್ಳಲು ಯಾವೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂದು ಓಲಿ, ಪಕ್ಷದ ಸಂಸದರನ್ನು ಕೇಳಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ಗಡಿಯಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರಲು ಕಮ್ಯೂನಿಸ್ಟ್‌ ಪಾರ್ಟಿ ಆಫ್ ನೇಪಾಲ (ಮಾವೋವಾದಿ)ದ ಕೆಲವು ಸದಸ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಂದೇನು?
ಕೆಳಮನೆಯಲ್ಲಿ ಅಂಗೀಕೃತವಾದ ಈ ಮಸೂದೆ ಯನ್ನು ರಾಷ್ಟ್ರೀಯ ಅಸೆಂಬ್ಲಿಗೆ ಕಳುಹಿಸಲಾಗುತ್ತದೆ. ಮಸೂದೆಯ ನಿಬಂಧನೆಗಳ ವಿರುದ್ಧ ಏನಾದರೂ ತಿದ್ದುಪಡಿ ಸೂಚಿಸಲು ಅಸೆಂಬ್ಲಿ ಸದಸ್ಯರಿಗೆ 72 ತಾಸು ಕಾಲಾವಕಾಶವಿರುತ್ತದೆ. ಅಲ್ಲಿ ಅಂಗೀಕರಿಸ ಲ್ಪಟ್ಟ ಬಳಿಕ ರಾಷ್ಟ್ರಪತಿಗೆ ಸಲ್ಲಿಕೆಯಾಗುತ್ತದೆ. ನೇಪಾಲದ ಈ ನಡೆ ಆಕ್ಷೇಪಾರ್ಹವಾದುದು ಎಂದು ಭಾರತೀಯ ವಿದೇಶಾಂಗ ಖಾತೆ ಪ್ರತಿಕ್ರಿಯಿಸಿದೆ.

ನೇಪಾಲಕ್ಕೇ ಗೊಂದಲ
ಮೂರು ದಿನಗಳ ಹಿಂದಷ್ಟೇ ಓಲಿ ಸರಕಾರ ವಿವಾದಿತ ಪ್ರದೇಶಗಳ ಐತಿಹಾಸಿಕ ಸಂಗತಿ, ಪುರಾವೆ ಸಂಗ್ರಹಿಸಲು ತಜ್ಞರ ತಂಡ ನೇಮಿಸಿತ್ತು. ನಕ್ಷೆ ಬಿಡುಗಡೆಯ ಹಂತ ದಲ್ಲಿರುವಾಗ ಈ ತಂಡ ರಚಿಸುವ ಅಗತ್ಯ ಏನಿತ್ತು ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಪ್ರದೇಶಗಳು ತನ್ನದು ಎನ್ನಲು ಸ್ವತಃ ಓಲಿ ಸರಕಾರಕ್ಕೆ ಗೊಂದಲ ಇರುವುದು ಎದ್ದು ತೋರುತ್ತಿದೆ. ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮಾತುಕತೆ ಬಾಕಿ ಇರುವಾಗಲೇ ಓಲಿ ಸರಕಾರ ನಕ್ಷೆಗೆ ಅಧಿಕೃತ ಮುದ್ರೆ ಒತ್ತಿರುವುದು ಭಾರತ- ನೇಪಾಲ ಸಂಬಂಧ ಹದಗೆಡುವಂತೆ ಮಾಡಿದೆ.

Advertisement

“ಭಾರತ ಸಂಬಂಧ ಬಲಿಷ್ಠ’
ಒಂದೆಡೆ ನೇಪಾಲದ ವಿವಾದಿತ ನಕ್ಷೆಯ ತಗಾದೆ. ಇನ್ನೊಂದೆಡೆ ಬಿಹಾರದ ಗಡಿಯಲ್ಲಿ ನೇಪಾಲದ ಪೊಲೀಸ್‌ ಪಡೆಯಿಂದ ಭಾರತೀಯನ ಮೇಲೆ ಗುಂಡಿನ ದಾಳಿ. ಹೀಗಿದ್ದರೂ ಆ ಪುಟ್ಟ ರಾಷ್ಟ್ರವನ್ನು ದೂರ ತಳ್ಳದೆ ಭಾರತ ಹೃದಯ ವೈಶಾಲ್ಯ ಮೆರೆದಿದೆ.

“ನಾವು ನೇಪಾಲದೊಂದಿಗೆ ಭೌಗೋಳಿಕ, ಸಾಂಸ್ಕೃತಿಕ, ಧಾರ್ಮಿಕ ಸಂಬಂಧ ಹಂಚಿ ಕೊಂಡಿದ್ದೇವೆ. ನಮ್ಮ ಮತ್ತು ನೇಪಾಲದ ಸಂಬಂಧ ಬಲಿಷ್ಠವೇ ಆಗಿರುತ್ತದೆ. ಭವಿಷ್ಯ ದಲ್ಲಿ ಇನ್ನಷ್ಟು ಗಾಢ ಸಂಬಂಧವನ್ನು ಹೊಂದ ಲಿದ್ದೇವೆ’ ಎಂದು ಭೂಸೇನೆ ಮುಖ್ಯಸ್ಥ ಎಂ.ಎಂ. ನರವಾಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next