Advertisement

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

01:08 AM Sep 17, 2024 | Team Udayavani |

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಅಡಿ ಪದವಿ ವಿದ್ಯಾರ್ಥಿಗಳು ಆಯ್ಕೆ ಮಾಡಿದ ವಿಷಯಗಳಲ್ಲಿ ವೈರುಧ್ಯ ಇರುವುದರಿಂದ ಸ್ನಾತಕೋತ್ತರ ಪ್ರವೇಶ ವೇಳೆ”ವಿಷಯ ಆಯ್ಕೆ’ಯ ಇಕ್ಕಟ್ಟಿಗೆ ಸಿಲುಕು ವಂತಾಗಿದೆ. ಎನ್‌ಇಪಿಯಡಿ ಪದವಿ ವಿಷಯ ಆಯ್ಕೆ ಮಾಡುವ ಸಂದರ್ಭದಲ್ಲಿ ಪಿ.ಜಿ.ಯ ಸಾಧ್ಯಾಸಾಧ್ಯತೆ ಬಗ್ಗೆ ಮಾಹಿತಿ ಇಲ್ಲದೆ ಈ ಸಮಸ್ಯೆ ಎದುರಾಗಿದೆ.

Advertisement

ಎನ್‌ಇಪಿಗೆ ಮುನ್ನ ಪದವಿಯಲ್ಲಿ 3 ಐಚ್ಛಿಕ (ಮೇಜರ್‌) ವಿಷಯಗಳು ಇದ್ದು, ಈ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳು ಪಿ.ಜಿ.ಗೆ ಪ್ರವೇಶ ಪಡೆಯಬಹುದಿತ್ತು. ಆದರೆ ಎನ್‌ಇಪಿ ಬಂದ ಬಳಿಕ ಎರಡನ್ನು ಮಾತ್ರ “ಮೇಜರ್‌’ ಆಗಿ ಆಯ್ಕೆ ಮಾಡಿ, ಇನ್ನೊಂದನ್ನು ವಿದ್ಯಾರ್ಥಿಯ ಆಯ್ಕೆಗೆ ಬಿಡಲಾಗಿತ್ತು. ಈ ವೇಳೆ ತಮ್ಮ ಕೋರ್ಸ್‌ಗೆ ಸಂಬಂಧಪಡದ, ಆದರೆ ಆಸಕ್ತಿ ಇರುವ “ಪ್ರತ್ಯೇಕ ವಿಷಯ’ವನ್ನು ಆಯ್ಕೆ ಮಾಡಿ ಅಭ್ಯಸಿಸಿದ ಕಾರಣ ಈಗ ಪಿ.ಜಿ.ಗೆ ಬರುವಾಗ ವಿಷಯ ಆಯ್ಕೆ ಗೊಂದಲ ಸೃಷ್ಟಿಯಾಗಿದೆ. ಅತ್ತ “ಐಚ್ಛಿಕ’ ಆಧಾರಿತವಾಗಿಯೂ ಮುಂದುವರಿಯಲು ಆಗದೆ, ಇತ್ತ “ವಿಷಯ’ ಆಧಾರಿತವಾಗಿಯೂ ಮುಂದಿನ ಕಲಿಕೆ ನಡೆಸಲಾಗದ ಇಕ್ಕಟ್ಟಿನಲ್ಲಿದ್ದಾರೆ.

ಪಿ.ಜಿ. ಪ್ರವೇಶಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹಂತ ಹಂತವಾಗಿ ಕಡಿಮೆ ಆಗುತ್ತಿದೆ ಎಂಬ ಸಾಮಾನ್ಯ ಆರೋಪದ ಮಧ್ಯೆಯೇ ಈಗ ಎನ್‌ಇಪಿ ಅಡಿ ಪದವಿಯಲ್ಲಿ ಆಯ್ಕೆ ಮಾಡಿದ ವಿಷಯಕ್ಕೆ ಸರಿಹೊಂದುವ ಪಿ.ಜಿ. ಪ್ರವೇಶಾತಿ ಸಾಧ್ಯವಾಗದೆ ಈ ಬಾರಿಯೂ ಪಿ.ಜಿ. ಪ್ರವೇಶಕ್ಕೆ ಹೊಡೆತ ಎದುರಾಗಿದೆ. ಶೇ. 25ರಷ್ಟು ವಿದ್ಯಾರ್ಥಿಗಳಿಗೆ ಇದು ಗೊಂದಲ ಸೃಷ್ಟಿಸಿದೆ.

ವಿಭಾಗಗಳಿಗೂ ತೊಡಕು!
ಎನ್‌ಇಪಿ ಜಾರಿಗೆ ಮುನ್ನ 3 “ಮೇಜರ್‌’ ವಿಷಯಗಳು ಇದ್ದವು. ಉದಾಹರಣೆಗೆ, ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ ಇದ್ದವು. ಸಿಬಿಝಡ್‌ನ‌ಲ್ಲಿ ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಇದ್ದವು. ಪಿಸಿಎಂನಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಇದ್ದವು. ಆದರೆ ಎನ್‌ಇಪಿ ಬಂದ ಮೇಲೆ 2 ವಿಷಯಗಳನ್ನು “ಮೇಜರ್‌’ ಆಗಿ ಕೊಟ್ಟು, ಮತ್ತೂಂದನ್ನು ವಿದ್ಯಾರ್ಥಿಗಳ ಆಸಕ್ತಿಯ ವಿಷಯವಾಗಿ ಆಯ್ಕೆ ಮಾಡಲು ಅವಕಾಶ ನೀಡಲಾಗಿತ್ತು. ಹೀಗಾಗಿ ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ ತೆಗೆದುಕೊಂಡವರು ರಾಜಕೀಯ ಶಾಸ್ತ್ರ ಆಯ್ಕೆ ಮಾಡಿಲ್ಲ ಅಥವಾ ಅರ್ಥಶಾಸ್ತ್ರ, ಇತಿಹಾಸ ಕೈಬಿಟ್ಟದ್ದೂ ಇದೆ. ಹೀಗಾಗಿ ಕೆಲವು ವಿಭಾಗಕ್ಕೆ ಮಕ್ಕಳೇ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.

ಶಿಕ್ಷಣ ತಜ್ಞ ರಾಜಶೇಖರ ಹೆಬ್ಬಾರ್‌ ಅವರ ಪ್ರಕಾರ, “ಎನ್‌ಇಪಿಯಡಿ ಕಲಿತ ವಿದ್ಯಾರ್ಥಿಗಳು ಅದೇ ಸೆಟ್‌ನ ಕಲಿಕೆಯನ್ನು ಪಿ.ಜಿ.ಯಲ್ಲಿಯೂ ಮುಂದುವರಿಸಬೇಕಾಗುತ್ತದೆ. ಇಲ್ಲದಿದ್ದರೆ ಗೊಂದಲ ಆಗಬಹುದು. ವಿಶೇಷವಾಗಿ ಕಲಾ ವಿಭಾಗ ಹಾಗೂ ವಿಜ್ಞಾನ ವಿಭಾಗದಲ್ಲಿ ಸಮಸ್ಯೆ ಆಗಬಹುದು. ಹೆಚ್ಚುವರಿಯಾಗಿ ತೆಗೆದುಕೊಂಡ ವಿಷಯದಲ್ಲಿ ಪಿಜಿ ಪ್ರವೇಶವೂ ಕಷ್ಟವಾಗಬಹುದು.’

Advertisement

ಏನಿದು ಸಮಸ್ಯೆ?
ವಿದ್ಯಾರ್ಥಿಗಳು ಪದವಿಯಲ್ಲಿ ಇತಿ ಹಾಸ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ ಆಯ್ಕೆ ಸಾಧ್ಯತೆ ಇದ್ದರೂ ಎನ್‌ಇಪಿ ಸಂದರ್ಭ ಎರಡನ್ನು ಮೇಜರ್‌ ಆಗಿ ಆಯ್ದುಕೊಂಡು ಮತ್ತೂಂದನ್ನು ತಮ್ಮ ಆಯ್ಕೆಯಂತೆ ಓದಿದ್ದರು. ಉದಾಹರಣೆಗೆ, ಇತಿಹಾಸ, ಅರ್ಥಶಾಸ್ತ್ರ ತೆಗೆದುಕೊಂಡ ವಿದ್ಯಾರ್ಥಿ ರಾಜಕೀಯ ಶಾಸ್ತ್ರದ ಬದಲು ತನ್ನ ಆಸಕ್ತಿಯಾಗಿ ಕೆಮೆಸ್ಟ್ರಿ ತೆಗೆದುಕೊಂಡಿ ದ್ದರೆ ಪಿ.ಜಿ.ಗೆ ಬರುವಾಗ ರಾಜಕೀಯ ಶಾಸ್ತ್ರ ವಿಭಾಗಕ್ಕೆ ವಿದ್ಯಾರ್ಥಿಯ ಕೊರತೆ ಎದುರಾಗುತ್ತದೆ. ಇತ್ತ ಆ ವಿದ್ಯಾರ್ಥಿಗೆ ರಾಜ ಕೀಯ ಶಾಸ್ತ್ರದಲ್ಲಿ ಎಂಎ ಮಾಡಲು ಆಗುವುದಿಲ್ಲ. ಅತ್ತ ಕೆಮೆಸ್ಟ್ರಿಗೂ ಹೋಗುವಂತಿಲ್ಲ. ಇದು ಒಂದು ವಿಭಾಗದಲ್ಲಿ ಅಲ್ಲ, ವಿವಿಧ ವಿಭಾಗಗಳಲ್ಲಿ ಆಗಿರುವ ಸಮಸ್ಯೆ.

ಪಿ.ಜಿ.ಯ ಕೆಲವು ವಿಭಾಗಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಎನ್‌ಇಪಿಯಲ್ಲಿ ತೆಗೆದು ಕೊಂಡ ವಿಷಯಗಳ ಕಾರಣ ಈ ಸಮಸ್ಯೆ ಉಂಟಾಗಿದೆ. ಇದಕ್ಕಾಗಿ ಪ್ರವೇಶ ಪ್ರಕ್ರಿಯೆಯಲ್ಲಿ ಕೊಂಚ ಸಡಿಲಿಕೆ ನಿಯಮ ಪಾಲಿಸಲಾಗಿದೆ. ಪ್ರವೇಶ ದಿನಾಂಕವನ್ನೂ ವಿಸ್ತರಿಸಲಾಗಿದೆ.
-ಪ್ರೊ| ಪಿ.ಎಲ್‌. ಧರ್ಮ, ಕುಲಪತಿ, ಮಂಗಳೂರು ವಿ.ವಿ.

- ದಿನೇಶ್‌ ಇರಾ

 

Advertisement

Udayavani is now on Telegram. Click here to join our channel and stay updated with the latest news.