Advertisement

ಎನ್‌ಇಪಿ ಜಾರಿಯಿಂದ ಶೈಕ್ಷಣಿಕ ಕ್ರಾಂತಿ

10:40 AM Oct 13, 2021 | Team Udayavani |

ಬೆಂಗಳೂರು: ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಿಂದ ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣದಲ್ಲಿ ದೊಡ್ಡ ಪ್ರಮಾಣದ ಕ್ರಾಂತಿ ಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಕರ್ನಾಟಕ ಖಾಸಗಿ ಅನುದಾನರಹಿತ ಎಂಜಿನಿಯರಿಂಗ್‌ ಕಾಲೇಜುಗಳ ಸಂಘದಿಂದ ವಿಧಾನಸೌಧದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಭಾಗವಾಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮ, ಬಿ.ಎಸ್ಸಿ ಆನರ್ಸ್‌ ಕೋರ್ಸ್‌, ಪಠ್ಯಕ್ರಮ, ತಾಂತ್ರಿಕ ಶಿಕ್ಷಣಕ್ಕಾಗಿ ಕರ್ನಾಟಕ ನೆಚ್ಚಿನ ತಾಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಎಷ್ಟೇ ಉತ್ತಮ ತಂತ್ರಜ್ಞಾನ ಬಂದರೂ, ಅದರ ದುರುಪಯೋಗ ಮಾಡಿಕೊಳ್ಳುವವರು ಇದ್ದಾರೆ. ಹ್ಯಾಕರ್‌ ಗಳಿಂದ ವ್ಯವಸ್ಥೆ ಹಾಳಾಗುತ್ತದೆ.

Advertisement

ಹೀಗಾಗಿ ನಮ್ಮ ಡಿಜಿಟಲ್‌ ಮಾಹಿತಿಯನ್ನು ಸುಳಿಸುವ ಸುರಕ್ಷಿತ ತಂತ್ರಜ್ಞಾನ ಬರ ಬೇಕು ಮತ್ತು ನೈತಿಕ ತಾಂತ್ರಿಕತೆಯನ್ನು ಉಳಿಸಿ, ಬೆಳೆಸ ಬೇಕು. ತಂತ್ರಜ್ಞಾನ ಆಧಾರಿತ ಸಮಾಜ ನಿರ್ಮಾಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು ಎಂದರು.ಎಂಜಿನಿಯರಿಂಗ್‌ ಶಿಕ್ಷಣದಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಹಕಾರವನ್ನು ಸರ್ಕಾರ ನೀಡಲಿದೆ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಜತೆಯಾಗಿ ಕೆಲಸ ಮಾಡಿದಾಗ ಮಾತ್ರ ಎನ್‌ಇಪಿ ಯಶಸ್ವಿ ಅನುಷ್ಠಾನ ಸಾಧ್ಯವಿದೆ. ಎನ್‌ಇಪಿ ಅನುಷ್ಠಾನದಿಂದ ಶಿಕ್ಷಣದ ಎಲ್ಲ ಹಂತದಲ್ಲೂ ಬದಲಾವಣೆ ಆಗಲಿದೆ.

ಇದನ್ನೂ ಓದಿ:- ಮಹಾಲಕ್ಷ್ಮಿ ಲೇಔಟ್ :  ಭಾರೀ ಮಳೆಗೆ ಕುಸಿಯುವ ಹಂತದಲ್ಲಿ 3 ಅಂತಸ್ತಿನ ಮಹಡಿ : ಗೋಪಾಲಯ್ಯ ಭೇಟಿ

ಇದರ ಮೊದಲ ಭಾಗವಾಗಿ ಶಿಕ್ಷಕರ ಅಥವಾ ಉಪನ್ಯಾಸಕರ ಮಾನಸಿಕತೆಯಲ್ಲಿ ಬದಲಾವಣೆ ಆಗಬೇಕು. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಯನ್ನು ತುಂಬುವ ಕಾರ್ಯ ಆರಂಭವಾಗಬೇಕು ಎಂದರು. ನಮ್ಮಲ್ಲಿ ಪರ್ಸೆಂಟೇಜ್‌ ನೀಡುವ ವ್ಯವಸ್ಥೆಯಿದೆ.

ಇದು ಬದಲಾಗಿ ಪರ್ಸೆಂಟೈಲ್‌ ನೀಡುವ ವ್ಯವಸ್ಥೆ ಬರಬೇಕು. ಬದಲಾವಣೆಗೆ ಒಗ್ಗಿಕೊಳ್ಳಬೇಕು. ಇಲ್ಲವಾದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ. ಈಗ ಆ್ಯಪ್‌ ಮತ್ತು ತರಗತಿ ಕೊಠಡಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ತರಗತಿ ಕೊಠಡಿಯಲ್ಲಿ ಸಿಗುವ ಶಿಕ್ಷಣ ಆ್ಯಪ್‌ ಮೂಲಕ ಸಿಗುತ್ತಿದೆ. ಈ ನಿಟ್ಟಿನಲ್ಲಿ ತರಗತಿ ಕೊಠಡಿಗಳನ್ನು ಉನ್ನತೀಕರಿಸುವ ವ್ಯವಸ್ಥೆಯೂ ಆಗಬೇಕು. ದೇಶದ ಏಳ್ಗೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಮಾತನಾಡಿ, ಶಿಕ್ಷಣ ಗುಣಮಟ್ಟ ಸುಧಾರಣೆಯ ನಿಟ್ಟಿನಲ್ಲಿ ಹಾಗೂ ಉದ್ಯೋಗಾವಕಾಶ ಕಲ್ಪಿಸಲು ಶಿಕ್ಷಣ ಸಂಸ್ಥೆಗಳ ಜತೆಗೆ ಕೈಗಾರಿಕೆಗಳನ್ನು ಜೋಡಿಸುವ ಕಾರ್ಯ ಆಗುತ್ತಿದೆ. ತಾಂತ್ರಿಕ ಶಿಕ್ಷಣದ ಪಠ್ಯಕ್ರಮವನ್ನು ಉನ್ನತೀಕರಿಸುವ ಕಾರ್ಯ ನಡೆಯುತ್ತಿದೆ.

ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಲು ಬೇಕಾದ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲ ಪತಿ ಡಾ.ಕರಿಸಿದ್ಧಪ್ಪ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚು ವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್‌ ನಾಯಕ್‌, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌, ಬಾಷ್‌ ಕಂಪನಿಯ ಜನರಲ್‌ ಮ್ಯಾನೇಜರ್‌ ದತ್ತಾತ್ರೇಯ ಸಾಲಗಾಮೆ, ಕರ್ನಾಟಕ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘದ ಪಾಂಡುರಂಗ ಶೆಟ್ಟಿ, ಮಂಜುನಾಥ ಭಂಡಾರಿ, ವಿಧಾನ ಪರಿಷತ್‌ ಸದಸ್ಯ ಸಶೀಲ್‌ ನಮೋಸಿ ಇದ್ದರು.

ಎನ್‌ಇಪಿ ಗೀತೆ ಬಿಡುಗಡೆ ರಾಷ್ಟ್ರೀಯ ಶಿಕ್ಷಣ ನೀತಿ ಗೀತೆಯಾದ “ಜಯ ವಾಗಲಿ ಶಿಕ್ಷಣಕೆ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿ ದರು. ಧಾರವಾಡದ ಉನ್ನತ ಶಿಕ್ಷಣ ಪರಿಷತ್ತಿನ ನಿರ್ದೇಶಕ ಪ್ರೊ.ಎಸ್‌.ಎಂ.ಶಿವಪ್ರಸಾದ್‌ ರಚಿಸಿರುವ ಈ ಗೀತೆಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎನ್‌ಇಪಿ ಆಶಯಗಳನ್ನು ಸಾರುವ ಈ ಗೀತೆಯನ್ನು ಹೊಂಬಾಳೆ ಫಿಲಂಸ್‌ ಸಂಸ್ಥೆಯ ಮಾಲೀಕ ವಿಜಯ್‌ ಕಿರಗಂದೂರು ಅವರು ಉಚಿತವಾಗಿ ನಿರ್ಮಿಸಿ ಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next