ಪಡುಬಿದ್ರಿ: ಹೆಜಮಾಡಿಯ ನವಯುಗ ಟೋಲ್ ಪ್ಲಾಝಾದಲ್ಲಿ ಪಡುಬಿದ್ರಿ ಸುತ್ತಮುತ್ತಲಿನ ಸ್ಥಳೀಯ ವಾಹನಗಳಿಗೆ ಮತ್ತೆ ಟೋಲ್ ವಸೂಲಿಗೆ ತಗಾದೆ ಎಬ್ಬಿಸಿ ಸ್ಥಳೀಯ ವಾಹನ ಮಾಲಕರ ವಿರೋಧದಿಂದಾಗಿ ತತ್ಕಾಲಕ್ಕೆ ತೆಪ್ಪಗಿದೆ.
ತನ್ನೊಳಗೇ ಸಮಸ್ಯೆಗಳು ಹಲವಾರಿದ್ದರೂ ಯಾವುದನ್ನೂ ಸರಿಪಡಿಸಿಕೊಳ್ಳದಿರುವ ನವಯುಗ ಕಂಪೆನಿಯು ಟೋಲ್ ಪ್ಲಾಝಾದ ಮೂಲಕ ಜನರ ಸುಲಿಗೆಗೆ ಇಳಿದಿರುವುದು ಅಕ್ಷಮ್ಯ ಅಪರಾಧ ಎಂಬುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.
ಹೆಜಮಾಡಿಯ ಟೋಲ್‌ಗೇಟ್ ಬಳಿಯಲ್ಲೇ ಹೆಜಮಾಡಿ ಗ್ರಾಮದಲ್ಲಿನ ಸರಕಾರಿ ಶಾಲೆಗಳಿಗೆ ಹಾಗೂ ಖಾಸಗಿ ಶಾಲೆಯೊಂದಕ್ಕೂ ಹೋಗುವ ಶಾಲಾ ವಿದ್ಯಾರ್ಥಿಗಳ ದಿನನಿತ್ಯದ ಪರಿ ಹೇಳಲಾಗದು. ಪ್ರತಿದಿನ ಹಿರಿಯರೇ ಈ ಮಕ್ಕಳನ್ನು ಹೆದ್ದಾರಿ ದಾಟಿಸಿ ಬಿಟ್ಟು ಬರುವಂತಾಗಿದೆ. ಇಲ್ಲಿ ಮಕ್ಕಳು ಹಾಗೂ ಹಿರಿಯ ನಾಗರಿಕರು ಮತ್ತು ಸ್ಥಳೀಯರಿಗಾಗಿ ಸ್ಕೈವಾಕ್ ನಿರ್ಮಾಣಕ್ಕೆ ಕಂಪೆನಿ ಮೂಲಕವಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ರವಾನಿಸಿ ವರ್ಷಗಳೇ ಕಳೆದಿದೆ. ಇದುವರೆಗೂ ಯಾವುದೂ ಕಾರ್ಯರೂಪಕ್ಕಿಳಿದಿಲ್ಲ.
ಹೆಜಮಾಡಿ ಗ್ರಾಮದ ಒಳ ಪ್ರವೇಶಿಸುವಲ್ಲಿಗೆ ಗ್ರಾಮದ ಉತ್ತರ ಭಾಗದಿಂದ ಸರ್ವಿಸ್ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನವೂ ಆಗಿದ್ದು ಕೆಲಸಕಾರ್ಯಗಳಾವುವೂ ನಡೆದಿಲ್ಲ. ಇದನ್ನೂ ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದಾಗಿ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ವಿಜಯ್ ಸಾಮ್ಸ್‌ನ್‌ಕೂಡಾ ಜನತೆಗೆ ಆಶ್ವಾಸನೆಯಿತ್ತಿದ್ದರು. ಅದೂ ಇದುವರೆಗೂ ಆಗಿಲ್ಲ.
ಪಡುಬಿದ್ರಿಯ ಎರಡೂ ಭಾಗದ ಸರ್ವಿಸ್ ರಸ್ತೆ, ಒಳಚರಂಡಿ ಕಾಮಗಾರಿ, ಕಾರ್ಕಳ ರಾಜ್ಯ ಹೆದ್ದಾರಿ ಸೇರುವಲ್ಲಿಯ ಪ್ರದೇಶದಲ್ಲಿ ಸಿಗ್ನಲ್ ಲೈಟ್ ಅಳವಡಿಕೆಗಳು ಯಾವುದೂ ಪೂರ್ಣಗೊಳ್ಳದೇ ಕೇವಲ ಟೋಲ್ ವಸೂಲಿಗೆ ಮತ್ತೆ ಮುಂದಾಗುತ್ತಿರುವ ಕಂಪೆನಿ ವಿರುದ್ಧ ರಾಜ್ಯ ಸರಕಾರವೇ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಬೇಕಾದ ಅನಿವಾರ್ಯತೆಯಿದೆ. ಕೇವಲ ಕೇಂದ್ರ ಸಾರಿಗೆ ಮಂತ್ರಾಲಯದ ಆದೇಶವೊಂದನ್ನು ಕೈಯಲ್ಲಿ ಇಟ್ಟುಕೊಂಡು ಎಲ್ಲರಿಂದಲೂ ಸುಲಿಗೆಗೆ ಮುಂದಾಗಿರುವ ನವಯುಗ ನಿರ್ಮಾಣ ಕಂಪೆನಿ ವಿರುದ್ಧ ನ್ಯಾಯಾಂಗ ಹೋರಾಟಕ್ಕೆ ಸ್ಥಳೀಯ ಶಾಸಕರು, ಸಂಸದರು ಮುಂದಾಗಬೇಕಿದೆ.
ಇಂದಿನ ಸಭೆ ಮುಂದಕ್ಕೆ
ನವಯುಗ ನಿರ್ಮಾಣ ಕಂಪೆನಿ ಸ್ಥಳೀಯ ವಾಹನಗಳಿಗೂ ಸುಂಕ ವಸೂಲಿಗೆ ಮುಂದಾದಾಗ ಸ್ಥಳೀಯರ ವಿರೋಧದಿಂದಾಗಿ ಅದನ್ನು ನವಯುಗ ಕಂಪೆನಿ ಅಲ್ಲಿಗೇ ತಡೆಹಿಡಿದಿಟ್ಟಿತು. ಶುಕ್ರವಾರ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಸಭೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ ಪಡುಬಿದ್ರಿ ಪಿಎಸ್‌ಐ ರಜೆಯಲ್ಲಿರುವುದರಿಂದ ಇದನ್ನು ಮುಂದೂಡಲಾಯಿತು. ಅದುವರೆಗೂ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ತೀರ್ಮಾನಿಸಲಾಗಿದೆ.