ಎಲ್ಲರಿಗೂ ಕೈವಾರ ಅನ್ನೋ ಒಂದು ಗಣಿತದ ಉಪಕರಣ ನೆನಪಿರಲೇಬೇಕು. ಕಂಪಾಸ್ ಬಾಕ್ಸಿನಲ್ಲಿ ಕೈವಾರ ಇದ್ದರೇನೇ ಕಂಪಾಸ್‌ಗೊಂದು ಶೋಭೆ ಆಗೆಲ್ಲಾ. ಕೈವಾರ ಗಣಿತ ಕ್ಲಾಸಲ್ಲಿ ಬಳಸುವ ಒಂದು ಗಣಿತೋಪಕರಣವಾಗಿಯಂತೂ ಉಳಿದಿಲ್ಲ. ಕೈವಾರ ನನ್ನ ಬಾಲ್ಯದ ನೆನಪು. ನನ್ನದಷ್ಟೇ ಅಲ್ಲ, ಅದೆಷ್ಟೋ ಜನರ ಬಾಲ್ಯವೂ ಹೌದು. ಆ ಕೈವಾರವನ್ನು ಯಾರೋ ಕೂರುವಾಗ ಅದರ ಸೂಜಿಯನ್ನು ನೆಟ್ಟಗೆ ಹಿಡಿದು ಗಾಯ ಮಾಡಿದ ಅಪರಾಧದಲ್ಲಿ ಬಾಗಿಯಾದವರು ನಿಮ್ಮ ಮಧ್ಯೆ ಇರಬಹುದು. ಅದೇ ಥರದ್ದೊಂದು ಬೇಜಾರಿನ ಸಂಗತಿ ನಮ್ಮ ಬದುಕಲ್ಲೂ ಇದೆ.
ನಾನು ನನ್ನೂರಿನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದೆ. ಅಲ್ಲಿ ನಾವು ಇದ್ದದ್ದು ಕೇವಲ ಏಳು ವಿದ್ಯಾರ್ಥಿಗಳು ಮಾತ್ರ. ನಾವು ಬಹಳ ಹೊಂದಾಣಿಕೆಯಿಂದ ಯಾವಾಗಲೂ ಸಂತೋಷದಿಂದ ಇರುತ್ತಿದ್ದೆವು. ಆದರೆ ಒಂದು ದಿನ ನಾನು ನನ್ನ ಗೆಳೆಯ ಬಿಸಿ ಊಟಕ್ಕೆ ಎಣ್ಣೆಯನ್ನು ಹೊರಗಡೆ ಕಂಬದ ಹತ್ತಿರ ನೀಡುತ್ತಿದ್ದೆವು. ಸುಮಾರು ಹೊತ್ತಿಂದ ಅಲ್ಲೇ ಕೆಲಸ ಮಾಡುತ್ತಿದ್ದುದರಿಂದ ಒಳಗೆ ಹೋಗಿರಲಿಲ್ಲ. ಆಗಲೇ ಒಬ್ಬ ಹುಡುಗ ಜೋರಾಗಿ ಬೊಬ್ಬೆ ಹೊಡೆದ. ನಾವೆಲ್ಲಾ ಗಾಬರಿಗೊಂಡು ಒಳಗೆ ಓಡಿ ಹೋದೆವು.
ಒಳಗೆ ಹೋಗಿ ನೋಡಿದರೆ ನನ್ನ ಸ್ನೇಹಿತ ಜೋರಾಗಿ ಅಳುತ್ತಿದ್ದ. ಆಗ ನನ್ನ ಶಾಲೆಯಲ್ಲಿದ್ದ ಎಲ್ಲಾ ಶಿಕ್ಷಕರು ಓಡೋಡಿ ಬಂದರು. ನಾವೆಲ್ಲರೂ ಆತಂಕದಿಂದ ನೋಡುತ್ತಿದ್ದೆವು. ಅಲ್ಲಿ ಏನಾಗಿತ್ತು ಅಂದರೆ ನನ್ನ ಮತ್ತೂಬ್ಬ ಸ್ನೇತ ಹಾಗೂ ಮತ್ತೂಬ್ಬಳು ಸ್ನೇಹಿತೆ ಇಬ್ಬರೂ ಸೇರಿಕೊಂಡು ಅವನು ನಿಂತುಕೊಂಡಿದ್ದಾಗ ಅವನು ಕುಳಿತು ಕೊಳ್ಳುವ ಜಾಗಕ್ಕೆ ನೇರವಾಗಿ ಕೈವಾರ ಇಟ್ಟಿದ್ದರು. ಅದು ಅವನ ಹಿಂಭಾಗಕ್ಕೆ ಚುಚ್ಚಿಕೊಂಡಿತ್ತು. ಚುಚ್ಚಿಕೊಂಡಿದ್ದೇ ತಡ ಜೋರಾಗಿ ಚೀರುತ್ತಾ ಗಟ್ಟಿಯಾಗಿ ಅಳಲಾರಂಭಿಸಿದ್ದ. ಅದನ್ನು ನೋಡಿದವರಿಗೆಲ್ಲಾ ಅಳುವುದೋ ಬಿಡುವುದೋ ಗೊತ್ತಾಗುತ್ತಿರಲಿಲ್ಲ.
ನಂತರ ಶಿಕ್ಷಕರು ಆ ಇಬ್ಬರನ್ನು ಕಚೇರಿಗೆ ಕರೆದುಕೊಂಡು ಹೋಗಿ ಚೆನ್ನಾಗಿ ಬಾರಿಸಿದರು. ಇನ್ನೊಂದು ಸಲ ಹೀಗೇನಾದರೂ ಮಾಡಿದರೆ ಟಿಸಿ ಕೊಡುತ್ತೇವೆ ಅಂತ ಬೆದರಿಸಿ ಕಳಿಸಿದರು. ವಿಪರ್ಯಾಸ ಏನೆಂದರೆ ಅವರು ಅಲ್ಲಿಂದ ಹೊರ ಬಂದು ತರಗತಿ ಸೇರಿ ಬಿದ್ದು ಬಿದ್ದು ನಗತೊಡಗಿದರು. ಅವರನ್ನು ನೋಡಿ ಎಲ್ಲರೂ ನಕ್ಕರು. ನಾನೂ ಅದನ್ನು ನೆನೆದು ನೆನೆದು ತುಂಬಾ ನಕ್ಕು ಸುಸ್ತಾದೆ. ಆದರೆ ಆತನಿಗೆ ಮಾತ್ರ ತುಂಬಾ ನೋವಾಗಿತ್ತು. ನಾವು ನಗುವುದು ನೋಡಿ ಜಾಸ್ತಿ ನೋವಾಗಿತ್ತು.
ಕೆಲವು ದಿನಗಳ ಮೇಲೆ ನಾವೆಲ್ಲಾ ಮತ್ತೆ ಫ್ರೆಂಡ್ಸ್ ಆದ್ವಿ. ಈಗ ಅದನ್ನೆಲ್ಲಾ ನೆನೆದರೆ ಮುಖದಲ್ಲೊಂದು ನಗು ಹಾದು ಹೋಗುತ್ತದೆ.
– ಭರತ ಡಿ.ಎಸ್.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.