ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರು ಸ್ವಗ್ರಾಮ. ಈ ಗ್ರಾಮದವರೀಗ ಇಬ್ಬರು ವಿಧಾನಸಭೆ ಸದಸ್ಯರು.
ಧರ್ಮಸಿಂಗ್ ಪುತ್ರ ಡಾ. ಅಜಯಸಿಂಗ್ ಹ್ಯಾಟ್ರಿಕ್ ಸಾಧನೆಯೊಂದಿಗೆ ವಿಧಾನಸಭೆ ಪ್ರವೇಶಿಸಿದ್ದು, ಅದೇ ರೀತಿ ಇದೇ ನೆಲೋಗಿ ಗ್ರಾಮದ ಧರ್ಮಸಿಂಗ್ ಪರಮಾಪ್ತ ಅಲ್ಲಮಪ್ರಭು ಪಾಟೀಲ್ ಕಲಬುರಗಿ ದಕ್ಷಿಣ ಮತಕ್ಷೇತ್ರದಿಂದ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಅಜಯ ಸಿಂಗ್ ಸತತ ಮೂರನೇ ಗೆಲುವು ಸಾಧಿಸಿ ತಂದೆಯಂತೆ ಗೆಲುವಿನಲ್ಲಿ ಅಜೇಯರಾಗಿ ಮುಂದುವರೆದಿದ್ದಾರೆ. ಅಲ್ಲಮಪ್ರಭು ಪಾಟೀಲ್ ಕಳೆದ ಸಲ ಇದೇ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಈ ಸಲ ಬಿಜೆಪಿಯ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು 21 ಸಾವಿರ ಮತಗಳ ಅಂತರದಿಂದ ಸೋಲಿಸಿ ಶಾಸಕರಾಗಿ ಚುನಾಯಿತರಾಗಿದ್ದಾರೆ. ಈ ಮೂಲಕ ನೇಲೋಗಿ ಗ್ರಾಮದ ಇಬ್ಬರು ಶಾಸಕರಾಗುವಂತಾಗಿದೆ.
ಸೋತ ಅಣ್ಣ- ಗೆದ್ದ ತಮ್ಮ
ಈ ಹಿಂದೆ ಡಾ. ಅಜಯಸಿಂಗ್ ಸಹೋದರ ವಿಜಯಸಿಂಗ್ ಬೀದರ್ ಜಿಲ್ಲೆಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ವರ್ಷದ ಹಿಂದೆ ಅವಧಿ ಮುಗಿದ ನಂತರ ಮತ್ತೆ ಸ್ಪರ್ಧಿಸಲಿಲ್ಲ. ಆದರೆ ವಿಧಾನಸಭಾ ಸದಸ್ಯರಾಗಬೇಕೆಂಬ ಹಿನ್ನೆಲೆಯಲ್ಲಿ ಬಸವ ಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಎದುರು ಪರಾಭವಗೊಂಡರು. ಒಂದು ವೇಳೆ ಗೆದ್ದಿದ್ದರೇ ಒಂದೇ ಊರಿನ ಮೂವರು ಶಾಸಕರಾಗುತ್ತಿದ್ದರು.
ಒಟ್ಟಾರೆ ಅಣ್ಣ ವಿಜಯಸಿಂಗ್ ಚುನಾವಣೆಯಲ್ಲಿ ಸೋತರೆ ಸಹೋದರ (ತಮ್ಮ) ಡಾ. ಅಜಯಸಿಂಗ್ ಗೆಲುವು ಸಾಧಿಸಿದ್ದಾರೆ. ಇವರ ಅಳಿಯ ಚಂದ್ರಾಸಿಂಗ್ ಬೀದರ್ ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.
ಒಂದೇ ಮನೆಯಲ್ಲಿ ಸಹೋದರಿಬ್ಬರು ಶಾಸಕರಾಗಿರುವುದು ಸಹಜ. ಆದರೆ ಒಂದೇ ಊರಿನ ಇಬ್ಬರು ಶಾಸಕರಾಗುವುದು ಸ್ವಲ್ಪ ಅಪರೂಪವೇ ಸರಿ.