Advertisement

ಅನರ್ಹ ಬಿಪಿಎಲ್‌ ಕಾರ್ಡ್‌: ಕ್ರಿಮಿನಲ್‌ ಕೇಸು

01:43 AM Oct 17, 2019 | mahesh |

ಮಂಗಳೂರು: ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ಸುಳ್ಳು ಮಾಹಿತಿ ನೀಡಿ ಪಡೆದು ಸರಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಐಪಿಸಿ 420 ಅಡಿ ಕ್ರಿಮಿನಲ್‌ ಕೇಸು ದಾಖಲಿಸಲು ರಾಜ್ಯ ಸರಕಾರದ ಕಂದಾಯ ಪ್ರಧಾನ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಸೂಚಿಸಿದ್ದಾರೆ.

Advertisement

ಜಿಲ್ಲಾ ಪಂಚಾಯತ್‌ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆರೆ ಸಂತ್ರಸ್ತರ ಪುನರ್ವಸತಿ
ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಗಳು, ಬೆಳ್ತಂಗಡಿ ತಾಲೂಕಿನ ಕೆಲವೆಡೆ ಸಂತ್ರಸ್ತರ ಮನೆ ಪುನರ್‌ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಕರಾರು ಎತ್ತಿರುವುದಕ್ಕೆ ಅಸಮಾಧಾನ ಸೂಚಿಸಿ ದರು. ಸಂತ್ರಸ್ತರ ಬದುಕು ಕಟ್ಟುವಲ್ಲಿ ಸರಕಾರ ನಿರಂತರವಾಗಿ ತೊಡಗಿಸಿದ್ದು, ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ನೆರೆ ಹಾವಳಿಯಲ್ಲಿ ಫಲಾನುಭವಿಗಳಿಗೆ ಆದಷ್ಟು ಬೇಗ ಪರಿಹಾರ ದೊರಕುವಂತೆ ಕಾರ್ಯ ನಿರ್ವಹಿಸಬೇಕು ಎಂದರು. ಪಿಂಚಣಿದಾರರಿಗೆ ತಾಂತ್ರಿಕ ಸಮಸ್ಯೆಗಳಿಂದ ಪಿಂಚಣಿ ಸರಿಯಾಗಿ ದೊರಕದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇವುಗಳನ್ನು ತ್ವರಿತವಾಗಿ ಪರಿಹರಿಸಿ ಕ್ಲಪ್ತವಾಗಿ ಪಿಂಚಣಿ ದೊರಕಿಸಿಕೊಡುವಂತೆ ತಿಳಿಸಿದರು.

ಪ್ರತಿಯೊಂದು ಗ್ರಾಮದಲ್ಲಿ ರುದ್ರ
ಭೂಮಿ ಕಡ್ಡಾಯವಾಗಿ ಇರಬೇಕು, ಇಲ್ಲದ್ದಿದ್ದ ಪಕ್ಷದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಜಾಗವನ್ನು ಗುರುತಿಸಿ ರುದ್ರಭೂಮಿ ನಿರ್ಮಾಣ ಮಾಡುವಂತೆ ಆದೇಶ ನೀಡಿದರು. ಕೃಷಿ ಹಾಗೂ ತೋಟಗಾರಿಕಾ ಬೆಳೆಹಾನಿಗೊಂಡವರಿಗೆ ಸಕಾಲಕ್ಕೆ ವಿಮಾ ಹಣ ದೊರಕದಿರುವ ಬಗ್ಗೆ ವಿಮಾ ಕಂಪೆನಿಗಳ ಅಧಿಕಾರಿಗಳೊಂದಿಗೆ ಕೂಡಲೇ
ಚರ್ಚಿಸಲು ಸೂಚಿಸಿದರು.

ಮಂದಾರ ಪುನರ್ವಸತಿಗೆ 20 ಕೋಟಿ ರೂ. ಅಗತ್ಯ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌
ಮಾತನಾಡಿ, ಮನಪಾ ವ್ಯಾಪ್ತಿಯ ಪಚ್ಚನಾಡಿಯಲ್ಲಿ ತ್ಯಾಜ್ಯ ಕುಸಿತದಿಂದ ಮಂದಾರ ಪ್ರದೇಶದ ಸಂತ್ರಸ್ತರ ಪುನರ್ವಸತಿಗೆ ಸುಮಾರು 20 ಕೋಟಿ ರೂ. ಅಗತ್ಯವಿದೆ. ರಾಜ್ಯ ಸರಕಾರದಿಂದ ನೇಮಕ  ಗೊಂಡ ತಜ್ಞರ ಸಮಿತಿ ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬಯೋ ಮೈನಿಂಗ್‌ ಮೂಲಕ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಅದಕ್ಕೆ 50 ಕೋಟಿ ರೂ. ಅಗತ್ಯವಿದೆ ಎಂದರು.

ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸಂತೋಷ್‌ ಕುಮಾರ್‌ ಮಾತನಾಡಿ, ತುಂಬೆ ವೆಂಟೆಡ್‌ ಡ್ಯಾಂಗೆ ಹೊಂದಿಕೊಂಡ ನದಿ ಬದಿಯಲ್ಲಿ ತಡೆಗೋಡೆ ಇತ್ತೀಚೆಗೆ ಪ್ರವಾಹದಲ್ಲಿ ಕುಸಿದುಬಿದ್ದಿದ್ದು, ಇದರ ಪುನರ್‌ ನಿರ್ಮಾಣಕ್ಕೆ 8 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಹೇಳಿದರು. ಜಿ.ಪಂ. ಸಿಇಒ ಡಾ| ಆರ್‌. ಸೆಲ್ವಮಣಿ, ತರಬೇತಿ ಐಎಎಸ್‌ ಅಧಿಕಾರಿ ರಾಹುಲ್‌ ಸಿಂಧ್ಯಾ, ಡಿಸಿಪಿ ಅರುಣಾಂಶು ಗಿರಿ ಉಪಸ್ಥಿತರಿದ್ದರು.

Advertisement

ತತ್‌ಕ್ಷಣ ಮರಳಿಸಿ
ಸುಳ್ಳು ಮಾಹಿತಿ ನೀಡಿ ಬಿಪಿಎಲ್‌ ಪಡಿತರ ಕಾರ್ಡು ಪಡೆದಿರುವುದು ಅಕ್ಷಮ್ಯ. ಅನರ್ಹರಿಗೆ ತಾವು ಹೊಂದಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಈಗಾಗಲೇ ಗಡುವು ನೀಡಲಾಗಿದೆ. ಆದರೂ ಮತ್ತೂಮ್ಮೆ ಅವಕಾಶ ನೀಡುತ್ತಿದ್ದು, ತತ್‌ಕ್ಷಣ ಅನರ್ಹರು ಪಡೆದುಕೊಂಡಿರುವ ಬಿಪಿಎಲ್‌ ಪಡಿತರ ಚೀಟಿಗಳನ್ನು ಸಂಬಂಧ ಪಟ್ಟ ಕಚೇರಿಗೆ ಹಿಂದಿರುಗಿಸಬೇಕು. ಹಿಂದಿರುಗಿಸದೇ ಇದ್ದಲ್ಲಿ ಅಂತಹವರ ಕುಟುಂಬಗಳನ್ನು ಪತ್ತೆ ಮಾಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಮಂಜುನಾಥ್‌ ಪ್ರಸಾದ್‌ ತಾಕೀತು ಮಾಡಿದರು.

1,322 ಡೆಂಗ್ಯೂ ಪ್ರಕರಣ ಜಿಲ್ಲಾ ಆರೋಗ್ಯಾಧಿಕಾರಿ
ಡಾ| ರಾಮಕೃಷ್ಣ ರಾವ್‌ ಮಾತನಾಡಿ, 2019ರಲ್ಲಿ (ಜನವರಿಯಿಂದ ಸೆಪ್ಟಂಬರ್‌ವರೆಗೆ) ದ.ಕ. ಜಿಲ್ಲೆಯಲ್ಲಿ 1322 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಮಲೇರಿಯಾ – 2,082, ಇಲಿಜ್ವರ – 150 ಹಾಗೂ ಎಚ್‌1ಎನ್‌1- 210 ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next