ನೆಲಮಂಗಲ: ತಾಲೂಕಿನ ಗಡಿಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ತಮ್ಮ ಧ್ಯೇಯ ಹಾಗೂ ಮೊದಲ ಗುರಿಯಾಗಿದೆ. ಹೀಗಾಗಿ ತಾರತಮ್ಯವಿಲ್ಲದೆ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ಸ್ಪಷ್ಟಪಡಿಸಿದರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಚೌಡಸಂದ್ರ ಮತ್ತು ಬೀದನ ಪಾಳ್ಯ ಗ್ರಾಮದ ಮಧ್ಯೆ ಹರಿಯುವ ಕುಮುಧ್ವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೊಟ್ಟ ಮಾತಿನಂತೆ ನಡೆದಿದ್ದೇನೆ: ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ಗಡಿಗ್ರಾಮಗಳ ನಡುವೆ ಕುಮುಧ್ವತಿ ನದಿ ಹರಿದಿದ್ದು, ನದಿ ಪಾತ್ರದ ಗ್ರಾಮಗಳು ಸೇರಿದಂತೆ ಆಸುಪಾಸಿನ ಗ್ರಾಮಗಳ ನಾಗರಿಕರು ಮತ್ತು ವಿದ್ಯಾರ್ಥಿಗಳು ಪಂಚಾಯತಿ ಕೇಂದ್ರ ಮತ್ತು ನಗರ ಪ್ರದೇಶಗಳಿಗೆ ಹೋಗಿಬರಲು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರು. ಸಾಲದು ಎಂಬಂತೆ ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ತಾವು ಇದೇ ನದಿಪಾತ್ರದ ಗ್ರಾಮಗಳಿಗೆ ಪ್ರಚಾರಕ್ಕೆಂದು ದ್ವಿಚಕ್ರದಲ್ಲಿ ತೆರಳುವಾಗ ದ್ವಿಚಕ್ರವಾಹನ ಸುಗಮವಾಗಿ ಸಾಗಲಾಗದೆ, ಬಿದ್ದು ಎದ್ದು ಪ್ರಚಾರ ಮಾಡಬೇಕಾಯಿತು. ತಮಗೆ ಗ್ರಾಮದ ಜನರು ಆಶೀರ್ವದಿಸಿದರೆ ಸೇತುವೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದೆ. ಅದರಂತೆ 2 ಕೋಟಿ ರೂ.ಗಳ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಖಂಡನೀಯ: ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರದಲ್ಲಿ ಅನ್ಯಪಕ್ಷದ ಶಾಸಕರು ಕ್ಷೇತ್ರಗಳ ಅಭಿವೃದ್ಧಿ ಕಡೆಗಣಿಸಲಾಗುತ್ತಿದೆ. ಈಗಾಗಲೇ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನ ಹಿಂಪಡೆದಿರುವುದರಿಂದ ಅಭಿವೃದ್ಧಿ ಕ್ಷೀಣೀಸುತ್ತಿದೆ. ನಮ್ಮ ಕ್ಷೇತ್ರದ ಸುಮಾರು 180 ಕೋಟಿಗೂ ಹೆಚ್ಚು ಅನುದಾನವನ್ನು ಬಿಎಸ್‌ವೈ ಹಿಂಪಡೆದಿದ್ದಾರೆ. ಸರಕಾರದ ಪ್ರತಿನಿಧಿಗಳು ಚುನಾವಣೆಯ ವೇಳೆ ರಾಜಕಾರಣ ಮಾಡುವ ಬದಲಿಗೆ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದರು.
ನಟ ವಿನೋದ್‌ರಾಜ್, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್ .ಪಿ.ಹೇಮಂತ್ ಕುಮಾರ್, ಸೋಲದೇವನಹಳ್ಳಿ ಗ್ರಾಪಂ ಅಧ್ಯಕ್ಷೆ ಪ್ರತಿಮಾ ಬಾಲಕೃಷ್ಣ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವನಳ್ಳಿ ರಂಗನಾಥ್, ತಾಪಂ ಸದಸ್ಯೆ ಶಾರದಮ್ಮ ವೀರಮಾರೇಗೌಡ, ಮಾಜಿ ಸದಸ್ಯ ಸಂಪತ್ ಬಾಬು, ಗ್ರಾಪಂ ಸದಸ್ಯ ವೆಂಕಟೇಗೌಡ್ರು, ಮುನೇಗೌಡ್ರು, ರವಿ, ಸುನಂದಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಪ್ಪ, ಮುನೇಶ್ ನಾಯಕ, ಮುಖಂಡ ಕೋಡಪ್ಪನಳ್ಳಿ ವೆಂಕಟೇಶ್, ಬಾಲಕೃಷ್ಣ, ವೀರಮಾರೇಗೌಡ, ವೈ.ಆರ್.ಶ್ರೀನಿವಾಸ್, ಸಿ.ಎಂ. ಗೌಡ್ರು, ಬಿಎಂಟಿಸಿ ನಿರ್ದೇಶಕ ಮಿಲ್ಟ್ರಿಮೂರ್ತಿ ಉಪಸ್ಥಿತರಿದ್ದರು.