ನೆಲಮಂಗಲ: ತಾಲೂಕಿನ ದಾಬಸ್‌ಪೇಟೆ ಸಮೀಪ ರಾಷ್ಟ್ರೀಯ ಹೆದ್ದಾರಿ -4ರಲ್ಲಿ ಕಾರು ಹಾಗೂ ಸ್ಕೂಟರ್ ನಡುವವಿನ ಡಿಕ್ಕಿ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಬೆಂಗಳೂರಿನ ಪ್ರಶಾಂತ್ ನಗರದ ನಿವಾಸಿ, ಕಟ್ಟಡ ನಿರ್ಮಾಣದ ಕಾಂಟ್ರ್ಯಾಕ್ಟರ್ ಯೋಗಾನಂದ್ (50) ಮೃತಪಟ್ಟವರು. ಬೆಳಗ್ಗೆ 10.40ರಲ್ಲಿ ಸೋಂಪುರ ಕೈಗಾರಿಕಾ ವಲಯಕ್ಕೆ ಹೋಗಲು ಹೊಂಡಾ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಯೋಗಾನಂದ್ ತೆರಳಿದ್ದರು. ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಯೂಟರ್ನ್ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭ ದಾವಣಗೆರೆ ಮಾರ್ಗವಾಗಿ ಬೆಂಗಳೂರು ಕಡೆ ವೇಗವಾಗಿ ಬಂದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಗಣೇಶ್ ಅವರು ಪ್ರಯಾಣಿಸುತ್ತಿದ್ದ ಬಿಎಂ ಡಬ್ಲೂé ಕಾರು ಸ್ಕೂಟರ್ ಗೆ ಡಿಕ್ಕಿಯಾಗಿದೆ. ಪರಿಣಾಮ ಚಾಲಕ ಐದು ಅಡಿ ಎತ್ತರಕ್ಕೆ ಹಾರಿ ರಸ್ತೆಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ರಕ್ತಸ್ರಾವವಾಗಿ ಸ್ಥಳದಲ್ಲಿ ಮೃತನಾಗಿದ್ದಾನೆ.
ಯೋಗಾನಂದ್ ಮೃತದೇಹವನ್ನು ತಾಲೂಕು ಸರ್ಕಾರಿ ಆಸ್ಪತ್ರೆ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸ್ತುದ್ದ ಎಸ್.ಗಣೇಶ್‌ಗೆ ಸಣ್ಣ ಪುಟ್ಟ ಗಾಯವಾಗಿದ್ದು ಅವರು ಗೊರಗುಂಟೆಪಾಳ್ಯ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕಾರಿನ ಚಾಲಕ ಮಂಜುನಾಥ್ ಹಾಗೂ ಕಾರಿನಲ್ಲಿಯೇ ಇದ್ದ ವೀರೇಶ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾನವೀಯತೆ ಮರೆತ ಗಣೇಶ: ದಾವಣಗೆರೆ ಸಕ್ಕರೆ ಕಾರ್ಖಾನೆಗೆ ಸೇರಿದ ಕಾರಿನಲ್ಲಿ ಕಾರ್ಖಾನೆ ಆಡಳಿತ ನಿರ್ದೇಶಕ ಎಸ್.ಗಣೇಶ್, ವೀರೇಶ್ ಹಾಗೂ ಚಾಲಕ ಮಂಜುನಾಥ್ ದಾವಣಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದರು. ವೇಗವಾಗಿ ಚಲಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿದೆ.
ಪರಿಣಾಮ ಅದರ ಸವಾರ ಯೋಗಾನಂದ್ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಶಾಮನೂರು ಅವರ ಮಗ ಗಣೇಶ್ ಹಾಗೂ ಚಾಲಕ ಮಂಜುನಾಥ್ ಗಾಯಗೊಂಡಿದ್ದ ಯೋಗಾನಂದ್ ನೆರವಿಗೆ ಬಾರದೆ ಸ್ಥಳದಲ್ಲಿಯೇ ಕಾರು ಬಿಟ್ಟು ಮತ್ತೂಂದು ವಾಹನದಲ್ಲಿ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಶಾಮನೂರು ಅವರ ಪುತ್ರನ ಅಮಾನವೀಯತೆ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈ ಆಪಘಾತದ ದೃಶ್ಯ ಸಮೀಪದ ಅಂಗಡಿಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.