Advertisement

ಕವಿರಾಜಮಾರ್ಗ ನೀಡಿದ ನೆಲಕ್ಕಿಲ್ಲ ನೆಲೆ: ಪೋತೆ

11:02 AM Aug 22, 2017 | |

ಸೇಡಂ: ಕನ್ನಡಕ್ಕೆ ಮೊಟ್ಟ ಮೊದಲ ಕೃತಿ ಕವಿರಾಜಮಾರ್ಗ ನೀಡಿದ ನೆಲ ಮಳಖೇಡಕ್ಕೆ ರಾಜ್ಯದಲ್ಲಿ ಮಾನ್ಯತೆ ದೊರೆಯುತ್ತಿಲ್ಲ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಮುಖ್ಯಸ್ಥ ಡಾ| ಎಚ್‌.ಟಿ. ಪೋತೆ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಡಾ| ಭೀಮಣ್ಣ ಎಚ್‌. ರಚಿತ ಕಾಯಕ ಯೋಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು. ಹೈಕ ಭಾಗ ಇಡೀ ದೇಶಕ್ಕೆ ಅನೇಕ ಐತಿಹಾಸಿಕ ಕೊಡುಗೆ ನೀಡಿದೆ. ಆಗಿನ ಕಾಲಕ್ಕೆ ರಾಜ್ಯದ
ರಾಜಧಾನಿಯಾಗಿದ್ದ ಮಾನ್ಯಖೇಟ (ಈಗಿನ ಮಳಖೇಡ) ವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುವ ಹಂಬಲ ಸ್ಥಳೀಯರಲ್ಲಿ ಮೂಡಬೇಕು ಎಂದು ಹೇಳಿದರು. 12ನೇ ಶತಮಾನದ ಶರಣ ಬಸವಣ್ಣ ಜನರ ಸಂಸ್ಕೃತಿಯಾಗಬೇಕು. ಸಂವಿಧಾನ ರಚಿಸಿದ ಡಾ| ಬಿ.ಆರ್‌. ಅಂಬೇಡ್ಕರ್‌ ನಮ್ಮ ಕನಸಾಗಬೇಕು. ಸತ್ಯದ ಮಾರ್ಗ ತೋರಿದ ಗೌತಮ ಬುದ್ಧ ಮತ್ತು ಮಹಾತ್ಮಾ ಗಾಂಧೀಜಿ ನಮ್ಮ ಬದುಕಾಗಬೇಕು. ಇವರೆಲ್ಲರ ದೇಶ ಪ್ರೇಮದಿಂದ ಇಂದಿಗೂ ಸಹ ಶಾಂತಿ, ಸೌಹಾರ್ದತೆ ಮನೆ ಮಾಡಿದೆ ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿ ಮಹೇಶ ಕಾಳಗಿ ರಚಿತ ಅನೇಕ ಕವಿತೆಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸುವ ಸಂಬಂಧ ಚಿಂತನೆ ನಡೆದಿದೆ ಎಂದು ಹೇಳಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ಮಾತನಾಡಿದರು. ಪ್ರಾಂಶುಪಾಲ ಡಾ| ಶಿವಶರಣಪ್ಪ ಧಾಬಾ, ದೈಹಿಕ ಶಿಕ್ಷಕ ಡಾ| ಜಗನ್ನಾಥ ಪಟ್ಟಣಕರ್‌, ಪ್ರೊ| ಬಿ. ಶಾಂತಪ್ಪ, ಡಾ| ಮಲ್ಲಿಕಾರ್ಜುನ ಮುಗಳಿ, ಡಾ| ರಾಜಕುಮಾರ ಸಲಗರ್‌, ಡಾ| ಸಂತೋಷಸಿಂಗ್‌ ಬಯಾಸ್‌, ಡಾ| ಭೀಮಣ್ಣ ಎಚ್‌. ಇದ್ದರು. ಬಸವರಾಜ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next