Advertisement

ನೆಲ್ಯಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಜೀನಾಮೆ

02:56 PM Jun 23, 2018 | Team Udayavani |

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತ್‌ ಅಧ್ಯಕ್ಷ ಸ್ಥಾನಕ್ಕೆ ಜಯಾನಂದ ಬಂಟ್ರಿಯಾಲ್‌ರವರು ರಾಜೀನಾಮೆ ಸಲ್ಲಿಸಿದ್ದಾರೆ. ಇವರು ಕಳೆದ ಮೂರು ವರ್ಷಗಳಿಂದ ಗ್ರಾ.ಪಂ.ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಜಯಾನಂದ ಬಂಟ್ರಿಯಾಲ್‌ರವರಿಗೆ ಅಧ್ಯಕ್ಷರಾಗಿ ಮುಂದುವರಿಯಲು 5 ವರ್ಷಗಳ ಕಾಲಾವಕಾಶವಿದ್ದರೂ ವೈಯಕ್ತಿಕ ಕಾರಣ ನೀಡಿ ಪುತ್ತೂರು ಎಸಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

Advertisement

ಜಯಾನಂದ ಬಂಟ್ರಿಯಾಲ್‌ರವರು 2010ರಲ್ಲಿ ನಡೆದ ಗ್ರಾ.ಪಂ.ಚುನಾವಣೆಯಲ್ಲಿ ಮೊದಲ ಬಾರಿಗೆ ನೆಲ್ಯಾಡಿ 3ನೇ ವಾರ್ಡ್ನಿಂದ ಕಾಂಗ್ರೆಸ್‌ ಬೆಂಬಲಿತ ಸದಸ್ಯರಾಗಿ ಚುನಾಯಿತರಾಗಿದ್ದರು. ಬಳಿಕ ಅಧ್ಯಕ್ಷತೆಗೆ ನಡೆದ ಚುನಾವಣೆಯಲ್ಲೂ ಸ್ಪರ್ಧಿಸಿ ಎರಡೂವರೇ ವರ್ಷಗಳ ಮೊದಲ ಅವಧಿಗೆ ಅಧ್ಯಕ್ಷರಾಗಿಯೂ ಬಳಿಕದ ಎರಡೂವರೇ ವರ್ಷಗಳ ಅವಧಿಗೆ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

2015ರಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲೂ 2ನೇ ಬಾರಿಗೆ ಚುನಾಯಿತರಾಗಿದ್ದರು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇವರು ಅಧ್ಯಕ್ಷತೆಗೆ ಸ್ಪರ್ಧಿಸಿ ಸರಕಾರದ ನಿಯಮದಂತೆ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಇದೀಗ ಇವರ ಅಧ್ಯಕ್ಷತೆಯ ಮೂರು ವರ್ಷಗಳ ಅವಧಿ ಪೂರ್ಣಗೊಂಡಿದ್ದು ಇನ್ನೂ 2 ವರ್ಷಗಳ ಅವಧಿ ಬಾಕಿ ಇದ್ದರೂ ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ.

ವಲಯ ಅಧ್ಯಕ್ಷತೆಗೆ ರಾಜೀನಾಮೆ
ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ, ನೆಲ್ಯಾಡಿ ವಲಯ ಕಾಂಗ್ರೆಸ್‌ನ ಅಧ್ಯಕ್ಷತೆಗೂ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡ ಶಿರಾಡಿ ಇವರಿಗೆ ಸಲ್ಲಿಸಿದ್ದಾರೆ. ಪಕ್ಷದಲ್ಲಿನ ಇತ್ತೀಚೆಗಿನ ಬೆಳವಣಿಗೆ ಹಾಗೂ ಉತ್ತಮ ಆಡಳಿತವನ್ನು ನೀಡಿ ಪಕ್ಷವನ್ನು ಬೆಳೆಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರೂ ನನ್ನ ಮೇಲೆ ಅಪನಂಬಿಕೆ ವ್ಯಕ್ತಪಡಿಸುವ ಕೆಲವು ಘಟನೆಗಳಿಂದ ಬೇಸತ್ತು ಪಕ್ಷದ ವಲಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗೆ ಮೊದಲು ಅವರನ್ನು ವಲಯ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡರವರು ನೇಮಕಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next