Advertisement

Udupi ನ್ಯಾಯಾಲಯಕ್ಕೆ ಹಾಜರಾದ ನೇಜಾರು ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ

07:41 PM Mar 27, 2024 | Team Udayavani |

ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್‌ ಚೌಗುಲೆಯನ್ನು ಪೊಲೀಸರು ಬುಧವಾರ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Advertisement

ಆರೋಪಿ ಮೇಲೆ ಆಪಾದನೆ ವಾಚಿಸುವ ಪ್ರಕ್ರಿಯೆ ನಡೆಯಿತು. ನ್ಯಾಯಾಧೀಶ ದಿನೇಶ್‌ ಹೆಗ್ಡೆ ಆಪಾದನೆ ವಾಚಿಸಿದರು. ಈ ವೇಳೆ ಆತ ತಾನು ಯಾವುದೇ ತಪ್ಪು ಮಾಡಿಲ್ಲ. ಈ ಬಗ್ಗೆ ವಿಚಾರಣೆ ನಡೆಯಲಿ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ. ಕಿಡ್ನಿ ಸ್ಟೋನ್‌ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನಷ್ಟೇ ಶಸ್ತ್ರ ಚಿಕಿತ್ಸೆ ನಡೆಯಬೇಕಿದೆ ಎಂದು ಆರೋಪಿ ನ್ಯಾಯಾಧೀಶರ ಮುಂದೆ ತಿಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಗಂಭೀರ ಪ್ರಕರಣದ ವಿಚಾರಣೆಗೆ ಪೂರ್ವಭಾವಿಯಾಗಿ ಎ.5ರಂದು ವಿಚಾರಣ ಪೂರ್ವ ಸಭೆ (ಪ್ರಿ ಟ್ರಯಲ್‌ ಕಾನ್ಫರೆನ್ಸ್‌)ನಡೆಸಲು ಆದೇಶಿಸಿದರು. ನ್ಯಾಯಾಧೀಶರ ಸಮಕ್ಷಮದಲ್ಲಿ ನಡೆಯುವ ಈ ಕಾನ್ಫರೆನ್ಸ್‌ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಅಭಿಯೋಜಕರು, ಆರೋಪಿ ಪರ ನ್ಯಾಯವಾದಿ ಭಾಗವಹಿಸಿ ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚಿಸಲಿದ್ದಾರೆ. ಯಾವ ವಿಚಾರಣೆ ಅಗತ್ಯ ಇದೆ ಎಂಬುದರ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಿ ವಿಚಾರಣೆ ಆರಂಭಿಸಲು ಸಾಕ್ಷಿಗಳಿಗೆ ಸಮನ್ಸ್‌ ನೀಡುವ ಪ್ರಕ್ರಿಯೆ ನಡೆಯಲಿದೆ.

ಬಿಗಿ ಭದ್ರತೆ
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಯನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ಪೊಲೀಸ್‌ ವೃತ್ತ ನಿರೀಕ್ಷಕ ಕೃಷ್ಣ ಎಸ್‌.ಕೆ. ಅವರು ಕೋರ್ಟ್‌ ಆವರಣದ ಹಿಂಭಾಗದಿಂದ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಆತನನ್ನು ಬೆಳಗ್ಗೆ 11.30ರಿಂದ 12.30, ಮಧ್ಯಾಹ್ನ 1ರಿಂದ 2, 3ರಿಂದ 4ರ ವರೆಗೆ ಸುದೀರ್ಘ‌ ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಬಿಗಿ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಾಯಿತು. ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವಪ್ರಸಾದ್‌ ಆಳ್ವ ಉಪಸ್ಥಿತರಿದ್ದರು. ಭದ್ರತೆ ಉಸ್ತುವಾರಿಯನ್ನು ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ. ವಹಿಸಿದ್ದರು.

Advertisement

ಮಾ.30: ಜಾಮೀನು ಅರ್ಜಿ ಅಂತಿಮ ಆದೇಶ
ಜಾರ್ಜ್‌ಶೀಟ್‌ಗೂ ಮುನ್ನ ಆರೋಪಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಈಗ ಮತ್ತೆ ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿದ್ದು, ಅದರ ವಿಚಾರಣೆಯೂ ಬುಧವಾರ ನಡೆದಿದೆ. ಅಂತಿಮ ಆದೇಶ ಮಾ.30ರಂದು ಹೊರಬೀಳಲಿದೆ.

ಆರೋಪಿ ಪರ ವಕೀಲರು ಹೇಳಿದ್ದು
ಪ್ರವೀಣ್‌ ಚೌಗುಲೆ ಕೃತ್ಯ ಎಸಗಿರುವುದು ದೃಢಪಟ್ಟಿಲ್ಲ. ಆತನ ಮಕ್ಕಳು ಸಣ್ಣವರು. ಸಹೋದರನೂ ಇತ್ತೀಚೆಗೆ ನಿಧನ ಹೊಂದಿದ್ದಾನೆ. ಪತ್ನಿ, ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಆತನಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿ ಪರ ವಕೀಲರು ವಾದಿಸಿದರು.

ಪ್ರಬಲ ಸಾಕ್ಷ್ಯಗಳು
ಮೃತ ಅಯ್ನಾಝ್ ಅವರ ಕೈಯಲ್ಲಿ ಸಿಕ್ಕಿದ ತಲೆ ಕೂದಲು ಆರೋಪಿಯ ಕೂದಲಿನೊಂದಿಗೆ ತಾಳೆಯಾಗಿರುವುದು ಡಿಎನ್‌ಎ ವರದಿಯಲ್ಲಿ ದೃಢಪಟ್ಟಿದೆ.

ಕೃತ್ಯ ನಡೆಸಿದ ಬಳಿಕ ಆರೋಪಿಯು ಮಂಗಳೂರಿನ ಬಳಿ ತನ್ನ ಒಳ ಉಡುಪನ್ನು ಎಸೆದಿದ್ದು, ಇದರಲ್ಲಿ ದೊರೆತ ರಕ್ತದ ಕಲೆಯು ಅಯ್ನಾಝ್ ಅವರ ತಾಯಿ ಹಸೀನಾ ಅವರ ರಕ್ತದೊಂದಿಗೆ ತಾಳೆಯಾಗಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.

ಆರೋಪಿಯೊಂದಿಗೆ ಪಾನಮತ್ತ ಪೊಲೀಸ್‌!
ಆರೋಪಿಯನ್ನು ನ್ಯಾಯಾಲಯಕ್ಕೆ ಕರೆತರುವ ವೇಳೆ ಆತನೊಂದಿಗಿದ್ದ ಬೆಂಗಳೂರಿನಿಂದ ಆಗಮಿಸಿದ ಆರ್‌ಎಸ್‌ಐ (ರಿಸರ್ವ್‌ ಸಬ್‌ ಇನ್‌ಸ್ಪೆಕ್ಟರ್‌) ಮದ್ಯಪಾನ ಮಾಡಿ ಕೋರ್ಟ್‌ ಒಳಗೆ ಪ್ರವೇಶಿಸಿದ್ದಲ್ಲದೆ, ಪತ್ರಕರ್ತರು ಹಾಗೂ ಕೋರ್ಟ್‌ ಆವರಣದೊಳಗಿದ್ದ ಸಾರ್ವಜನಿಕರೊಂದಿಗೆ ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿದೆ. ಕಳೆದ ರಾತ್ರಿ ತಾನು ಮದ್ಯಸೇವಿಸಿದ್ದೇನೆ. ಬೇಕಿದ್ದರೆ ನನ್ನನ್ನು ಪರೀಕ್ಷೆಗೊಳಪಡಿಸಿ ಎಂದು ಆತ ಪತ್ರಕರ್ತರಿಗೆ ಸವಾಲು ಹಾಕಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಪೊಲೀಸ್‌ ಉಪ ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ.ಅರುಣ್‌ ತಿಳಿಸಿದ್ದಾರೆ.

ಪ್ರಕರಣದ ವಿವರ
ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ನೇಜಾರಿನಲ್ಲಿ 2023ರ ನ.12ರಂದು ಹಾಡುಹಗಲೇ ಹಸೀನಾ, ಅಫಾ°ನ್‌, ಅಯ್ನಾಝ್, ಆಸೀಂನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹಿರಿಯರಾದ ಹಾಜೀರಾ ಮೇಲೆಯೂ ಹಲ್ಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ನ.14ರಂದು ಬೆಳಗಾವಿ ಜಿಲ್ಲೆಯ ರಾಯಭಾಗ್‌ ತಾಲೂಕಿನ ಕುಡಚಿಯಲ್ಲಿ ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next