Advertisement

3 ಸಚಿವರ ಮಕ್ಕಳಿಗೆ ಸೋಲು, ಮೂವರಿಗೆ ಜಯಭೇರಿ

11:44 PM Jun 04, 2024 | Shreeram Nayak |

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಭಾವ ರಾಧಾಕೃಷ್ಣ ದೊಡ್ಡಮನಿ ಕಲಬುರಗಿಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದರೆ, ಬೆಂಗಳೂರು ಗ್ರಾಮಾಂತರದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹೋದರ ಡಿ.ಕೆ. ಸುರೇಶ್‌ ಪರಾಭವಗೊಂಡಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷರ ಸಹೋದರ ಡಿ.ಕೆ. ಸುರೇಶ್‌ಗೆ ದೇವೇಗೌಡರ ಅಳಿಯ ಡಾ.ಸಿ.ಎನ್‌. ಮಂಜುನಾಥ್‌ ಮಣ್ಣು ಮುಕ್ಕಿಸಿದ್ದು, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪುತ್ರ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ.

ಮಾಜಿ ಸಿಎಂಗಳ ಮಕ್ಕಳ ಸೋಲು-ಗೆಲುವು: ಇತ್ತ ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಹೋದರ ಬಿಜೆಪಿಯ ಬಿ.ವೈ. ರಾಘವೇಂದ್ರ ದಿಗ್ವಿಜಯ ಸಾಧಿಸಿದ್ದರೆ, ಇದೇ ಕ್ಷೇತ್ರದಲ್ಲಿ ಮಾಜಿ ಸಿಎಂ ಬಂಗಾರಪ್ಪ ಪುತ್ರಿ, ಸಚಿವ ಮಧು ಬಂಗಾರಪ್ಪ ಸಹೋದರಿ ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್‌ ಸೋಲು ಅನುಭವಿಸಿದ್ದಾರೆ.

ಮೊಮ್ಮಕ್ಕಳ ಕದನ: ಹಾಸನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಮೊಮ್ಮಗ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ ಸೋಲುಂಡಿದ್ದು, ಮಾಜಿ ಸಚಿವ ದಿವಂಗತ ಪುಟ್ಟಸ್ವಾಮಿಗೌಡ ಮೊಮ್ಮಗ ಶ್ರೇಯಸ್‌ ಪಟೇಲ್‌ಗೆ ಕಾಂಗ್ರೆಸ್‌ನಿಂದ ಜಯ ಗಳಿಸಿದ್ದಾರೆ. ಬೀದರ್‌ನಲ್ಲಿ ಭೀಮಣ್ಣ ಖಂಡ್ರೆ ಮೊಮ್ಮಗ, ಸಚಿವ ಈಶ್ವರ್‌ ಖಂಡ್ರೆ ಪುತ್ರ ಸಾಗರ್‌ ಖಂಡ್ರೆ ಕೇಂದ್ರ ಸಚಿವ ಭಗವಂತ್‌ ಖೂಬಾ ವಿರುದ್ಧ ಗೆದ್ದು ಮೊದಲ ಬಾರಿ ಸಂಸತ್‌ ಪ್ರವೇಶಿಸಲಿದ್ದಾರೆ.

ಮಂತ್ರಿ ಮಕ್ಕಳ ಸೋಲು-ಗೆಲುವು: ಬಾಗಲಕೋಟೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌, ಬಿಜೆಪಿಯ ಪಿ.ಸಿ. ಗದ್ದಿಗೌಡರ್‌ ಎದುರು ಪರಾಭವಗೊಂಡಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಶಾಸಕ ರವಿ ಸುಬ್ರಹ್ಮಣ್ಯ ಸೋದರನ ಮಗ ತೇಜಸ್ವಿ ಸೂರ್ಯ ಬಿಜೆಪಿಯಿಂದ ವಿಜಯ ಸಾಧಿಸಿದ್ದು, ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಸೋಲು ಅನುಭವಿಸಿದ್ದಾರೆ. ಚಿಕ್ಕೋಡಿಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಾಂಗ್ರೆಸ್‌ನಿಂದ ಗೆಲುವಿನ ನಗೆ ಬೀರಿದ್ದು, ಶಾಸಕಿ ಶಶಿಕಲಾ ಜೊಲ್ಲೆ ಪತಿ ಅಣ್ಣಾಸಾಹೇಬ್‌ ಜೊಲ್ಲೆ ಸೋಲಿನ ಕಹಿ ಅನುಭವಿಸಿದ್ದಾರೆ. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ ಕಾಂಗ್ರೆಸ್‌ನ ಮೃಣಾಲ್‌ ಹೆಬ್ಟಾಳ್ಕರ್‌ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸೋಲೊಪ್ಪಿಕೊಂಡಿದ್ದು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಬೀಗರಾದ ಶೆಟ್ಟರ್‌ ಗೆದ್ದು ಬೀಗಿದ್ದಾರೆ.

Advertisement

ಗೆಲುವಿನ ಸಿಹಿ, ಸೋಲಿನ ಕಹಿ: ದಾವಣಗೆರೆಯಲ್ಲಿ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಸೊಸೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಪತ್ನಿ ಪ್ರಭಾ ಮಲ್ಲಿಕಾರ್ಜುನ್‌ ಕಾಂಗ್ರೆಸ್‌ನಿಂದ ಗೆಲುವಿನ ಮಾಲೆ ಹಾಕಿಕೊಂಡಿದ್ದರೆ, ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ್‌ ಪತ್ನಿ ಗಾಯತ್ರಿ ಸಿದ್ದೇಶ್ವರ್‌ ಸೋತಿದ್ದಾರೆ. ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ ಸಹೋದರ ರಾಜಶೇಖರ ಹಿಟ್ನಾಳ್‌ ವಿಜಯ ಸಾಧಿಸಿದ್ದು, ಹಾವೇರಿಯಲ್ಲಿ ಮಾಜಿ ಶಾಸಕ ಜಿ.ಎಸ್‌. ಗಡ್ಡದೇವರಮಠ ಅವರ ಪುತ್ರ ಆನಂದಸ್ವಾಮಿ ಗಡ್ಡದೇವರ ಮಠ ಸೋಲಿನ ರುಚಿ ಕಂಡಿದ್ದಾರೆ. ಉತ್ತರ ಕನ್ನಡದಲ್ಲಿ ಐಪಿಎಸ್‌ ಅಧಿಕಾರಿ ಹೇಮಂತ್‌ ನಿಬ್ಬಾಳ್ಕರ್‌ ಪತ್ನಿ ಅಂಜಲಿ ನಿಂಬಾಳ್ಕರ್‌ ಗೆಲ್ಲಲಾಗಿಲ್ಲ. ಅದೇ ರೀತಿ ಮಂಡ್ಯದಲ್ಲಿ ಸಂಸದ ಬಿ.ಎನ್‌. ಬಚ್ಚೇಗೌಡ ಬೀಗರಾದ ಸ್ಟಾರ್‌ ಚಂದ್ರು ಗೆಲ್ಲುವಲ್ಲಿ ವಿಫ‌ಲರಾಗಿದ್ದು, ಮೈಸೂರಿನಲ್ಲಿ ಮಾಜಿ ಸಂಸದ ದಿವಂಗತ ಶ್ರೀಕಂಠದತ್ತ ಒಡೆಯರ್‌ ದತ್ತುಪುತ್ರ ಯದುವೀರ್‌ ಒಡೆಯರ್‌ ಗೆಲ್ಲುವಲ್ಲಿ ಸಫ‌ಲರಾಗಿದ್ದಾರೆ.

ಗೆದ್ದ ಸಚಿವರ ಮಕ್ಕಳು
ಪ್ರಿಯಾಂಕಾ ಜಾರಕಿಹೊಳಿ (ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ)
ಸಾಗರ್‌ ಖಂಡ್ರೆ (ಸಚಿವ ಈಶ್ವರ್‌ ಖಂಡ್ರೆ ಪುತ್ರ)
ಸುನೀಲ್‌ ಬೋಸ್‌ (ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಪುತ್ರ)

ಸೋತ ಸಚಿವರ ಮಕ್ಕಳು
ಸಂಯುಕ್ತಾ ಪಾಟೀಲ್‌ (ಸಚಿವ ಶಿವಾನಂದ ಪಾಟೀಲ್‌ ಪುತ್ರಿ)
ಸೌಮ್ಯ ರೆಡ್ಡಿ (ಸಚಿವ ರಾಮಲಿಂಗಾರೆಡ್ಡಿ ಪುತ್ರಿ)
ಮೃಣಾಲ್‌ ಹೆಬ್ಟಾಳ್ಕರ್‌ (ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪುತ್ರ)

Advertisement

Udayavani is now on Telegram. Click here to join our channel and stay updated with the latest news.

Next