ಆಂಟಿ, ನಿಮಗೆ ಬೆಂಗಳೂರಿಂದ ಫೋನ್ ಬಂದಿದೆ. ಹತ್ತು ನಿಮಿಷ ಬಿಟ್ಟು ಪುನಃ ಕರೆ ಮಾಡ್ತಾರಂತೆ. ಬೇಗ ಬನ್ನಿ…” ಸ್ಥಿರ ದೂರವಾಣಿ ಇರುವ ಮನೆಯ ಮಗು ಓಡುತ್ತ ಹತ್ತಿರದ ಮನೆಯ ಆಂಟಿಗೆ ಸುದ್ದಿ ಮುಟ್ಟಿಸುತ್ತದೆ. ಇಲ್ಲಿ ನೆರೆಮನೆ ಹತ್ತು ಹೆಜ್ಜೆಗಳಾಚೆ ಇರಬಹುದು ಅಥವಾ ಅರ್ಧ ಮೈಲಿ ದೂರವೇ ಇರಬಹುದು. ಆ ಸುದ್ದಿ ತಲುಪಿಸಲು ದೂರವಾಣಿ ಇರುವ ಮನೆಯವರು ಸ್ವಲ್ಪವೂ ವಿಳಂಬಿಸುವುದಿಲ್ಲ.
ಮಾಡುತ್ತಿದ್ದ ಕೆಲಸವನ್ನು ಅರ್ಧಕ್ಕೇ ಬಿಟ್ಟು ಫೋನ್ ಕರೆಗೆ ಬಂದಿರುವ ನೆರೆಮನೆಯಾಕೆಯೂ ಅಷ್ಟೇ. ಅಲ್ಲಿ ಕುಳಿತು ಈ ಮನೆಯವರಲ್ಲಿ ಒಂದು ಹತ್ತು ನಿಮಿಷವಾದರೂ ಮಾತನಾಡಿಯೇ ಹೋಗುತ್ತಾಳೆ. ಆ ಮನೆಗೆ ಅಪರೂಪದ ನೆಂಟರು ಬಂದಿದ್ದಾರೆ. ಅವರನ್ನು ಮಾತನಾಡಿಸಿದ ಮನೆಯಾಕೆ ಚಹಾ ಅಥವಾ ಜ್ಯೂಸ್ ಕೊಡಲು ನೋಡುವಾಗ ಡಬ್ಬಿಯಲ್ಲಿ ಸ್ವಲ್ಪವೇ ಸಕ್ಕರೆಯಿದೆ. ಮೆಲ್ಲನೆ ಮಕ್ಕಳಲ್ಲಿ ಒಬ್ಬರನ್ನು ಕರೆದು ಗುಟ್ಟಾಗಿ ನೆರೆಮನೆಗೆ ಕಳಿಸುತ್ತಾಳೆ. ಕೆಲವೇ ನಿಮಿಷಗಳಲ್ಲಿ ಮಗು ಸಕ್ಕರೆಯೊಂದಿಗೆ ಮರಳುತ್ತದೆ. ನೆರೆಮನೆಯವರಿಂದಾಗಿ ನೆಂಟರ ಮುಂದೆ ತನ್ನ ಮರ್ಯಾದೆ ಉಳಿಯಿತೆಂದು ಮನದಲ್ಲೇ ಅವರಿಗೆ ಕೃತಜ್ಞತೆ ಹೇಳುತ್ತಾಳೆ.
ಮದುವೆಗೆ ಹೋಗಲಿಕ್ಕಿದೆ. ಆಕೆಯ ಆಭರಣಗಳನ್ನು ಯಾವುದೋ ಅಗತ್ಯಕ್ಕೆ ಅಡವಿಡಲಾಗಿದೆ. ಎಲ್ಲರೂ ಹಲವು ಆಭರಣಗಳನ್ನು ಧರಿಸಿ ಹೋಗುವಾಗ ತಾನು ಬೋಳು ಕುತ್ತಿಗೆ, ಬೋಳು ಕೈಗಳಲ್ಲಿ ಹೋಗುವುದು ಹೇಗೆ? ಅತ್ಯಂತ ಆಪ್ತರ ಮದುವೆಗೆ ಹೋಗದಿರಲೂ ಸಾಧ್ಯವಿಲ್ಲ. ಇವಳ ಇಕ್ಕಟ್ಟಿನ ಪರಿಸ್ಥಿತಿ ತಿಳಿದ ನೆರೆಮನೆಯಾಕೆ ತನ್ನ ಆಭರಣಗಳನ್ನು ಆಕೆಗೆ ಸಾಲ ಕೊಡುತ್ತಾಳೆ. ಸಂತೋಷದಿಂದ ಮದುವೆಗೆ ಹೋಗಿ ಬರುವ ಆಕೆ ಕೃತಜ್ಞತೆಯಿಂದ ಆಭರಣಗಳನ್ನು ಹಿಂತಿರುಗಿಸುತ್ತಾಳೆ. ಅಡುಗೆ ಸಾಮಾನುಗಳು, ಪಾತ್ರೆ ಪರಡಿಗಳು, ಹಣ ಹೀಗೆ ಎಲ್ಲವನ್ನೂ ನೆರೆಮನೆಯವರಿಂದ ತುರ್ತು ಸಂದರ್ಭಗಳಲ್ಲಿ ಪಡೆದುಕೊಂಡು ನಂತರ ಹಿಂತಿರುಗಿಸುವ ಕ್ರಮ ಹಳ್ಳಿಗಳಲ್ಲಿ ರೂಢಿಯಲ್ಲಿತ್ತು. ಒಂದು ಮನೆಯಲ್ಲಿ ಯಾವುದಾದರೊಂದು ಕಾರ್ಯಕ್ರಮವಿದ್ದರೆ ಬಂಧುಮಿತ್ರರು, ನೆರೆಮನೆಯವರು ಬಂದು ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದ್ದರು. ಅಲ್ಲಿದ್ದದ್ದು ಸಂಬಳದ ದುಡಿಮೆಯಲ್ಲ, ಬಡ್ಡಿ ವ್ಯವಹಾರಗಳಲ್ಲ. ಪ್ರೀತಿಯ ಕೊಡುಕೊಳ್ಳುವಿಕೆ.
ಈಗ ನೆರೆಮನೆ ಎಂಬುದಕ್ಕಿಂತ ನೆರೆಹೊರೆ ಎಂಬ ಪದವೇ ನಮಗೆ ಪಥ್ಯವೆನಿಸಿದೆ. ನಮ್ಮ ಸುತ್ತಮುತ್ತಲಿನ ಮನೆಯವರು ನಮಗೆ ಹೊರೆಯೆಂಬ ಕಲ್ಪನೆ ನಮ್ಮದು. ನೆರೆಮನೆಯವರೊಂದಿಗೆ ಮಾತುಕತೆ, ಆತ್ಮೀಯತೆಗಳೇ ಕಡಿಮೆಯಾಗಿದೆ. ಆಸ್ತಿ, ಅಂತಸ್ತು ಉದ್ಯೋಗ, ನೋಡಿ ನೆರೆಯವರೊಂದಿಗೆ ಸಂಬಂಧ ಬೆಳೆಸುವುದೋ ಬೇಡವೋ ಎಂದು ತೀರ್ಮಾನಿಸುವ ಮನಃಸ್ಥಿತಿ ಬೆಳೆದಿದೆ. ಹೀಗೆ ಅಳೆದು ತೂಗಿ ಆಯ್ಕೆ ಮಾಡಿದ ನೆರೆಹೊರೆ ಸಂಬಂಧವೂ ಶಿಷ್ಟಾಚಾರದ ಪರಿಧಿಯಲ್ಲಿರುತ್ತದೆ. ಮನೆಯಲ್ಲಿ ಉಪವಾಸ ಬಿದ್ದು ಸತ್ತರೂ ನೆರೆಮನೆಯವರಲ್ಲಿ ಕೇಳಲು ನಮ್ಮ ದುರಭಿಮಾನ ಒಪ್ಪುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಪರಸ್ಪರ ನಂಬಿಕೆಯ ಕೊರತೆಯೂ ಇಲ್ಲಿರುತ್ತದೆ. ಕಾಂಪೌಂಡ್ ಗೋಡೆಯ ಆಚೆ ಈಚೆ ನಿಂತು ಮಾತನಾಡುವ ಹೆಂಗಸರು ಅಪ್ಪಿತಪ್ಪಿಯೂ ನೆರೆಮನೆಯಾಕೆಯನ್ನು ಮನೆಗೆ ಕರೆಯುವುದಿಲ್ಲ. ಒಟ್ಟಿಗೆ ವಾಕಿಂಗ್, ಶಾಪಿಂಗ್, ದೇವಸ್ಥಾನಗಳಿಗೆ ಹೋದರೂ ಒಂದು ಸುರಕ್ಷಿತ ಅಂತರವನ್ನು ಕಾಪಾಡಿಕೊಂಡಿರುತ್ತಾರೆ.ಎದುರುಬದುರು ಮನೆಗಳಿದ್ದರೂ, ಒಂದು ಗೋಡೆಯ ಆಚೆ ಈಚೆಗಿನ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೂ ಪರಸ್ಪರ ನೋಡಿಲ್ಲದವರು ಎಷ್ಟೋ ಜನ ಇದ್ದಾರೆ. ಮುಂಬೈ, ಚೆನ್ನೈ ಮುಂತಾದ ಪಟ್ಟಣಗಳ ಫ್ಲಾಟ್ ಗಳಲ್ಲಿ ಸಂಭವಿಸುತ್ತಿದ್ದದ್ದು ಹಳ್ಳಿಗಳಲ್ಲಿ ಸಂಭವಿಸುತ್ತಿದೆ. ನೆರೆಮನೆಯವರನ್ನು ಆಪತಾºಂಧವರಂತೆ, ಕುಟುಂಬದ ಸದಸ್ಯರಂತೆ ಕಾಣುತ್ತಿದ್ದ ಕಾಲ ಹೋಗಿ, ಅಪರಿಚಿತರಂತೆ, ಕಳ್ಳರಂತೆ, ಶತ್ರುಗಳಂತೆ ಪರಿಗಣಿಸುವ ಕಾಲ ಬಂದಿದೆ. ಮನೆಮನೆಯಲ್ಲೂ ಆಧುನಿಕ ಟಿ.ವಿ, ಹೋಮ್ ಥಿಯೇಟರ್‌ಗಳು ಬಂದಾಗ, ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಬಂದು ಜಾಲತಾಣಗಳ ಸಂಬಂಧಗಳಲ್ಲಿ ಎಲ್ಲರೂ ಮಗ್ನರಾಗಿರುವಾಗ ಯಾರಿಗೆ ಬೇಕು ನೆರೆಮನೆಯವರೊಂದಿಗಿನ ಸಂಬಂಧ? ಆದರೆ ಯಾವುದೋ ಅವಘಡ ಸಂಭವಿಸಿದಾಗ, ತುರ್ತು ಸಂದರ್ಭಗಳಲ್ಲಿ ನಮ್ಮ ಯಾವ ಹೈಟೆಕ್ ಸಂಬಂಧಗಳೂ ಪ್ರಯೋಜನಕ್ಕೆ ಬರುವುದಿಲ್ಲ. ನಾವು ಅವಗಣಿಸಿದ ನೆರೆಹೊರೆಯವನೇ ಮನೆಯವನಂತೆ ನಮ್ಮ ಸಹಾಯಕ್ಕೆ ಬರಬಹುದು.
– ಜೆಸ್ಸಿ ಪಿ. ವಿ.