Advertisement

ನೆರೆ ಪರಿಹಾರ: ಕೇಂದ್ರ ರಾಜ್ಯದ ನಡುವೆ ಇಲ್ಲವೇ ಸಮನ್ವಯ?

12:59 AM Oct 07, 2019 | Team Udayavani |

ಕೊನೆಗೂ ಕೇಂದ್ರ ಸರಕಾರ ರಾಜ್ಯದ ನೆರೆ ಸಂತ್ರಸ್ತರಿಗಾಗಿ 1200 ಕೋಟಿ ರೂ ಮಧ್ಯಂತರ ಪರಿಹಾರ ಘೋಷಿಸಿದೆ. ಆದರೆ ಇದು ಅಲ್ಪ ಪ್ರಮಾಣದ ಪರಿಹಾರವಾಗಿದ್ದು. ಕೇಂದ್ರ ತಮ್ಮನ್ನು ಕಡೆಗಣಿಸುತ್ತಲೇ ಇದೆ ಎಂಬ ಆಕ್ರೋಶವಂತೂ ಜನರಲ್ಲಿ ಕಡಿಮೆಯಾಗಿಲ್ಲ. ಈ ವಿಷಯದಲ್ಲಿ ಜನಾಕ್ರೋಶವು ಹೆಚ್ಚು ಹೊರಳಿರುವುದು ಬಿಜೆಪಿ ಸಂಸದರ ಮೇಲೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯು ಹಲವು ಪ್ರಶ್ನೆಗಳೊಂದಿಗೆ ರಾಜ್ಯದ ಸಂಸದರಿಗೆ ಮುಖಾಮುಖೀಯಾದಾಗ, ಎದುರಾದ ಉತ್ತರಗಳಿವು…

Advertisement

ಮೋದಿ ಸರ್ಕಾರ ಕರ್ನಾಟಕದ ಪರ ಇದೆ. ಕರ್ನಾಟಕದ ಪರಿಸ್ಥಿತಿ ಚೆನ್ನಾಗಿದ್ದು, ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಆದರೆ, ಕೆಲವರು ಈ ಸೋಷಿಯಲ್‌ ಮೀಡಿಯಾಗಳಲ್ಲಿ ರೈತರನ್ನು ಹಾದಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದಾರೆಂದು ದಾಖಲೆ ಸಮೇತ ಸಾಬೀತು ಮಾಡಲಿ ನೋಡೋಣ? ಮೊದಲು ನಮ್ಮನ್ನು ನಾವು ಹೀಗಳೆದುಕೊಳ್ಳುವ ಪ್ರವೃತ್ತಿ ಬಿಡಬೇಕು.
– ಪ್ರತಾಪ್‌ ಸಿಂಹ, ಮೈಸೂ ರು-ಕೊಡಗು ಸಂಸದ

ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಮನ್ವಯತೆಯ ಕೊರತೆ ಇದೆ ಎಂಬುದು ಸರಿಯಲ್ಲ. ಸಮನ್ವಯತೆ ಇದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದ ನೆರೆ ಸಂಕಷ್ಟಗಳನ್ನು ಎಲ್ಲಾ ರೀತಿಯಿಂದಲೂ ಮನವರಿಕೆ ಮಾಡಲಾಗಿದೆ.
– ಶೋಭಾ ಕರಂದ್ಲಾಜೆ, ಚಿಕ್ಕ ಮ ಗ ಳೂರು ಸಂಸ ದೆ

ಬಿಜೆಪಿ ಮೇಲೆ ನಂಬಿಕೆಯಿಟ್ಟು ಕರ್ನಾಟಕದ ಜನ 25 ಸಂಸದರನ್ನು ಆಯ್ಕೆ ಮಾಡಿದ್ದಾರೆ. ನಾವು ಕೇಂದ್ರದ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವೆ ಸಮನ್ವಯತೆ ಇದ್ದುದ್ದರಿಂದಲೇ ನೆರೆ ಹಾನಿಯಾದ ತಕ್ಷಣ ಕೇಂದ್ರ ಸಚಿವರು ವೈಮಾನಿಕ ಸಮೀಕ್ಷೆ ನಡೆಸಿದ್ದು.
– ಕರಡಿ ಸಂಗಣ್ಣ, ಕೊಪ್ಪಳ ಸಂಸದ

ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ ಎಂದ ಮಾತ್ರಕ್ಕೆ ನಾವು ಕೆಲಸ ಮಾಡಿಲ್ಲ ಎಂದರ್ಥವಲ್ಲ. ಪತ್ರಿಕೆಗಳಲ್ಲಿ ಹೇಳಿಕೆ ನೀಡಿದರೆ ಪರಿಹಾರ ಕೊಟ್ಟಂತೆ ಅಲ್ಲ. ಕೇಂದ್ರ-ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು, ಜನರ ಪರವಾಗಿಯೇ ಇದ್ದೇವೆ.
– ರಮೇಶ ಜಿಗಜಿಣಗಿ, ವಿಜಯಪುರ ಸಂಸದ

Advertisement

ಉತ್ತರಿಸದ ತೇಜಸ್ವಿ ಸೂರ್ಯ
ನೆರೆ ಪರಿಹಾರದ ವಿಚಾರವಾಗಿ ಕೇಂದ್ರದ ನಡೆಯ ಕುರಿತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಸಂಪರ್ಕಿಸಲು ಮುಂದಾದಾಗ ಅವರ ಆಪ್ತ ಸಹಾಯಕರು ಕರೆ ಸ್ವೀಕರಿಸಿ, ನವರಾತ್ರಿ ಕಾರ್ಯಕ್ರಮದಲ್ಲಿದ್ದಾರೆ ಕಾರ್ಯಕ್ರಮ ಮುಗಿಯುವವರೆಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಆದರೆ ಕಾರ್ಯಕ್ರಮ ಮುಗಿದ ನಂತರವೂ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಕಳೆದ ಮೂರು ದಿನದಿಂದ ಪದೇ ಪದೆ ಸಂಪರ್ಕಿಸಲು ಪ್ರಯತ್ನಿಸಿದರೂ ಉತ್ತರ ಸಿಗುತ್ತಿಲ್ಲ.

ಕೇಂದ್ರರಾಜ್ಯ ಸಂಸದರನ್ನು ಕಡೆಗಣಿಸಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಯಾರ ಬಳಿ ಮಾತಾಡಬೇಕೋ ಅವರೊಂದಿಗೆ ಮಾತನಾಡಿದ್ದೇವೆ. ಸಂಬಂಧಿ ಸಿದ ಸಚಿವಾಲಯದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ.
– ಸುಮಲತಾ, ಮಂಡ್ಯ ಸಂಸದೆ

ಕೇಂದ್ರವು ಅನುದಾನ ನೀಡುವಲ್ಲಿ ವಿಳಂಬ ಮಾಡಿಲ್ಲ. ನಿಯಮಾನುಸಾರ ಪರಿಶೀಲಿಸಿಯೇ ಮಧ್ಯಂತರ ಅನುದಾನ ಬಿಡುಗಡೆ ಮಾಡಿದೆ. ಕೇಂದ್ರದಿಂದ ಇನ್ನಷ್ಟು ಪರಿಹಾರ ಖಂಡಿತ ಬಂದೇ ಬರುತ್ತದೆ.
– ಪಿ.ಸಿ.ಮೋಹನ್‌, ಬೆಂಗಳೂರು ಕೇಂದ್ರ ಸಂಸದ

ಅಧಿಕಾರಿಗಳ ಯಡವಟ್ಟುಗಳಿಂದ ಸಮಸ್ಯೆ ಎದುರಾಗಿತ್ತು. ಜಿಲ್ಲಾಮಟ್ಟದ ಅಧಿಕಾರಿಗಳು ನೀಡಿದ ಮಾಹಿತಿ ಕೇಂದ್ರದ ತಂಡಕ್ಕೆ ಒಪ್ಪಿಗೆಯಾಗಿಲ್ಲ. ಇದು ಕೂಡ ಪರಿಹಾರ ವಿಳಂಬಕ್ಕೆ ಕಾರಣವಾಗಿರಬಹುದು.
– ರಾಜಾ ಅಮರೇಶ್ವರ ನಾಯಕ, ರಾಯಚೂರು

– ಪ್ರತಿಕ್ರೀಯೆಗೂ ಸಿಗದ ಪ್ರಜ್ವಲ್
ಕೇಂದ್ರದ ಮೇಲೆ ಒತ್ತಡ ತರುವುದಿರಲಿ, ಹಾಸನ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಜ್ವಲ್‌ ರೇವಣ್ಣ ಮಾಧ್ಯಮಗಳ ಪ್ರತಿಕ್ರಿಯೆಗೂ ಸಿಗುತ್ತಿಲ್ಲ. ಪ್ರಜ್ವಲ್‌ ರೇವಣ್ಣ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯ. ಇದುವರೆಗೂ ಕೇಂದ್ರ ಸರ್ಕಾರದ ಧೋರಣೆ ಬಗ್ಗೆಯಾಗಲಿ, ರಾಜ್ಯದ ನೆರೆ ಸಂತ್ರಸ್ತರ ಪರವಾಗಿ ದನಿ ಎತ್ತಿಲ್ಲ. ರಾಜ್ಯಕ್ಕೆ ನೆರೆ ಪರಿಹಾರ ಬಿಡುಗಡೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆಯೇ ಇಲ್ಲವೇ ಎಂಬ ಪ್ರತಿಕ್ರಿಯೆಗೂ ಪ್ರಜ್ವಲ್‌ ರೇವಣ್ಣ ಸಿಗಲಿಲ್ಲ. ಅಷ್ಟೇಕೆ, ಅವರು, ಸಂಸದರಾಗಿ ಆಯ್ಕೆಯಾದ ಮರುದಿನ ಸುದ್ದಿಗೋಷ್ಠಿ ನಡೆಸಿದ್ದನ್ನು ಬಿಟ್ಟರೆ 4 ತಿಂಗಳಲ್ಲಿ ಒಮ್ಮೆಯೂ ಮಾಧ್ಯಮಗಳ ಮುಂದೆ ಬಂದಿಲ್ಲ, ಮಾಧ್ಯಮ ಪ್ರತಿನಿಧಿಗಳ ಕರೆಗಳನ್ನೂ ಸ್ವೀಕರಿಸುವುದಿಲ್ಲ!

ಗುಲಗಂಜಿಯಷ್ಟೂ ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿಲ್ಲ. ಇದು ಒಂದು, ಎರಡು ಸಾವಿರ ಕೋಟಿ ಪ್ರಶ್ನೆಯಲ್ಲ. ಇಡೀ ದೇಶದಲ್ಲಿ 16 ರಾಜ್ಯದಲ್ಲಿ ಈ ರೀತಿ ಸಮಸ್ಯೆ ಇದೆ. ಲಕ್ಷಾಂತರ ಕೋಟಿ ಪರಿಹಾರದ ಮೊತ್ತ ಇರುವುದರಿಂದ ನೀತಿ ಆಯೋಗದಲ್ಲಿ ಚರ್ಚೆ ಮಾಡಿ ಬಿಡುಗಡೆ ಮಾಡಬೇಕು. ಇದಕ್ಕಾಗಿ ಕೆಲವು ಕ್ರಮಗಳಿವೆ. ಸಾಂತ್ವನ ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಹಿಂದೆ ಬಿದ್ದಿಲ್ಲ. ಒಂದೇ ದೇಶ, ಒಂದೇ ಜನ ಎಂದು ಭಾವಿಸಿದ್ದಾರೆ. ಕೇರಳದಲ್ಲಿ ಒಬ್ಬ ಸಂಸದರಿದ್ದಾರೆ ಎಂದಾಗಲಿ, ಕರ್ನಾಟಕದಲ್ಲಿ 25 ಜನ ಇದ್ದಾರೆ ಎಂದಾಗಲಿ ಪರಿಹಾರ ಕೊಡುವುದರಲ್ಲಿ ಕಡಿಮೆ ಮಾಡಿಲ್ಲ. ನಾವು ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿ ಇದ್ದೇವೆ.
– ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

ಪಾರ್ಲಿಮೆಂಟ್‌ ಕಲ್ಲಿಗೆ ಹೇಳ್ಳೋಣವೇ?: ಶ್ರೀನಿವಾಸ್‌ ಪ್ರಸಾದ್‌ ಆಕ್ರೋಶ
ಕೇಂದ್ರ ಸರ್ಕಾರಕ್ಕೆ ರಾಜ್ಯದ ನೆರೆ ಸಂಕಷ್ಟಗಳನ್ನು ಸರಿ ಯಾಗಿ ಮನವರಿಕೆ ಮಾಡಿಕೊಡಲು ನಿಮ್ಮಿಂದ ಏಕೆ ಸಾಧ್ಯವಾಗಿಲ್ಲ?

-ನಾನೇನು ಮಾಡಲಿ? ಕೇಂದ್ರ ಸಚಿವರಾದ ಸದಾನಂದಗೌಡರು, ಪ್ರಹ್ಲಾದ್‌ ಜೋಶಿ ಅವರೇ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ.

ಮುಖ್ಯಮಂತ್ರಿಯಾಗಲೀ, ಕೇಂದ್ರ ಸಚಿವರಾಗಲಿ ನಮ್ಮನ್ನು ಕರೆಸಿ ಮಾತನಾಡಿಲ್ಲ. ಕೇಂದ್ರ ಪ್ರಭಾವ ಬೀರುವ ನಾಯಕ ಸಂತೋಷ್‌ಜಿ ಇದ್ದಾರೆ. ಅವರೆಲ್ಲ ಹೇಳಬೇಕು. ಸಂಸದರೇನು ಮಾಡಲು ಸಾಧ್ಯ? ಕರೆದು ಮಾತನಾಡಿಲ್ಲ ಏನು ಮಾಡೋಣ? ಯಾರಿಗೆ ಹೇಳ್ಳೋಣ? ಪಾರ್ಲಿಮೆಂಟ್‌ ಕಲ್ಲಿಗೆ ಹೇಳ್ಳೋಣವಾ?

ವೈಯಕ್ತಿಕವಾಗಿ ಏನ್‌ ಮಾಡೋಕಾಗುತ್ತೆ ರೀ ನಾವು? ಏನ್‌ ಮಾಡೋಕ್ಕಾಗುತ್ತೆ
ವೈಯಕ್ತಿಕವಾಗಿ, ಹೇಳಿ? 38 ಸಾವಿರ ಕೋಟಿ ನಷ್ಟವಾಗಿದೆ. ಮುಖ್ಯಮಂತ್ರಿ
ಯಾದವರು ನಮ್ಮನ್ನು ಕರೆದು ಚರ್ಚೆ ಮಾಡಬೇಕು ತಾನೇ?ಇನ್ನು ಮುಖ್ಯಮಂತ್ರಿಗಳ ಭೇಟಿಗೆ ಪ್ರಧಾನಿಗಳು ಅವಕಾಶವನ್ನೇ ಕೊಡೋದಿಲ್ಲ. ಅವರು ಇಸ್ರೋ ಕಾರ್ಯಕ್ರಮಕ್ಕೆ ಬಂದಾಗ ನೆರೆಯ ಬಗ್ಗೆ ಒಂದು ಮಾತೂ ಆಡಿಲ್ಲ. ಇದರಿಂದ ಸಾರ್ವಜನಿಕರಲ್ಲಿ ನಮ್ಮ ಮೇಲೆ ಬಹಳ ಆಕ್ಷೇಪಣೆ ಬರ್ತಾ ಇದೆ. ಕಾಳಜಿ ಇಲ್ಲ ಅಂತ. ಜನರು, ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಾ ಇದೆ ಎಂಬುದನ್ನು ನೋಡುತ್ತಿದ್ದಾರೆ.

38 ಸಾವಿರ ಕೋಟಿ ರೂ. ನಷ್ಟ
ಕರ್ನಾಟಕದ ಹಲವು ಭಾಗಗಳು ಅತಿವೃಷ್ಟಿಯ ಪೆಟ್ಟಿಗೆ ನಲುಗಿ ಎರಡು ತಿಂಗಳಾದರೂ ನೆರೆ ಸಂತ್ರಸ್ತರಿಗೆ ಪೂರ್ಣ ಪುನರ್‌ವಸತಿ ಕಲ್ಪಿಸುವ ಹಾಗೂ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರಿದ ವಿಳಂಬ ಧೋರಣೆ ಮತ್ತು ರಾಜ್ಯದ ಸಂಸದರ ನಿಷ್ಕ್ರಿಯತೆಯ ಬಗ್ಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತ್ತು. ರಾಜ್ಯದಲ್ಲಿ ಪ್ರವಾಹದಿಂದ ಒಟ್ಟಾರೆ 38 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಕೇಂದ್ರಕ್ಕೆ ವರದಿ ನೀಡಲಾಗಿತ್ತು. ತುರ್ತಾಗಿ 3800 ಕೋಟಿ ರೂ. ಪರಿಹಾರ ಕೇಳಲಾಗಿತ್ತು. ಆದರೆ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿರಲೇ ಇಲ್ಲ. ಕೊನೆಗೆ ಸಾಕಷ್ಟು ಆಕ್ರೋಶ, ಟೀಕೆಗಳು ವ್ಯಕ್ತವಾದ ನಂತರ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ 1,200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಸಂಸದರು, ಸಚಿವರು, ಶಾಸಕರು ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರಾದರೂ, ಇದು ಅಲ್ಪ ಮೊತ್ತವಾಗಿದ್ದು, ಸಂತ್ರಸ್ತರ ಪರಿಹಾರಕ್ಕೆ ಸಾಕಾಗುವುದಿಲ್ಲ ಎಂಬ ಟೀಕೆ ಪ್ರತಿಪಕ್ಷಗಳ ನಾಯಕರಿಂದ ಮತ್ತು ನಾಗರಿಕರಿಂದ ಎದುರಾಗುತ್ತಿದೆ. ಆದಾಗ್ಯೂ ಸಂತ್ರಸ್ತ ಪ್ರದೇಶದ ಜನರಿಗೆ ಮಧ್ಯಂತರ ಪರಿಹಾರ ತುಸು ಸಾಂತ್ವನ ನೀಡಲಿದೆ ಎನ್ನುವುದು ನಿಜವೇ ಆದರೂ, ಅವರಲ್ಲಿನ ಅಸಮಾಧಾನವೇನೋ ಪೂರ್ಣವಾಗಿ ತಗ್ಗಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷವಿದ್ದರೂ ತಮಗೆ ಹೆಚ್ಚಿನ ಸಹಾಯ ಸಿಗುತ್ತಿಲ್ಲ ಎಂಬ ಮಾತು ಜನ ಸಾಮಾನ್ಯರಿಂದ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ಯು ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಂಸದರಿಗೆ ಮುಖಾಮುಖೀಯಾಯಿತು: “ಪ್ರಧಾನಿ ಮೋದಿ ಅವರಿಗೆ ಅಥವಾ ಕೇಂದ್ರ ಸರ್ಕಾರಕ್ಕೆ ರಾಜ್ಯದ ನೆರೆ ಸಂಕಷ್ಟಗಳ ಬಗ್ಗೆ ಮನವರಿಕೆ ಮಾಡಿಕೊಡಲು ನಿಮ್ಮಿಂದ ಏಕೆ ಸಾಧ್ಯವಾಗಿಲ್ಲ?’ “ಪರಿಹಾರ ವಿತರಣೆಗಾಗಿ ನಿಮ್ಮ ಕಡೆಯಿಂದ ವೈಯಕ್ತಿಕವಾಗಿ ಯಾವ ಒತ್ತಡ ಹೇರಿದ್ದೀರಿ?’ “ಸಂಸತ್ತಿಗೆ 25 ಮಂದಿಯನ್ನು ಆರಿಸಿ ಕಳುಹಿಸಿಕೊಟ್ಟ ಕರ್ನಾಟಕದ ಜನತೆಯನ್ನು ನಿಮ್ಮದೇ ಪಕ್ಷದ ಸರ್ಕಾರ ಕಡೆಗಣಿಸಿದೆ ಎಂಬ ಜನರ ಆಕ್ರೋಶ, ಅಸಮಾಧಾನವನ್ನು ಪಕ್ಷದ ವರಿಷ್ಠರಿಗೆ ಮುಟ್ಟಿಸಿದ್ದೀರಾ?’ “ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೂ ಸಮನ್ವಯತೆ ಸಾಧಿಸಲು ವಿಫ‌ಲರಾಗಿದ್ದೀರಿ ಎಂದೆನಿಸದೇ?’ ಎಂಬ ಪ್ರಶ್ನೆಗಳಿಗೆಲ್ಲ ಬಿಜೆಪಿ ಸಂಸದರ ಪ್ರತಿಕ್ರಿಯೆಗಳು ಬಹುತೇಕ ಒಂದೇ ರೀತಿಯಲ್ಲೇ ಇವೆ. ಈ ವಿಚಾರದಲ್ಲಿ ತಾವು ಸುಮ್ಮನೇ ಕುಳಿತಿಲ್ಲ, ಕೇಂದ್ರಕ್ಕೆ ಸಮಸ್ಯೆಯ ವ್ಯಾಪ್ತಿಯ ಬಗ್ಗೆ ಸಾಕಷ್ಟು ವಿವರಣೆ ನೀಡಿದ್ದೇವೆ, ಒತ್ತಡ ಹೇರುವ ಕೆಲಸ ಮಾಡುತ್ತಿದ್ದೇವೆ, ಕೇಂದ್ರವು ರಾಜ್ಯದ ಕೈ ಬಿಡದು ಎಂದು ಒಕ್ಕೊರಲಲ್ಲಿ ಹೇಳುತ್ತಾರೆ. ಆದರೆ ಬಿಜೆಪಿ ಸಂಸದರಲ್ಲೇ ಕೆಲವರಿಂದ ಕೇಂದ್ರದ ಧೋರಣೆಯ ವಿರುದ್ಧ ಅಸಮಾಧಾನವೂ ವ್ಯಕ್ತವಾಗುತ್ತಿದೆ…

Advertisement

Udayavani is now on Telegram. Click here to join our channel and stay updated with the latest news.

Next