Advertisement
ಕಳೆದ ನಾಲ್ಕು ವರ್ಷಗಳಿಂದಲೂ ಉತ್ತರ ಕರ್ನಾಟಕ ಭಾಗ ಮಳೆ ಕೊರತೆ ಅನುಭವಿಸಿತ್ತು. ಆಲಮಟ್ಟಿ, ತುಂಗಭದ್ರಾ, ನಾರಾಯಣಪುರ, ಘಟಪ್ರಭಾ, ಹಿಡಕಲ್ ಸೇರಿ ಪ್ರಮುಖ ಜಲಾಶಯಗಳು ಭರ್ತಿಯಾಗಿರಲಿಲ್ಲ. ಪ್ರಸಕ್ತ ವರ್ಷ ಆರಂಭದಲ್ಲಿ ಮುಂಗಾರು ಉತ್ತಮವಾಗುವ ಲಕ್ಷಣ ಕಂಡರೂ ಕಾಲಕ್ರಮೇಣ ಮಳೆ ಕೊರತೆ ಎದುರಾಗಿದೆ. ಮೇಲ್ಭಾಗದಲ್ಲಿ ಉತ್ತಮ ಮಳೆಯಾಗಿರುವುದರಿಂದ ಜಲಾಶಯಗಳು ಭರ್ತಿಯಾಗಿದ್ದರೂ ಬರದ ಛಾಯೆ ಆವರಿಸಿದೆ.
ಕಲಬುರಗಿ ಜಿಲ್ಲೆಯಲ್ಲಿ ಶೇ.42ರಷ್ಟು ಮಳೆ ಕೊರತೆಯಾಗಿದೆ. 6 ಲಕ್ಷ ಹೆಕ್ಟೇರ್ ಪೈಕಿ 5 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿದ್ದರೂ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ಭೀಮಾ, ಬೆಣ್ಣೆತೋರಾ, ಅಮರ್ಜಾ, ಭೀಮಾ ಏತ ನೀರಾವರಿ, ಕಾರಂಜಾ ಸೇರಿ ಇತರ ಜಲಾಶಯಗಳು ಬತ್ತಿದ್ದು, ಕುಡಿಯುವ ನೀರಿಗೆ ಈಗಲೇ ಪರದಾಟ ಶುರುವಾಗಿದೆ. ಇದೇ ಸ್ಥಿತಿ ಕೆಳದಂಡೆ ಮುಲ್ಲಾಮಾರಿ, ಚುಳುಕಿನಾಲಾ, ಅಮರ್ಜಾ, ಗಂಡೋರಿ ನಾಲಾ ಜಲಾಶಯದಲ್ಲೂ ಇದೆ. ಬೀದರ್ ಜಿಲ್ಲೆಯ ಕಾರಂಜಾ ಜಲಾಶಯದಲ್ಲಿ 7.69 ಟಿಎಂಸಿ ಅಡಿ ನೀರಿನ ಸಂಗ್ರಹಣಾ ಸಾಮರ್ಥ್ಯವಿದ್ದರೂ 3.49 ಅಡಿಗೆ ತಲುಪಿದೆ. ಯಾದಗಿರಿ ಜಿಲ್ಲೆಯ ಹತ್ತಿಕುಣಿ ಜಲಾಶಯ ಸಂಪೂರ್ಣ ಬತ್ತಿ ಹೋಗಿದೆ.
Related Articles
ಬೀದರ್ ಜಿಲ್ಲೆಯಲ್ಲಿ ಶೇ.18ರಷ್ಟು ಮಳೆ ಕೊರತೆಯಾಗಿದ್ದು, 3.39 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಪೈಕಿ 3.22 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸೋಯಾ, ಹೆಸರು, ಉದ್ದು ಬಿತ್ತನೆ ಮಾಡಲಾಗಿದ್ದು, ಬೆಳೆ ಒಣಗುತ್ತಿವೆ. ಯಾದಗಿರಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.25ರಷ್ಟು ಮಳೆ ಕೊರತೆಯಾಗಿದೆ. ಗುರುಮಠಕಲ್, ಯಾದಗಿರಿ ತಾಲೂಕಿನ ಜನರು ಬೆಂಗಳೂರು, ಮುಂಬೈಗೆ ಹೋಗುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಶೇ.41ರಷ್ಟು ಮುಂಗಾರು ಮಳೆ ಕೊರತೆಯಾಗಿದ್ದು, ಶೇ.31ರಷ್ಟು ಮಾತ್ರ ಬಿತ್ತನೆಯಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ, ಬೀಳಗಿ ಮತ್ತು ಜಮಖಂಡಿ ಭಾಗದಲ್ಲಿ ಮಳೆ ಕೊರತೆಯಿಂದ ಕಬ್ಬು ಬೆಳೆ ಒಣಗಿ ಹೋಗುತ್ತಿದೆ. ಸಜ್ಜೆ, ಗೋವಿನ ಜೋಳ, ತೊಗರಿ, ಸೂರ್ಯಕಾಂತಿ, ಹೆಸರು ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದಾರೆ.
Advertisement
ದ್ರಾಕ್ಷಿ ನಾಡಲ್ಲೂ ಬರ:ಮಹಾರಾಷ್ಟ್ರ, ಬೆಳಗಾವಿ ಭಾಗದಲ್ಲಿ ಸುರಿದ ಭಾರಿ ಮಳೆಗೆ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದರೂ ವಿಜಯಪುರ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. 2.74 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗೆ ತುರ್ತಾಗಿ ತೇವಾಂಶ ಬೇಕಿದೆ. ಒಂದು ವಾರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿದ್ದರೆ ಬರ ಖಚಿತ. ಮತ್ತೂಮ್ಮೆ ಗುಳೆ ನಾಡಿನ ಜನರು ಬದುಕನ್ನರಸಿ ಗುಳೆ ಹೋಗಲು ಸಿದ್ಧವಾಗುತ್ತಿದ್ದಾರೆ. ಕೈ ಹಿಡಿಯದ ಉದ್ಯೋಗ ಖಾತ್ರಿ
ಬರಪೀಡಿತ ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಕೈ ಹಿಡಿಯುತ್ತಿಲ್ಲ. ಅಂಕಿಸಂಖ್ಯೆಯಲ್ಲಿ ಮಾತ್ರ ಲೆಕ್ಕ ತೋರಿಸುವ ಅಧಿಕಾರಿಗಳು ಗುಳೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮರ್ಪವಾಗಿ ಯೋಜನೆ ಜಾರಿಗೆ ಯತ್ನಿಸುತ್ತಿಲ್ಲ. ಸ್ಥಳೀಯವಾಗಿಯೇ ನಿತ್ಯ ಕೆಲಸಕ್ಕೆ 249 ರೂ. ಕೂಲಿ ಪಡೆಯಬಹುದಾಗಿದ್ದರೂ ಸರಿಯಾದ ಸಮಯಕ್ಕೆ ಉದ್ಯೋಗ ಸಿಗುತ್ತಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ಮಳೆ ಹಾಗೂ ಬೆಳೆಗಳ ಸ್ಥಿತಿಗತಿ ಕುರಿತಾಗಿ ಸರ್ಕಾರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ವರದಿ ತಿಳಿಸಲಾಗಿದೆ. ಜು.30, 31ರಂದು ಮುಖ್ಯಮಂತ್ರಿಯವರು ಕರೆದಿರುವ ಸಭೆಯಲ್ಲಿ ಸಮಗ್ರವಾದ ವರದಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಮಳೆ ಕೊರತೆಯುಂಟಾಗಿದೆ.
– ಆರ್. ವೆಂಕಟೇಶಕುಮಾರ, ಜಿಲ್ಲಾಧಿಕಾರಿ, ಕಲಬುರಗಿ ಈಗಾಗಲೇ ಮುಂಗಾರು ಹಂಗಾಮಿಗೆ ಬಿತ್ತನೆ ಅವ ಧಿ ಮುಗಿಯುತ್ತಿದೆ. ಹೀಗಾಗಿ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಸೂಚನೆ ನೀಡುತ್ತಿದ್ದೇವೆ. ಒಂದು ಸಾಲು ತೊಗರಿ ಹಾಗೂ ಎರಡು ಸಜ್ಜೆ, ಶೇಂಗಾ, ಹೆಸರು, ಮೆಕ್ಕೆಜೋಳದಂಥ ಬೆಳೆ ಬೆಳೆಯಲು ತಿಳಿಸಲಾಗುತ್ತಿದೆ.
– ಡಾ.ಚೇತನಾ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಯಚೂರು