Advertisement

ಕಾಶ್ಮೀರ ವಿಚಾರದಲ್ಲಿ ನೆಹರೂ ದೇಶಕ್ಕೆ ವಿಷ ಉಣಿಸಿದರು: ಪ್ರಹ್ಲಾದ್‌ ಜೋಷಿ

10:35 AM Sep 30, 2019 | sudhir |

ಬೆಂಗಳೂರು: ಕಾಶ್ಮೀರ ವಿಚಾರದಲ್ಲಿ ನೆಹರೂ ಅವರು ದೇಶದ ಜನರಿಗೆ ಹಾಲುಣಿಸುವ ಬದಲು ವಿಷ ಉಣಿಸಿದರು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್‌ ಜೋಷಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಬಿಜೆಪಿಯ ಬೆಂಗಳೂರು ನಗರ ಜಿಲ್ಲಾ ಘಟಕ ಶನಿವಾರ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ 370ನೇ ವಿಧಿ ರದ್ಧತಿ ಕುರಿತ “ಜನ ಜಾಗರಣ್‌’ ಸಭೆಯಲ್ಲಿ ಮಾತನಾಡಿದ ಅವರು, ಈ ವಿಧಿ ದೇಶದ ಏಕತೆಗೆ ಧಕ್ಕೆ ತರುವಂಥ ವಿಧಿಯಾಗಿತ್ತು ಎಂದು ಹೇಳಿದರು.

ಈ ಹಿಂದೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತಂತೆ ನೆಹರೂ ಅವರ ನಿರ್ಧಾರವನ್ನು ಅಂದು ಕಾನೂನು ಸಚಿವರಾಗಿದ್ದ ಡಾ|ಬಿ.ಆರ್‌. ಅಂಬೇಡ್ಕರ್‌ ಮತ್ತು ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಕೂಡ ವಿರೋಧಿಸಿದ್ದರು. ಆದರೂ ನೆಹರೂ ಅವರು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಂಬೇಡ್ಕರ್‌ ಅವರು ತಾತ್ಕಾಲಿಕವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಒಪ್ಪಿದರು ಎಂದು ತಿಳಿಸಿದರು.

ಜನ ಸಂಘದ ಸಂಸ್ಥಾಪಕ ಶ್ಯಾಮ್‌ ಪ್ರಕಾಶ್‌ ಮುಖರ್ಜಿ ಅವರು ಕಾಶ್ಮೀರಕ್ಕೆ ನೀಡಲಾಗಿದ್ದ ಪ್ರತ್ಯೇಕ ಧ್ವಜ, ಪ್ರತ್ಯೇಕ ಸಂವಿಧಾನ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಅನಂತರದ ದಿನಗಳಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ಅವರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಅಂದಿನ ಪ್ರಧಾನಿ ನೆಹರೂ ಅವರನ್ನು ಒತ್ತಾಯಿಸಿದರೂ ಪ್ರಯೋಜನವಾಗಲಿಲ್ಲ ಎಂದರು.

ಕಾಶ್ಮೀರದ ಬಗ್ಗೆ ಅಪಪ್ರಚಾರ
370ನೇ ವಿಧಿ ರದ್ಧತಿಯ ಅನಂತರ ಕಾಶ್ಮೀರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಕಾಂಗ್ರೆಸ್‌ ಸಹಿತ ವಿಪಕ್ಷಗಳು ಈ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ದೇಶದ್ರೋಹಿಗಳನ್ನು ಮಾತ್ರ ಬಂಧನದಲ್ಲಿಡಲಾಗಿದ್ದು, “ಝಡ್‌ ಪ್ಲಸ್‌’ ಶ್ರೇಣಿಯ ಭದ್ರತೆಯನ್ನು ಹಿಂಪಡೆಯಲಾಗಿದೆ. ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗವಾಗಿದೆ ಎಂದು ನುಡಿದರು.

Advertisement

ಕಾಶ್ಮೀರಿ ಪಂಡಿತರು ಈ ಹಿಂದೆ ಸಾಕಷ್ಟು ನೋವು ಅನುಭವಿಸಿದ್ದಾರೆ. ಹೀಗಾಗಿ ಅವರು ಮನೆ ಬಿಟ್ಟು ಹೊರಬಂದಿದ್ದಾರೆ.ಅಂಥವರು ಮತ್ತೆ ತಮ್ಮ ಮನೆ ಸೇರಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಒಂದು ಶಕ್ತಿಯಾಗಿ ಹೊರಹೊಮ್ಮುತ್ತಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಕಾರಣರಾಗಿದ್ದಾರೆ ಎಂದರು.

ಪಿಒಕೆ ಭಾರತದ ತೆಕ್ಕೆಗೆ
ಭಯೋತ್ಪಾದನೆ ಮುಕ್ತ ಭಾರತಕ್ಕಾಗಿ ಕೇಂದ್ರ ಸರಕಾರ ಪಣತೊಟ್ಟಿದೆ. ಈಗಾಗಲೇ ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದೆ. ಹೀಗಾಗಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ದಿನ ಬಹಳ ದೂರವಿಲ್ಲ ಎಂದು ಸಚಿವ ಪ್ರಹ್ಲಾದ್‌ ಜೋಷಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next