ನವದೆಹಲಿ: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ಜಟಾಪಟಿ ಮುಂದುವರಿದಿರುವ ನಡುವೆಯೇ ಕೇಂದ್ರ ಸರ್ಕಾರ ನೆಹರು ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಹೆಸರನ್ನು ಬದಲಾಯಿಸಿ ಪ್ರಧಾನಮಂತ್ರಿಗಳ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ ಎಂದು ಮರುನಾಮಕರಣ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ:CBI; ಸೌಜನ್ಯ ಪ್ರಕರಣ: ಆರೋಪಿ ಸಂತೋಷ್ ರಾವ್ ನಿರ್ದೋಷಿ, ಬಿಡುಗಡೆ
ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಅಧಿಕೃತ ನಿವಾಸವಾಗಿ ಸೇವೆ ಸಲ್ಲಿಸಿದ್ದ ತೀನ್ ಮೂರ್ತಿ ಭವನದ ಆವರಣದಲ್ಲಿ ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಉದ್ಘಾಟಿಸಿದ್ದ ಒಂದು ವರ್ಷದ ನಂತರ ಜವಾಹರಲಾಲ್ ನೆಹರು ಸ್ಮಾರಕದ ಹೆಸರನ್ನು ಮರು ನಾಮಕರಣ ಮಾಡುವುದಕ್ಕೆ ಸಿದ್ಧತೆ ನಡೆದಿತ್ತು ಎಂದು ವರದಿ ತಿಳಿಸಿದೆ.
ಸ್ಮಾರಕದ ಹೆಸರನ್ನು ಬದಲಾಯಿಸುವ ನಿಟ್ಟಿನಲ್ಲಿ ನೆಹರು ಸ್ಮಾರಕ ಮ್ಯೂಸಿಯಂ ಮತ್ತು ಲೈಬ್ರರಿ ಸೊಸೈಟಿ(ಎನ್ ಎಂಎಂಎಲ್)ಯ ಜೊತೆ ವಿಶೇಷ ಸಭೆ ನಡೆಸಲಾಗಿತ್ತು. ಸೊಸೈಟಿಯ ಉಪಾಧ್ಯಕ್ಷ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಅನುಮತಿ ಪಡೆಯಲಾಗಿತ್ತು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ಕಟ್ಟಡಗಳ ಮರುನಾಮಕರಣದಿಂದ ಪರಂಪರೆಯನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಅಲ್ಲದೇ ಇದೊಂದು ಸೇಡಿನ ಕ್ರಮವಾಗಿದೆ ಎಂದು ಪ್ರತಿಪಾದಿಸಿದೆ.