Advertisement

ಕುಂದಾಪುರದ ನೆಹರೂ ಮೈದಾನ ಹಸ್ತಾಂತರ ಸನ್ನಿಹಿತ: ಸರ್ವೇ ಕಾರ್ಯ ಪೂರ್ಣ, ಡಿಸಿ ಆದೇಶ ಬಾಕಿ

11:56 PM Dec 11, 2022 | Team Udayavani |

ಕುಂದಾಪುರ : ಕಳೆದ 50 ವರ್ಷಗಳಿಂದ ಬದಲಾಗದ ದಾಖಲೆ ಈ ಬಾರಿ ಆಗುವುದರಲ್ಲಿದೆ. ಎಸಿ ಆದೇಶ ಇದ್ದರೂ ಕಡತದಲ್ಲೇ ಬಾಕಿಯಾದ ಕೆಲಸವೊಂದು ಈಗ ಚುರುಕುಗೊಂಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕುಂದಾಪುರದ ನೆಹರೂ ಮೈದಾನ ಪುರಸಭೆಯ ಆಸ್ತಿಯಾಗಲಿದೆ. ಈವರೆಗೆ ಅದು ಕಂದಾಯ ಇಲಾಖೆ ಹಿಡಿತದಲ್ಲಿತ್ತು. ಸರಕಾರ 50 ವರ್ಷಗಳ ಹಿಂದೆಯೇ
ಗಜೆಟ್‌ ನೋಟಿಫಿಕೇಶನ್‌ ಹೊರಡಿಸಿದ್ದರೂ ಕಂದಾಯ ಇಲಾಖೆ ಹಸ್ತಾಂತರವನ್ನೇ ಮಾಡಿರಲಿಲ್ಲ. ಪರಿಣಾಮ ಮೈದಾನದ ಜಾಗವೆಲ್ಲ ಒತ್ತುವರಿಯಾಗಿದೆ.

Advertisement

ಬಾಕಿಯಾಗಿದೆ
ಕುಂದಾಪುರ ಪುರಸಭೆ ವ್ಯಾಪ್ತಿಯ ವಡೇರ ಹೋಬಳಿ ಗ್ರಾಮದ ಆರ್‌ಟಿಸಿ (ಪಹಣಿ ಪತ್ರಿಕೆ)ಯಲ್ಲಿ ಕಾಲಂ ನಂ.9ರಲ್ಲಿ ಈಗಲೂ ಪಂಚಾಯತ್‌ ಬೋರ್ಡ್‌ ಪ್ರಸಿಡೆಂಟ್‌ ಎಂದು ದಾಖಲಾಗಿದೆ. 1959ರಲ್ಲಿ ಜಿಲ್ಲಾ ಬೋರ್ಡ್‌ ರದ್ದಾಗಿ ತಾಲೂಕು ಬೋರ್ಡ್‌, ಜಿಲ್ಲಾ ಪರಿಷತ್‌ಗಳ ವ್ಯವಸ್ಥೆ ಬಂದಿತು. 1972ರಲ್ಲಿ ಪುರಸಭೆ ಆರಂಭವಾಯಿತು. ಪುರಸಭೆ ಆರಂಭವಾಗಿ ಸುವರ್ಣ ಮಹೋತ್ಸವ ವರ್ಷ ಮುಗಿಯುತ್ತಲಿದೆ. ಹಾಗಿದ್ದರೂ 1959ರಿಂದ ಇರುವ ಪಂಚಾಯತ್‌ ಬೋರ್ಡ್‌ ಹೆಸರು ತೆಗೆದು ದಾಖಲಾತಿಗಳಲ್ಲಿ ಪುರಸಭೆ ಹೆಸರು ಕಾಣಿಸಿಕೊಳ್ಳಲು ಈ ವರೆಗೂ ಸಾಧ್ಯವಾಗಿಲ್ಲ.

ಉಳಿಕೆ 1.4 ಎಕರೆ ಮಾತ್ರ
ಪುರಸಭೆಗೆ ನೀಡಬೇಕಾದ 2.6 ಎಕರೆ ಮೈದಾನದ ಜಾಗದಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಟೆಲಿಫೋನ್‌ ಇಲಾಖೆ, ಶಾಲೆ, ಕಾಲೇಜು, ಹಾಸ್ಟೆಲ್‌, ಯುವಜನ ಸೇವಾ ಇಲಾಖೆ ಹೀಗೆ ಬೇರೆ ಬೇರೆಯವರಿಗೆ ಕಂದಾಯ ಇಲಾಖೆ ವಿತರಿಸಿದೆ. ಪುರಸಭೆಗೆ ನೀಡಬೇಕಾದ ಜಾಗವನ್ನು ಪುರಸಭೆಯ ಅನುಮತಿಯೇ ಇಲ್ಲದೇ ಹಂಚಿದ್ದು ಈಗ ಉಳಿಕೆ ಜಾಗ 1.4 ಎಕರೆ ಎಂದು ಸರ್ವೇ ಮಾಡಿದಾಗ ಗೊತ್ತಾಗಿದೆ. ಇಷ್ಟನ್ನೇ ಹಸ್ತಾಂತರಿಸಬೇಕಿದೆ. ಒತ್ತುವರಿ, ವಿತರಣೆ ಮಾಡಿದ ಮೈದಾನದ ಆಸೆ ಬಿಟ್ಟುಬಿಡಬೇಕಷ್ಟೆ.

ಪತ್ರ, ಸಭೆ
ಪುರಸಭೆ ಈ ಕುರಿತು ಅನೇಕ ಪತ್ರ ವ್ಯವಹಾರಗಳನ್ನು ನಡೆಸಿ, ಸಭೆಗಳನ್ನು ಆಯೋಜಿಸಿ ಕೊನೆಗೂ ದಾಖಲಾತಿ ತಿದ್ದಿಸುವಲ್ಲಿ ಯಶಸ್ವಿಯಾಯಿತು. 2017ರ ಎ.7ರಂದು ಸಹಾಯಕ ಕಮಿಷನರ್‌ ಅವರು ಕಾಲಂ ನಂ.9ರ ತಿದ್ದುಪಡಿಗೆ ಆದೇಶ ಮಾಡಿದರು. ಅದಾದ ಬಳಿಕ ತಾಲೂಕು ಕಚೇರಿಯಲ್ಲಿ ಈ ಪ್ರಕ್ರಿಯೆ ಮುಂದುವರಿಯಬೇಕು. ಆದರೆ ಇಷ್ಟು ವರ್ಷಗಳಾದರೂ ಈ ಕುರಿತಾದ ಪ್ರಕ್ರಿಯೆ ನಡೆಯಲೇ ಇಲ್ಲ. ಭೂಮಿ ಶಾಖೆ ನಿರ್ವಹಣೆಯಲ್ಲಿ ರಾಜ್ಯದಲ್ಲಿ ನಂ.1 ಆದ ಕುಂದಾಪುರ ತಾಲೂಕು, ಕಂದಾಯ ಇಲಾಖೆ ಕೆಲಸ ಕಾರ್ಯಗಳಲ್ಲಿ ಸತತ 70 ತಿಂಗಳುಗಳಿಂದ ನಂ.1 ಆದ ಉಡುಪಿ ಜಿಲ್ಲೆಯಲ್ಲಿ ಸರಕಾರದ್ದೇ ಇನ್ನೊಂದು ಪೌರಾಡಳಿತ ಸಂಸ್ಥೆಗೆ ದಾಖಲೆ ಸರಿಮಾಡಿಸಿಕೊಡಲು ಆಗಲಿಲ್ಲ ಎನ್ನುವುದು ವಿಪರ್ಯಾಸ. ದೀಪದ ಬುಡದಲ್ಲಿ ಕತ್ತಲು ಎಂಬಂತೆ 200ರಷ್ಟು ಜಾಗದ ಆರ್‌ಟಿಸಿ, ಕನಿಷ್ಠ 1 ಸೆಂಟ್ಸ್‌ ಲೆಕ್ಕ ಹಾಕಿದರೂ 2 ಎಕರೆ ಆಗುತ್ತದೆ. ಅದಕ್ಕಿಂತಲೂ ಹೆಚ್ಚಿನ ಭೂಮಿಯ ದಾಖಲಾತಿ ತಿದ್ದುಪಡಿಯಾಗದೇ ಹಾಗೆಯೇ ಬಾಕಿಯೇ ಆಗಿದೆ.

ಸರ್ವೇ ಕಾರ್ಯ
ಮೈದಾನದ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ, ಸರ್ವೇ ಇಲಾಖೆ ಜತೆಗೂಡಿ ನಡೆಸಿದೆ. 2.6 ಎಕರೆ ಮೈದಾನದಲ್ಲಿ ಒತ್ತುವರಿಯಾಗದೇ 1.4 ಎಕರೆ ಉಳಿದಿದೆ ಎಂದು ಗೊತ್ತಾಗಿದೆ. ಅದನ್ನಷ್ಟೇ ಹಸ್ತಾಂತರ ಮಾಡಬೇಕು. ಸ‌ರ್ವೇ ವರದಿ ಸಿದ್ಧಗೊಳ್ಳಬೇಕು. ತಹಶೀಲ್ದಾರರು ಜಿಲ್ಲಾಧಿಕಾರಿಗೆ ಬರೆಯಬೇಕು. ಜಿಲ್ಲಾಧಿಕಾರಿಗಳು ಕಾಲಂ 9ರಲ್ಲಿ ಪುರಸಭೆ ಹೆಸರು ಸೂಚಿಸಲು ಆದೇಶಿಸಬೇಕು. ಅನಂತರವಷ್ಟೇ ಕಂದಾಯ ಇಲಾಖೆ ಪುರಸಭೆಯ ಹೆಸರು ನಮೂದಿಸಬೇಕು. ಆಗಲಷ್ಟೇ ನೆಹರೂ ಮೈದಾನದ ಅಧಿಕೃತ ಹಕ್ಕುದಾರ ಪುರಸಭೆ ಆಗಲಿದೆ.

Advertisement

ಸುಲಭವೇ
ಇಷ್ಟೆಲ್ಲ ಸರಕಾರಿ ಪ್ರಕ್ರಿಯೆಗಳಿಗೆ ಇನ್ನೆಷ್ಟು ಸಮಯ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ತೀರಾ ಈಚೆಗೆ ನಡೆದ ಸಭೆಯಲ್ಲೂ ಪುರಸಭೆ ಮುಖ್ಯಾಧಿಕಾರಿ, ಸದಸ್ಯರು,
ಸ್ಥಾಯೀ ಸಮಿತಿಯವರು ಈ ಕುರಿತು ಪ್ರಶ್ನೆ ಮಾಡಿದ್ದಾರೆ.

ಕಂದಾಯ ಇಲಾಖೆ ಜಡ ಬಿಟ್ಟರೆ ಈ ಕೆಲಸ ಸಲೀಸು. ಆನಂತರ ನೆಹರೂ ಮೈದಾನದ ಕಾರ್ಯಕ್ರಮಗಳಿಗೆ ಪರವಾನಗಿ ಕೊಡುವ ಅಧಿಕಾರ ಪುರಸಭೆಗೆ ದೊರೆಯಲಿದೆ. ಆದರೆ ಯಕ್ಷಗಾನದ ಮೇಲೆ ಇರುವ ನಿರ್ಬಂಧ ಈ ಹಿಂದಿನಂತೆಯೇ ಇರಲಿದೆ.

ಡಿಸಿಗೆ ಪತ್ರ
ನೆಹರೂ ಮೈದಾನದ ಸರ್ವೆ ಕಾರ್ಯ ಮುಗಿದಿದ್ದು ತಹಶೀಲ್ದಾರರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಕ್ರಮಗಳ ಕುರಿತು ಮನವಿ ಮಾಡಲಿದ್ದಾರೆ. ಆರ್‌ಟಿಸಿಯಲ್ಲಿ ಹೆಸರು ನಮೂದಿಸಲು ಡಿಸಿಯಿಂದ ಪತ್ರ ಬಂದ ಬಳಿಕವಷ್ಟೇ ಆಸ್ತಿ ಪರಭಾರೆಯಾಗಲಿದೆ.

-ದಿನೇಶ್‌, ಕಂದಾಯ ನಿರೀಕ್ಷಕರು, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next