Advertisement

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

11:32 PM Nov 17, 2024 | Team Udayavani |

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ ಭುಗಿಲೆದ್ದಿದೆ. ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ರಾಜ್ಯದ ಬಹುಸಂಖ್ಯಾತ‌ ಮೈತೇಯಿ ಹಾಗೂ ಕುಕಿ ಮತ್ತು ನಾಗಾ ಸಮುದಾಯಗಳನ್ನೊಳಗೊಂಡ ಅಲ್ಪ ಸಂಖ್ಯಾತರ ನಡುವೆ ಭಾರೀ ಹಿಂಸಾಚಾರ ನಡೆಯುತ್ತಲೇ ಬಂದಿದೆ. ಕುಕಿ ಬಂಡು ಕೋರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕಳೆದ ವಾರ 10 ಮಂದಿ ಕುಕಿ ಬಂಡುಕೋರರು ಸಾವನ್ನಪ್ಪಿದ್ದರಿಂದ ರೊಚ್ಚಿಗೆದ್ದ ಕುಕಿ ಬಂಡುಕೋರರು ರಾಜ್ಯದಲ್ಲಿ ಮತ್ತೆ ಮೈತೇಯಿ ಸಮುದಾಯವನ್ನು ಗುರಿ ಯಾಗಿಸಿ ಹಿಂಸಾಕೃತ್ಯಗಳನ್ನು ಎಸಗಲಾರಂಭಿಸಿದ್ದಾರೆ. ಕುಕಿಗಳು ಅಪಹರಿಸಿದ್ದ ಮೈತೇಯಿ ಸಮುದಾಯದ ಮೂವರು ಮಕ್ಕಳು ಮತ್ತು ಮೂವರು ಮಹಿಳೆಯ ರ ನ್ನೊಳಗೊಂಡಂತೆ 6 ಮಂದಿಯ ಶವ ನದಿಯಲ್ಲಿ ಪತ್ತೆಯಾಗುತ್ತಿದ್ದಂತೆಯೇ ರಾಜ್ಯದ ವಿವಿಧೆಡೆ ಇತ್ತಂಡಗಳ ನಡುವೆ ಸಂಘರ್ಷ ತಾರಕಕ್ಕೇರಿದೆ.

Advertisement

ಮೈತೇಯಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರವಾಗಿ ಆರಂಭ ಗೊಂಡ ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಣಿಪುರ ರಾಜ್ಯ ಸರಕಾರಕ್ಕಾಗಲೀ, ಕೇಂದ್ರ ಸರಕಾರಕ್ಕಾಗಲೀ ಈವರೆಗೆ ಸಾಧ್ಯವಾಗಿಲ್ಲ. ದಶಕಗಳ ಹಿಂದೆ ಕಟ್ಟಾ ವೈರಿಗಳಾಗಿದ್ದ ಕುಕಿ ಮತ್ತು ನಾಗಾ ಬುಡಕಟ್ಟು ಸಮುದಾಯಗಳು ಈಗ ಬಹುಸಂಖ್ಯಾತ ಮೈತೇಯಿ ಸಮುದಾಯದ ವಿರುದ್ಧ ಒಂದಾಗಿ ತಿರುಗಿ ಬಿದ್ದಿವೆ.
ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದಾಗಿನಿಂದಲೂ ರಾಜ್ಯ ಮತ್ತು ಕೇಂದ್ರ ಸರಕಾರ ಸಂಧಾನ ಮಾತುಕತೆಗಿಂತ ಹೆಚ್ಚಾಗಿ ಬಲಪ್ರಯೋಗಕ್ಕೆ ಒತ್ತು ನೀಡುತ್ತ ಬಂದಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ. ಇದರಿಂದ ಇತ್ತಂಡಗಳೂ ಈ ವಿಷಯವನ್ನು ಪ್ರತಿಷ್ಠೆಯನ್ನಾಗಿಸಿಕೊಂಡು ತಮ್ಮ ನಿಲುವನ್ನು ಸಡಿಲಗೊಳಿಸುತ್ತಿಲ್ಲ.

ಕೇಂದ್ರ ಸರಕಾರ ಭದ್ರತಾ ಪಡೆಗಳನ್ನು ಬಳಸಿಕೊಂಡು ಹಿಂಸಾಕೃತ್ಯಗಳಲ್ಲಿ ತೊಡಗಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗುತ್ತಿದೆ. ಆದರೆ ಈ ಶಾಂತಿ ಕೇವಲ ಒಂದೆರಡು ವಾರಕ್ಕೆ ಸೀಮಿತಗೊಳ್ಳುತ್ತಿದ್ದು ಮತ್ತೆ ರಾಜ್ಯದ ಒಂದಲ್ಲ ಒಂದು ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದು ಸಾರ್ವಜನಿಕ ಆಸ್ತಿಪಾಸ್ತಿಗೆ ಲಕ್ಷಾಂತರ ರೂ. ಹಾನಿಯುಂಟು ಮಾಡುತ್ತಿದೆ.

ಮಣಿಪುರದಲ್ಲಿ ಸೃಷ್ಟಿಯಾಗಿರುವ ಈ ಜನಾಂಗೀಯ ಸಂಘರ್ಷದ ನಿಭಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಸಮನ್ವಯತೆಯ ಕೊರತೆ ಇರುವಂತೆ ಭಾಸವಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಒಂದೇ ಪಕ್ಷದ ಹಿಡಿತದಲ್ಲಿದ್ದಾಗ್ಯೂ ಉಭಯ ಸರಕಾರಗಳ ನಡುವೆ ತಾಳಮೇಳ ಹೊಂದಾಣಿಕೆಯಾಗದಿರುವುದು ವಿಪರ್ಯಾಸವೇ ಸರಿ. ಸರಕಾರ ಮತ್ತು ಆಡಳಿತದಲ್ಲಿನ ಈ ಎಲ್ಲ ಲೋಪಗಳನ್ನು ಬಂಡುಕೋರ ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳು ಬಳಸಿಕೊಳ್ಳುತ್ತಿದ್ದು ರಾಜ್ಯದಲ್ಲಿ ಎದ್ದಿರುವ ಜನಾಂಗೀಯ ಸಂಘರ್ಷಕ್ಕೆ ತುಪ್ಪ ಸುರಿಯುತ್ತಲೇ ಬಂದಿದೆ. ಇದು ಕೂಡ ಬುಡಕಟ್ಟು ಸಮುದಾಯಗಳು ಪದೇಪದೆ ಕಾನೂನು ಕೈಗೆತ್ತಿಕೊಳ್ಳಲು ಕಾರಣವಾಗುತ್ತಿದೆ.

ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರಕಾರ ಎರಡೂ ಸಮುದಾಯಗಳಿಗೆ ಸೇರಿದ ಸಂಘಟನೆಗಳ ನಾಯಕರನ್ನು ಒಂದೆಡೆ ಸೇರಿಸಿ ಸಂಧಾನ ಮಾತುಕತೆ ನಡೆ ಸುವ ಮತ್ತು ಈ ಎರಡು ಸಮುದಾಯಗಳ ನಡುವೆ ಸೃಷ್ಟಿಯಾಗಿರುವ ಕಂದಕ ವನ್ನು ಮುಚ್ಚುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆಡಳಿತಾರೂಢರು ರಾಜಕೀಯ ಪ್ರತಿಷ್ಠೆಯನ್ನು ಬದಿಗಿಟ್ಟು ಒಂದಿಷ್ಟು ಹೊಂದಾ ಣಿಕೆಯ ಕೊಡು-ಕೊಳ್ಳುವ ನೀತಿಯನ್ನು ಅನುಸರಿಸಬೇಕು. ಬಲ ಪ್ರಯೋಗವೇನಿದ್ದರೂ ಆ ಕ್ಷಣದ ಉದ್ವಿಗ್ನತೆಯನ್ನು ಶಮನ ಮಾಡಬಹುದೇ ವಿನಾ ಅದೆಂದಿಗೂ ಶಾಶ್ವತ ಪರಿಹಾರವಾಗಲಾರದು ಎಂಬುದನ್ನು ಸರಕಾರ ಮೊದಲು ಮನಗಾಣಬೇಕು.ಇದೇ ವೇಳೆ ಸರಕಾರ ಬಂಡುಕೋರ, ಉಗ್ರಗಾಮಿ ಮತ್ತು ಪ್ರತ್ಯೇಕತಾವಾದವನ್ನು ಹೊಸಕಿ ಹಾಕುವ ವಿಚಾರದಲ್ಲಿ ಇನ್ನಷ್ಟು ಕಠಿನ ಧೋರಣೆಯನ್ನು ಅನುಸರಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next