ಬೆಂಗಳೂರು: ಇಬ್ಬರು ಶಾಸಕರ ರಾಜೀನಾಮೆ ಬಳಿಕ ಎಚ್ಚೆತ್ತಿರುವ ರಾಜ್ಯದ ಮೈತ್ರಿ ಪಕ್ಷಗಳು ಅತೃಪ್ತ ಶಾಸಕರ ಜತೆ ಸಂಧಾನ ಸಭೆಗೆ ಮುಂದಾಗಿವೆ. ಅಮೆರಿಕ ಪ್ರವಾಸದಲ್ಲಿರುವ ಸಿಎಂ ಕುಮಾರಸ್ವಾಮಿ ಅವರು, ವಾಪಸ್ ಬರುತ್ತಿದ್ದಂತೆ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸರ್ಕಾರದ ಟ್ರಬಲ್ ಶೂಟರ್ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು. 9ರಿಂದ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ ಅವರು ಜಿಲ್ಲಾವಾರು ಶಾಸಕರ ಸಭೆ ನಡೆಸಲಿದ್ದಾರೆ. ವಿಧಾನಸಭೆ ಅಧಿವೇಶನಕ್ಕೂ ಮುನ್ನವೇ, ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ತಿಳಿಸಿದ್ದಾರೆ.
ಯಾವುದೇ ಶಾಸಕರು ರಾಜೀನಾಮೆ ನೀಡುವುದಿಲ್ಲ. ಕೆಲವರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಲ್ಲರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿದ್ದಾರೆ. ಯಾವುದೇ ಅತೃಪ್ತರ ತಂಡ ಇಲ್ಲ. ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಕುರಿತು ಕೇಳಿದ ಪ್ರಶ್ನೆಗೆ ಯಾರು ಜಾಸ್ತಿ ಪ್ರೀತಿ ಮಾಡುತ್ತಾರೋ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಅತೃಪ್ತರಲ್ಲಿ ಗೊಂದಲ: ಎಲ್ಲವೂ ಅಂದುಕೊಂಡಂತಾಗಿದ್ದರೆ ಬುಧವಾರ ಕನಿಷ್ಠ 4 ಅತೃಪ್ತ ಶಾಸಕರು ರಾಜೀನಾಮೆ ನೀಡಬೇಕಾಗಿತ್ತು. ಆದರೆ, ರಮೇಶ್ ಜಾರಕಿಹೊಳಿ ಅವರು ಅಜ್ಞಾತ ಸ್ಥಳದಲ್ಲಿ ಅತೃಪ್ತರೊಂದಿಗೆ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ರಾಜೀನಾಮೆ ಬಗ್ಗೆ ಅತೃಪ್ತರಲ್ಲೇ ಗೊಂದಲಗಳು ಏರ್ಪಟ್ಟಿವೆ ಎಂದು ಹೇಳಲಾಗಿದ್ದು, ಹೀಗಾಗಿ ಬುಧವಾರ ಯಾರೂ ರಾಜೀನಾಮೆಗೆ ಮುಂದಾಗಿಲ್ಲ. ಅಷ್ಟೇ ಅಲ್ಲ, ಸೋಮವಾರವಷ್ಟೇ ಫ್ಯಾಕ್ಸ್ ಮೂಲಕ ರಾಜೀನಾಮೆ ಕಳುಹಿಸಿದ್ದ ರಮೇಶ್ ಜಾರಕಿಹೊಳಿ ಅವರೂ, ಖುದ್ದಾಗಿ ಸ್ಪೀಕರ್ ಭೇಟಿ ಮಾಡಿ ಪದತ್ಯಾಗ ಪತ್ರ ಸಲ್ಲಿಸಿಲ್ಲ.
ಬಿಜೆಪಿ ಜತೆ ವಿಶ್ವನಾಥ್ ಭಾಯಿ ಭಾಯಿ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆದಿರುವ ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರು, ದೆಹಲಿಯಲ್ಲಿ ಬಿಜೆಪಿ ನಾಯಕರ ಜತೆ ಕಾಣಿಸಿಕೊಂಡಿದ್ದಾರೆ. ಬುಧವಾರ ಶ್ರೀನಿವಾಸ ಪ್ರಸಾದ್, ಬಸವರಾಜ್ ಮತ್ತು ಬಿ.ವೈ.ರಾಘವೇಂದ್ರ ಅವರ ಜತೆ ಉಪಾಹಾರವನ್ನೂ ಸೇವಿಸಿದ್ದಾರೆ. ವಿಶ್ವನಾಥ್ ಸದ್ಯದಲ್ಲೇ ಬಿಜೆಪಿಯತ್ತ ಹೋಗಲಿದ್ದಾರೆ ಎಂಬ ವದಂತಿಗಳೂ ಹರಿದಾಡಿದವು. ಆದರೆ, ಇದನ್ನು ವಿಶ್ವನಾಥ್ ಅವರೇ ತಳ್ಳಿಹಾಕಿದರು.