ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನಡುವೆ ಸೋಮವಾರ ನಡೆದ ಸಂಧಾನ ಸಭೆ ಬಹುತೇಕ ಸಫಲವಾಗಿದ್ದು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಡುವ ಸಾಧ್ಯತೆಯಿದೆ. ಕಳೆದ ಎರಡು ದಿನಗಳಿಂದ ಮೌನ ಪ್ರತಿಭಟನೆಗೆ ಮುಂದಾಗಿದ್ದ ಕಿರಿಯ ವೈದ್ಯರು ಸೋಮವಾರ ಕರವೇ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ದಿನವಿಡೀ ನಡೆಸಿದ ಸಭೆಗೂ ಜಗ್ಗದ ಮಿಂಟೊ ಆಸ್ಪತ್ರೆಯ ಕಿರಿಯ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಸರ್ಕಾರದಿಂದ ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರ ಸಡಿಲಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸಂತ್ರಸ್ತರ ಪರ ಪ್ರತಿಭಟನೆ ವೇಳೆ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಆಡಳಿತ ಮಂಡಳಿಯಿಂದಾದ ತಪ್ಪಿಗೆ ವೈದ್ಯ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವುದು ಸರಿಯಲ್ಲ. ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಉನ್ನತ ಶಿಕ್ಷಣ ಪರಿಷತ್‌ನಲ್ಲಿ ಸಭೆ ಬಳಿಕ ಮಾತನಾಡಿದ ಡಾ.ಅಶ್ವತ್ಥ್ ನಾರಾಯಣ, ಹೆಚ್ಚಿನ ರಕ್ಷಣೆಗೆ ಕೇಂದ್ರ ಕೈಗಾರಿಕೆ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆ ನಿಯೋಜಿಸಲಾಗುವುದು. ಕೃತಕ ಬುದ್ಧಿಮತ್ತೆಯಂಥ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಸುರಕ್ಷತೆ ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ಸಿಸಿಟಿವಿ ಅಳವಡಿಸಲಾಗುವುದು. ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಸುರಕ್ಷಿತ ವಾತಾವರಣ ಸೃಷ್ಟಿಸುತ್ತೇವೆ ಎಂದು ಆಸ್ವಾಸನೆ ನೀಡಿದ್ದಾರೆ.
ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಬಳಿಕ ದೃಷ್ಟಿ ಕಳೆದುಕೊಂಡಿರುವ ಪ್ರಕರಣ ಸಂಬಂಧ ಜಯದೇವ ಹೃದ್ರೋಗ ಸಂಸ್ಥೆ ಡಾ.ರವೀಂದ್ರ ನೇತೃತ್ವದಲ್ಲಿ ಸತ್ಯ ಶೋಧನೆ ಸಮಿತಿ ರಚಿಸಲಾಗಿದೆ. ಸಮಿತಿಯಿಂದ ಮಾಹಿತಿ ಪಡೆಯಲಾಗಿದೆ. ಸಂಬಂಧಪಟ್ಟವರ ವಿಚಾರಣೆಯೂ ಆಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಮೂರು ಲಕ್ಷ ಪರಿಹಾರ: ಮಿಂಟೋ ಆಸ್ಪತ್ರೆಯಲ್ಲಿ ಜುಲೈ ತಿಂಗಳಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಸಂಭವಿಸಿದ ಅನಾಹುತದಿಂದ ದೃಷ್ಟಿ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ 3 ಲಕ್ಷ ರೂ. ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವುದು ತಡವಾಗಿದೆ. ಅವರ ನೋವು ಅರ್ಥ ಮಾಡಿಕೊಂಡಿರುವ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ನೀಡಲಿದೆ.
ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಾಗುವುದು. ಜೊತೆಗೆ ಮುಂದಿನ ದಿನಗಳಲ್ಲಿ ತಪ್ಪಿತಸ್ಥ ಕಂಪನಿಯಿಂದ ಆ ಹಣ ವಸೂಲಿ ಮಾಡಲಾಗುವುದು. ಆದರೆ, ತಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಎಷ್ಟೇ ದುಬಾರಿಯಾದರೂ ದೃಷ್ಟಿ ಕಳೆದುಕೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವುದು ಸರ್ಕಾರದ ಜವಾಬ್ದಾರಿ. ಈ ವಿಷಯದಲ್ಲಿ ರಾಜಿ ಇಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದರು.