Advertisement

ಸಂತ್ರಸ್ತರ ಮನೆಗಳ ಪುನರ್‌ನಿರ್ಮಾಣದಲ್ಲಿ ನಿರ್ಲಕ್ಷ್ಯ ಆರೋಪ

11:30 PM Feb 17, 2020 | Lakshmi GovindaRaj |

ಬೆಂಗಳೂರು: ಪ್ರವಾಹ ಸಂಭವಿಸಿ ಸುಮಾರು 7 ತಿಂಗಳು ಕಳೆದರೂ ಸಂತ್ರಸ್ತರ ಮನೆಗಳ ಪುನರ್‌ ನಿರ್ಮಾಣದಲ್ಲಿ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಆ ಹಿನ್ನೆಲೆಯಲ್ಲಿಯೇ ಬೆಳಗಾವಿ ಮತ್ತು ಬಾಗಲಕೋಟೆ ಭಾಗದ ಸಂತ್ರಸ್ತರ ಬದುಕು ಮುರಾಬಟ್ಟೆಯಾಗಿದೆ ಎಂದು ಉತ್ತರ ಕರ್ನಾಟಕ ನೆರೆ ಸಂತ್ರಸ್ತ ಸಮುದಾ ಯದ ಪ್ರತಿನಿಧಿಗಳು ದೂರಿದರು.

Advertisement

ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪ್ರವಾಹ ಸಂತ್ರಸ್ತರಾದ ಸಂಜೀವ್‌ ಕಾಂಬ್ಳೆ ಹಾಗೂ ಸುರೇಶ್‌ ಕಾಂಬ್ಳೆ, ಭಾರಿ ಮಳೆ ಹಿನ್ನೆಲೆಯಲ್ಲಿ ಅನೇಕ ಶಾಲೆಗಳು ನೆಲಕಚ್ಚಿವೆ. ವಿದ್ಯಾರ್ಥಿ ಗಳ ಕಲಿಕಾ ಪರಿಕರಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಸುಮಾರು ಎರಡು ತಿಂಗಳಿಂದ ಮಕ್ಕಳಿಗೆ ಕಲಿಕೆ ಕೂಡ ಇಲ್ಲ. ಮಾರ್ಚ್‌ನಲ್ಲಿ ಪರೀಕ್ಷೆ ಇರುವುದರಿಂದ ಅವರು ಹೇಗೆ ಪರೀಕ್ಷೆ ಎದುರಿಸುತ್ತಾರೆ ಎಂಬುದೇ ತಿಳಿಯುತ್ತಿಲ್ಲ.

ಆ ಹಿನ್ನೆಲೆಯಲ್ಲಿ 7ನೇ ತರಗತಿಯ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ಹಾಗೂ ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆ ಗಳನ್ನು 2 ತಿಂಗಳು ಮುಂದೂಡಬೇಕು ಎಂದು ಒತ್ತಾಯಿಸಿದರು. ಕೃಷ್ಣ, ಮಲಪ್ರಭಾ, ಘಟಪ್ರಭಾ ನದಿ ಪಾತ್ರಗಳಲ್ಲಿ ಬದುಕುತ್ತಿರುವ ಜನರು ಪುನರ್‌ವಸತಿ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸರ್ಕಾರ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿ ಪುನರ್‌ ವಸತಿಗಾಗಿ ವಿಶೇಷ ಕ್ರಿಯಾ ಯೋಜನೆ ರೂಪಿಸಬೇಕು. ನೆರೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಯೋಗ್ಯ ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಯಲ್ಲಪ್ಪ ಕಾಂಬ್ಳೆ ಮಾತನಾಡಿ, ನರೇಗಾ ಕಾಯ್ದೆ ಅನ್ವಯ ಪ್ರಕೃತಿ ವಿಕೋಪ ಸಂದರ್ಭದಲ್ಲಿ 150 ದಿನ ಉದ್ಯೋಗ ನೀಡಿ ಜನರ ಆರ್ಥಿಕ ಸಂಕಷ್ಟಕ್ಕೆ ನೆರವಾಗಬೇಕೆಂದು ಉಲ್ಲೇಖವಿದೆ. ಆದರೆ ಉತ್ತರ ಕರ್ನಾಟಕದ ಪ್ರವಾಹ ಉಂಟಾದ ಸ್ಥಳಗಳಲ್ಲಿ ಜನರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಹಣವಿಲ್ಲ ಎಂಬ ನೆಪವೊಡ್ಡಿ ಕೆಲಸದ ಅರ್ಜಿಗಳನ್ನು ಕೂಡ ಸ್ವೀಕರಿಸುತ್ತಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next