ರಾಮನಗರ: ತಾಲೂಕಿನ ಬಿಡದಿ ಪಟ್ಟಣದಿಂದ ಗಾಣಕಲ್ಗೆ ತೆರಳುವ ರಸ್ತೆಯಲ್ಲಿರುವ ನಲ್ಲಿಗುಡ್ಡೆ ಕೆರೆ ಕೋಡಿಗೆ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿದೆ. ಸೇತುವೆಯ ತಡೆಗೋಡೆ ಪೈಕಿ ಒಂದು ಭಾಗ ಮುರಿದು ಬಿದ್ದಿದ್ದ ವಾಹನ ಸವಾರರಿಗೆ ಅಪಾಯಕಾರಿ ಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನವಿ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯ:ಬಿಡದಿ ಪಟ್ಟಣದಿಂದ ಗಾಣಕಲ್ ಮಾರ್ಗವಾಗಿ ಮಂಚನಬೆಲೆ ಹಾಗೂ ಬೆಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ನಲ್ಲಿಗುಡ್ಡೆ ಕೆರೆ ಕೋಡಿಗೆ ಅಡ್ಡಲಾಗಿ ಬಹಳಷ್ಟು ವರ್ಷಗಳ ಹಿಂದೆಯೇ ಸೇತುವೆಯನ್ನು ನಿರ್ಮಿಸಲಾಗಿದೆ. ಸದ್ಯ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ತಡೆಗೋಡೆಯ ಒಂದು ಭಾಗ ಕಳಚಿಕೊಂಡು ಬಿದ್ದಿದೆ. ತಕ್ಷಣ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳುವಂತೆ ನಾಗರಿಕರು ಹಲವು ಬಾರಿ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಈವರೆಗೂ ದುರಸ್ತಿ ಕಾರ್ಯಕ್ಕೆ ಕ್ರಮಕೈಗೊಂಡಿಲ್ಲ.
ರಸ್ತೆಯಲ್ಲಿ ಹೆಚ್ಚು ಸಂಚಾರ: ಬಿಡದಿಯಿಂದ ಕಾಕರಾಮನಹಳ್ಳಿ, ಎಂ.ಕರೇನಹಳ್ಳಿ, ಗಾಣಕಲ್ಲು, ಕೆಂದಾಪನಹಳ್ಳಿ, ಚಿಕ್ಕೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳು ಈ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಮಂಚನಬೆಲೆ ಡ್ಯಾಂ, ದೊಡ್ಡಾಲದಮರಕ್ಕೆ ಹೋಗುವ ಪ್ರಯಾಣಿಕರು ಸಹ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಬಿಎಂಟಿಸಿ ಬಸ್ಸು, ಶಾಲಾ-ಕಾಲೇಜುಗಳ ಬಸ್ಸು ಸೇರಿದಂತೆ ಪ್ರತಿದಿನ ಸಾವಿರಾರು ವಾಹನಗಳು ಈ ಮುಖ್ಯರಸ್ತೆಯಲ್ಲಿ ಸಂಚರಿಸುತ್ತವೆ. ಸೇತುವೆ ಸಮೀಪ ರಸ್ತೆಯಲ್ಲಿ ತಿರುವು ಇದ್ದು, ವಾಹನ ಸಂಚಾರಿಗಳಿಗೆ ಅಪಾಯಕಾರಿಯಾಗಿದೆ.
ಶಾಲಾ ವಾಹನ ಢಿಕ್ಕಿ: ಕೆಲವು ತಿಂಗಳುಗಳ ಹಿಂದೆ ಶಾಲಾ ವಾಹನವೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ತಡೆಗೋಡೆಯ ಕೆಲ ಭಾಗ ಮುರಿದು ಹೋಗಿದೆ. ಹೀಗೆ ಮುರಿದ ತಡೆಗೋಡೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಲ್ಲಿಯವರೆಗೂ ದುರಸ್ತಿ ಮಾಡಿಲ್ಲ. ಕೆಲ ವಾರಗಳ ಹಿಂದೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಬಿದ್ದಿತ್ತು. ಪದೇ ಪದೇ ಇಂತಹ ಅನಾಹುತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಅಪಾಯವಿದೆ ಎಂಬ ಸೂಚನೆ ಕೊಡಲು ಕೆಲವರು ಪ್ಲಾಸ್ಟಿಕ್ ಟೇಪ್ ಕಟ್ಟಿದ್ದಾರೆ. ಆದರೆ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.