ತುಮಕೂರು: ಸರ್ಕಾರಗಳು ರೈತರನ್ನು ನಿರ್ಲಕ್ಷ್ಯಿಸಿದ್ದು ಆರ್ಥಿಕ ಬಡತನಕ್ಕಿಂತ, ಜಾnನದ ಬಡತನ ಜನರನ್ನು ಕಾಡುತ್ತಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವಿಷಾದಿಸಿದರು. ಭಾನುವಾರ ತಾಲೂಕು ಹೆಬ್ಬೂರು ಹೋಬಳಿ ಸಿರವರ ಗ್ರಾಮದಲ್ಲಿ ಸಿರಿವರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶ ಬ್ರಿಟಿಷರ ದಾಸ್ಯದಿಂದ ಹೊರಬಂದಾಗ ಎಲ್ಲಾಕಡೆ ಅನ್ನಕ್ಕಾಗಿ ಭಿಕ್ಷೆ ಬೇಡುವಂತಹ ಸಿœತಿ ಇತ್ತು. ಅಂದು ದೇಶದ ನೆರವಿಗೆ ಬಂದಿದ್ದು ರೈತರು. ಆದರೆ, ಇಂದು ದೇಶದಲ್ಲಿ ಹಾಲು, ಆಹಾರ, ರೇಷ್ಮೆ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದ್ದೇವೆ. ಇದಕ್ಕೆ ಕಾರಣರಾದವರು ರೈತರು ಎಂದು ಗೊತ್ತಿದ್ದರೂ ಕೇಂದ್ರ-ರಾಜ್ಯ ಸರ್ಕಾರಗಳು ನಿರ್ಲಕ್ಷ್ಯಿಸುತ್ತಿವೆ ಎಂದು ದೂರಿದರು.
ದೇಶದಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಸಾಧ್ಯವೇ?: ಅಮೆರಿಕಾದಲ್ಲಿ ಶೇ.35ರಷ್ಟು ವಹಿವಾಟು ಹಣದ ಮೂಲಕವೇ ನಡೆಯುತ್ತಿರುವಾಗ, ಶೇ.64ರಷ್ಟು ಕೃಷಿ ಕುಟುಂಬಗಳನ್ನು ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಸಾಧ್ಯವೇ ಎಂದು ಪುಟ್ಟಣ್ಣಯ್ಯ ಪ್ರಶ್ನಿಸಿದರು. ಉದ್ದಿಮೆದಾರರು, ಕೈಗಾರಿಕೋದ್ಯಮಗಳ ಪರ ನಿಲುವುಗಳನ್ನು ಜಾರಿಗೆ ತಂದು, ಬಡವರು, ರೈತರು, ಕೂಲಿ ಕಾರ್ಮಿಕರು ನರಳುವಂತೆ ಮಾಡಿದ್ದಾರೆ. 60ಧಿ-100 ರೂಪಾಯಿಯಲ್ಲಿ ಸಂತೆ ಮಾಡುವ, ತರಕಾರಿ ಕೊಳ್ಳುವವರು, ಮಾರುವವರು ಡಿಜಿಟಲ್ ವ್ಯವಹಾರ ಮಾಡಲು ಸಾಧ್ಯವೇ. ಇಷ್ಟು ತಿಳುವಳಿಕೆ ಒಬ್ಬ ಪ್ರಧಾನಿಗೆ ಇಲ್ಲದಿದ್ದರೆ ಹೇಗೆ ಎಂದರು.|
ಉದ್ದಿಮೆಗಳನ್ನು ಸ್ಥಾಪಿಸಲು, ಕೈಗಾರಿಕೆಗಳನ್ನು ತೆರೆಯಲು ಅದರದ್ದೇ ಆದ ನೀತಿಗಳಿವೆ. ಆದರೆ ರೈತರಿಗೆ ಯಾವುದೇ ಸಾಲ ನೀತಿ, ಬೆಲೆ ನೀತಿ ಇದುವರೆಗೂ ಜಾರಿಗೆ ತಂದಿಲ್ಲ. ನೀರನ್ನು ಆದ್ಯತಾ ವಲಯವಾಗಿ ಗುರುತಿಸಬೇಕು ಎಂಬುದು ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ನೀರಿಲ್ಲದೆ ತೆಂಗು, ಅಡಕೆ, ರಾಗಿ, ಭತ್ತ ಒಣಗಿ ಹೊಟ್ಟೆಗಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಸುಮಾರು 2 ಲಕ್ಷಕ್ಕೂ ಹೆಚ್ಚು ಕೊಳವೆ ಬಾವಿಗಳು ಬತ್ತಿ ಹೋಗಿವೆ, ಲಕ್ಷಾಂತರ ತೆಂಗಿನ ಗಿಡಗಳು ಸುಳಿ ಮುರಿದು ಹೋಗಿವೆ. ಮುಂದಿನ ಒಂದು ವಾರದಲ್ಲಿ ಸಮಸ್ಯೆ ಆಲಿಸದಿದ್ದರೆ ಮತ್ತೆ ಬೀದಿಗಿಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದರು.ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲುಪುರದ ನಾಗೇಂದ್ರಪ್ಪ, 224 ಕ್ಷೇತ್ರಗಳಲ್ಲಿಯೂ ಮುಂದಿನ ದಿನಗಳಲ್ಲಿ ರೈತ ಸಂಘ ಸ್ಪರ್ಧೆ ಮಾಡಲಿದೆ. ಪ್ರತಿಯೊಬ್ಬ ರೈತರು ಒಗ್ಗೂಡಿ ಅಭ್ಯರ್ಥಿಗಳಿಗೆ ಮತ ನೀಡಬೇಕು.
ಫೆ.12 ರಂದು ಮಂಡ್ಯದಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಮಾಡಲಿದ್ದೇವೆ ಎಂದರು. ರಾಜ್ಯ ಮಹಿಳಾ ಅಧ್ಯಕ್ಷೆ ನಂದಿನಿ ಜಯರಾಂ, ಕೃಷಿ ಬೆಲೆ ಆಯೋಗದ ಅಧ್ಯಕ್ಷರ ವರದಿ ಬಗ್ಗೆ ಸರ್ಕಾರಗಳು ಕಣ್ಣು ಬಿಡುತ್ತಿಲ್ಲ. ರೈತ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾದರೆ ವಿಧಾನಸಭೆ, ಲೋಕಸಭೆಯಲ್ಲಿ ನಮ್ಮ ಸಮಸ್ಯೆಗೆ ಸ್ಪಂದನೆ ಸಿಗಬಹುದು ಎಂದು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ರೈತ ಸಂಘದ ಮುಖಂಡರಾದ ಯಾಕೂಬ್, ಹಾವೇರಿಯ ಮಂಜುಳಾ, ಫರೀದಾ, ದೇವರಾಜು, ಉಮೇಶ್, ಹನುಮಂತೇಗೌಡರು, ಗ್ರಾಮ ಘಟಕಗಳ ಮುಖಂಡರು, ಪದಾಧಿಕಾರಿಗಳಿದ್ದರು.
ಸಂಸಾರ ತ್ಯಜಿಸಿ ರೈತರ ಅಭಿವೃದ್ಧಿಗೆ ಶ್ರಮ
ಕಳೆದ 35 ವರ್ಷಗಳಿಂದ ಸಂಸಾರವನ್ನು ನಿರ್ಲಕ್ಷ್ಯಿಸಿ ರೈತರ ಬದುಕು ಹಸನುಗೊಳಿಸಲು ಹೋರಾಡುತ್ತಿದ್ದೇನೆ. ಹಸಿರು ಟವೆಲ್ ರೈತರ ಬದುಕಿನ ಸಂಕೇತ. ಅದರಡಿ ಕೆಟ್ಟದ್ದು ಬಯಸಬಾರದು. ತನಗೆ ಬಂದ ಆಮಿಷಗಳಿಗೆ ಓಗೊಟ್ಟಿದ್ದರೆ ಎಂದೋ ಮಂತ್ರಿಯಾಗಿರುತ್ತಿದ್ದೆ. ಎಲ್ಲವನ್ನೂ ಬದಿಗಿರಿಸಿ ಸಂಘಟನೆ ಕಟ್ಟಿದ್ದೇವೆ. ಇದನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು ಎಂದು ಶಾಸಕ ಪುಟ್ಟಣ್ಣಯ್ಯ ಕಾರ್ಯಕರ್ತರಿಗೆ ತಿಳಿಸಿದರು.