ಶಹಾಪುರ: ಸಗರ ನಾಡಿನ ಆರಾಧ್ಯ ದೇವತೆ ಎಂದು ಕರೆಯಲ್ಪಡುವ ತಾಲೂಕಿನ ಸಗರ ಗ್ರಾಮ ಸಮೀಪದ ಮಹಲ್ ರೋಜಾ ಯಲ್ಲಮ್ಮ ಜಾತ್ರೆ ಇದೇ ಫೆ. 19ರಿಂದ ಒಂದು ವಾರ ಕಾಲ ನಡೆಯುತ್ತಿದ್ದು, ಹರಕೆ ಒಪ್ಪಿಸುವ ಭಕ್ತರಿಗೆ ತಾಲೂಕು ಆಡಳಿತ ಯಾವುದೇ ಮೂಲ ಸೌಕರ್ಯ ಕಲ್ಪಿಸದೆ
ಇರುವ ಕಾರಣ ಬರುವ ಭಕ್ತಾದಿಗಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.
ಈಗಾಗಲೇ ಕಳೆದ ಮೂರು ನಾಲ್ಕು ವಾರದಿಂದ ಪ್ರತಿ ಮಂಗಳವಾರ ಸಾಕಷ್ಟು ಜನರು ದೇವಸ್ಥಾನಕ್ಕೆ ನೈವೇದ್ಯ, ಕಾಯಿ ಕರ್ಪೂರ ಅರ್ಪಿಸಲು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಫೆ. 19ರಂದು ಪಲ್ಲಕ್ಕಿ ಉತ್ಸವ ಜರುಗಲಿದೆ. ಸಾವಿರಾರು ಜನ ಭಕ್ತರು ಸೇರಲಿದ್ದು, ಇದುವರೆಗೂ ತಾಲೂಕಾಡಳಿತ ಯಾವುದೇ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ ಎಂದು ಭಕ್ತಾದಿಗಳು ಆರೋಪಿಸಿದ್ದಾರೆ.
ಸಮೀಪ ಇರುವ ಬಾವಿ ನೀರು ಕಲುಷಿತಗೊಂಡಿದ್ದು, ಅದನ್ನೆ ಇಲ್ಲಿನ ಭಕ್ತಾದಿಗಳು ಮತ್ತು ಜಾತ್ರಾ ನಿಮಿತ್ತ ವಿವಿಧ ಸಾಮಗ್ರಿ ಮಾರಾಟಕ್ಕೆ ಬಂದು ನೆಲಿಸಿರುವ ಮಾರಾಟಗಾರರು ಕಲುಷಿತ ನೀರನ್ನೆ ಬಳಕೆ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಈ ದೇವಸ್ಥಾನ ತಾಲೂಕು ಆಡಳಿತ ವ್ಯವಸ್ಥೆಗೆ ಒಳಪಡುತ್ತದೆ. ಜಾತ್ರೆಗೆ ಮುನ್ನ ಪೂರ್ವ ಸಿದ್ಧತೆ ಮಾಡಿಕೊಳ್ಳದ ತಾಲೂಕು ಆಡಳಿತ ಕಾಟಾಚಾರಕ್ಕೆಂದು ಅಲ್ಲಲ್ಲಿ ಕೊಳವೆ ಬಾವಿ ಕೊರೆದು ಕೈಚಲ್ಲಿದೆ. ಪರ್ಯಾಯ ವ್ಯವಸ್ಥೆ ಮಾಡದಿರುವ ಕಾರಣ ಈ ಬಾರಿ ಭಕ್ತಾದಿಗಳು ಕುಡಿಯುವ ನೀರಿಗಾಗಿ ಜಾತ್ರೆಗೂ ಮುನ್ನ ಪರದಾಡುವಂತಾಗಿದೆ.
ದೇವಸ್ಥಾನ ಹುಂಡೆಯಿಂದ ಮತ್ತು ಜಾತ್ರೆ ನಿಮಿತ್ತ ಮಾರಾಟ ಮಳಿಗೆಗಳಿಂದ ದೇಣಿಗೆ ಲಕ್ಷಾಂತರ ರೂ. ಸಂಗ್ರಹವಾದರೂ ಮೂಲ ಸೌಕರ್ಯ ವ್ಯವಸ್ಥೆ ಮಾಡಲು ತಾಲೂಕು ಆಡಳಿತ ನಿರ್ಲಕ್ಷ್ಯವಹಿಸಿದೆ ಎಂದು ಭಕ್ತಾ ದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನ ಸಮೀಪದಲ್ಲಿ ಇರುವ ಬಾವಿಗಳಲ್ಲಿ ಇರುವ ನೀರು ದುರ್ವಾಸನೆ ಬೀರುತ್ತಿವೆ. ಬರಗಾಲ ಆವರಿಸಿರುವುದರಿಂದ ನೀರನ ಸೆಲೆ ಬತ್ತಿವೆ ಎನ್ನಲಾಗಿದೆ. ಈಗಲೇ ನೀರಿನ ಬವಣೆಯ ಬಿಸಿ ಭಕ್ತಾದಿಗಳಿಗೆ ತಟ್ಟಿದೆ.
ಇನ್ನೂ ಜಾತ್ರೆ ದಿನ ಮಕ್ಕಳು ವೃದ್ಧಾದಿಯಾಗಿ ಬರುವ ಜನಕ್ಕೆ ನೀರಿಲ್ಲದೆ ತತ್ತರಿಸುವ ಸ್ಥಿತಿ ಬರಲಿದೆ. ಹದಗೆಟ್ಟ ರಸ್ತೆ, ಸ್ವತ್ಛಗೊಳ್ಳದ ಬಾವಿ ನೀರು, ಶೌಚಾಲಯ ವ್ಯವಸ್ಥೆ ಇಲ್ಲದೆ ಜಾತ್ರೆಗೆ ಬಂದ ಜನರು ತೊಂದರೆ ಅನುಭವಿಸುವಂತಾಗಿದೆ. ಈಗಲೇ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ. ಕೂಡಲೇ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು ಮತ್ತು ಮೂಲ ಸೌಕರ್ಯ ತಕ್ಷಣಕ್ಕೆ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ನೀಡುವ ದೇಣಿಗೆ ಹಣ ಮತ್ತು ಜಾತ್ರೆಯಲ್ಲಿ ವಿವಿಧ ಮಳಿಗೆಗಳು ಟೆಂಟ್ ಹಾಕಿ, ಸಿಹಿ ತಿಂಡಿ, ಮಕ್ಕಳ ಆಟಿಕೆ ಇತರೆ ಸಾಮಾಗ್ರಿ ಮಾರಾಟ ಮಾಡುವುವರಿಂದ ದೇಣಿಗೆ ಪಡೆದ ದುಡ್ಡನ್ನು ಲೇಖಾನುದಾನ ಸ್ವತ್ಛತೆಗೆ ಬಳಸಲಾಗುತ್ತಿದೆ. ಜೀರ್ಣೋದ್ಧಾರಕ್ಕೆ ಹಣ ಎಲ್ಲಿಂದ ಬರಬೇಕು.
ಸಂಗಮೇಶ ಜಿಡಗಾ, ತಹಶೀಲ್ದಾರ್