ಹುಳಿಯಾರು: ಜಿಲ್ಲೆಯ ಗಡಿ ಭಾಗವಾದ ದಸೂಡಿಯಿಂದ ಹಿರಿಯೂರಿಗೆ ಸಂಪರ್ಕ ಕಲ್ಪಿಸುವ ಶೇಷಪ್ಪನಹಳ್ಳಿ ರಸ್ತೆ ನಿರ್ಮಿಸಿ ಸುಮಾರು 15 ವರ್ಷಗಳೇ ಕಳೆದಿದ್ದು, ರಸ್ತೆ ಪಕ್ಕ ಮುಳ್ಳಿನ ಪೂದೆ, ಗಿಡಗಂಟೆಗಳು ಬೆಳೆದು ಕಾಡುಪ್ರಾಣಿಗಳ, ವಿಷಜಂತುಗಳ ಆವಾಸ ಸ್ಥಾನವಾಗಿದೆ.
ಆಳೆತ್ತರದ ಗುಂಡಿಗಳು ಬಿದ್ದಿದ್ದು ಬಸ್ ಹಾಗೂ ಇನ್ನಿತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ದ್ವಿಚಕ್ರ ಸವಾರರಂತೂ ಯಾತನೆ ಪಟ್ಟು ಸಂಚರಿಸಬೇಕಿದೆ. ಮಳೆ ಬಂದರಂತೂ ಓಡಾಡಲೂ ಅಸಾಧ್ಯ ಎನ್ನುವಂತೆ ಕೆಸರು ಗದ್ದೆಯಾಗುತ್ತದೆ. ರಸ್ತೆಯು ದಸೂಡಿ ಗ್ರಾಮದಿಂದ ಪುರದಯ್ಯನಪಾಳ್ಯ, ಚಿತ್ರದೇವರಹಟ್ಟಿ, ಶೇಷಪ್ಪನಹಳ್ಳಿ, ಹಾಲುಮಾದೇನಹಳ್ಳಿ ಗ್ರಾಮದ ಮೂಲಕ ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 234 ಗೆ ಸೇರುತ್ತದೆ. ಈ ಹಳ್ಳಿಗಳಿಂದ ಸುಮಾರು 79 ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿ ಶಾಲೆಗಳಿಗೆ ಬಂದೋಗುತ್ತಾರೆ.
ಅಲ್ಲದೆ ಸಂತೆ, ಆಸ್ಪತ್ರೆ ಅಂಗಡಿ ಸೇರಿ ಅನೇಕ ಸೌಲಭ್ಯಗಳಿಗೆ ಈ ಭಾಗದ ಜನ ಈ ರಸ್ತೆ ಮೂಲಕ ಹಿರಿಯೂರಿಗೆ ಹೋಗಬೇಕಿದೆ. ಆದರೆ ರಸ್ತೆ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ದುರಸ್ತಿ ಮಾಡಲು ಜನಪ್ರತಿನಿಧಿಗಳು ಮುಂದಾಗಿಲ್ಲ. ದಸೂಡಿ ಗ್ರಾಮ ಜಿಲ್ಲೆಯ ಗಡಿ ಗ್ರಾಮದಲ್ಲಿದ್ದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗಡಿ ಗ್ರಾಮಗಳಿಗೆ ಹೊಂದಿಕೊಂಡಿವೆ. ಹಿರಿಯೂರು ಭಾಗದ ರಸ್ತೆ ಸುಗಮವಾಗಿದ್ದು ತುಮಕುರು ಭಾಗದ ಕೇವಲ ಒಂದೆರಡು ಕಿ.ಮೀ. ರಸ್ತೆ ದುರಸ್ತಿಗೆ ಮೀನಮೇಷ ಎಣಿಸುತ್ತಿದ್ದಾರೆ.
ಶೇಷಪ್ಪನಹಳ್ಳಿ ರಸ್ತೆ ಅನೇಕ ವರ್ಷಗಳಿಂದ ಕಿತ್ತು ಅಧ್ವಾನವಾಗಿದೆ. ಈ ಭಾಗದ ಜನರು ಪ್ರತಿಭಟನೆ ಮಾಡಿದ ಫಲವಾಗಿ ರಸ್ತೆಯನ್ನೇನೋ ಮಾಡಿದರು. ಆದರೆ ಅರ್ಧಕ್ಕೆ ನಿಲ್ಲಿಸಿ ಹೋದವರು ಮತ್ತೆ ಬಂದಿಲ್ಲ. ಆದರೆ ಚುನಾವಣಾಸಂದರ್ಭ ದುರಸ್ತಿಯಾಗದೆ ಉಳಿದ ರಸ್ತೆಗೆ ಹಾಕಿರುವ ಮಣ್ಣು ಮಳೆಗಾಲದಲ್ಲಿ ಕೆಸರಾಗಿ ಓಡಾಡಲು ಆಗದಂತಾಗಿದೆ. ಅಧಿಕಾರಿಗಳು ಇನ್ನಾದರೂ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿ.
-ಕೆ. ಹನುಮಂತರಾಯಪ್ಪ, ದಸೂಡಿ ಗ್ರಾಪಂ ಉಪಾಧ್ಯಕ್ಷ
-ಎಚ್.ಬಿ.ಕಿರಣ್ ಕುಮಾರ್