ಗಂಗಾವತಿ: ಮುದ್ರಾ ಯೋಜನೆ ಸೇರಿ ಕೇಂದ್ರ ರಾಜ್ಯ ಸರಕಾರಗಳ ವಿವಿಧ ನಿಗಮಗಳ ನಿಯಮಾನುಸಾರ ಎಸ್ಸಿ, ಎಸ್ಟಿ ಹಾಗೂ ಹಿಂದುವಳಿದ ವರ್ಗಗಳ ಆಯ್ಕೆಯಾದ ಫಲಾನುಭವಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲಸೌಲಭ್ಯ ಮಂಜೂರಿ ಮಾಡಲು ವಿಳಂಬ ಮಾಡದಂತೆ ನಗರಠಾಣೆಯ ಪಿಐ ಟಿ.ವೆಂಕಟಸ್ವಾಮಿ ಬ್ಯಾಂಕು ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರ ಠಾಣೆಯಲ್ಲಿ ಎಸ್ಸಿ,ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಜನತೆ ಹಾಗೂ ನಗರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳ ವ್ಯವಸ್ಥಾಪಕರ ಮತ್ತು ಕ್ಷೇತ್ರಾಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಕುಂದುಕೊರತೆ ಬಗ್ಗೆ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಶೇಷವಾಗಿ ಎಸ್ಸಿ ಎಸ್ಟಿ ಹಿಂದುಳಿದ ವರ್ಗದವರು ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ವಿವಿಧ ನಿಗಮ ಮತ್ತು ಯೋಜನೆಗಳ ಮೂಲಕ ಸಾಲಸೌಲಭ್ಯ ನೀಡಿ ಅವರು ಸ್ವಂತ ಉದ್ಯೋಗ ಮತ್ತು ವ್ಯಾಪಾರವಹಿವಾಟು ಮಾಡಲು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು ಬ್ಯಾಂಕಿನವರು ನಿಯಮಾನುಸಾರ ಯೋಜನೆ ಅನುಷ್ಠಾನವಾಗಲು ಸಹಕಾರ ನೀಡಬೇಕು. ಫಲಾನುಭವಿಗಳನ್ನು ಬ್ಯಾಂಕುಗಳ ಸುತ್ತ ವಿನಾ ಕಾರಣ ಸುತ್ತಾಡುವಂತೆ ಮಾಡಬಾರದು. ಇದರಿಂದ ವ್ಯವಸ್ಥೆ ಬಗ್ಗೆ ಅವರಿಗೆ ಜಿಗುಪ್ಸೆ ಬರುತ್ತದೆ. ಜತೆಗೆ ಸಮ ಸಮಾಜದ ಕನಸು ನನಸಾಗುವುದಿಲ್ಲ. ಟಾರ್ಗೆಟ್ ಮುಟ್ಟಲು ಪುನಹ ಆರ್ಥಿಕ ಶಕ್ತಿಯುಳ್ಳವರಿಗೆ ಸಾಲಸೌಲಭ್ಯ ನೀಡಿದರೆ ದೀನದಲಿತರರು ಹಿಂದುಳಿದವರ ಕಲ್ಯಾಣವಾಗದು. ಆದ್ದರಿಂದ ದಾಖಲೆಗಳು ಸೇರಿ ನಿಯಮಾನುಸಾರ ಎಲ್ಲರಿಗೂ ಸಾಲ ವಿತರಿಸಬೇಕು. ಸರಕಾರದ ವಿವಿಧ ಯೋಜನೆಯಲ್ಲಿ ಆಯ್ಕೆಯಾದ ಎಸ್ಸಿ,ಎಸ್ಟಿ ಹಿಂದುಳಿದ ವರ್ಗದ ಜನರು ಬ್ಯಾಂಕು ಗಳಿಂದ ಸಾಲಸೌಲಭ್ಯ ಪಡೆದು ವ್ಯಾಪಾರ ವಹಿವಾಟು ಮಾಡಿ ಆರ್ಥಿಕ ಸಧೃಡತೆ ಹೊಂದಬೇಕು. ಆಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಪಡೆದ ಸಾಲವನ್ನು ಮರುಪಾವತಿ ಮಾಡಿದರೆ ಆರ್ಥಿಕವಾಗಿ ಹಿಂದುಳಿದವರ ಇತರರಿಗೂ ಸಾಲ ಕೊಡಲು ಬ್ಯಾಂಕುಗಳಿಗೆ ಸಾಧ್ಯವಾಗುತ್ತದೆ ಎಂದರು.
ದಲಿತ ಮುಖಂಡ ಕುಂಟೋಜಿ ಮರಿಯಪ್ಪ, ಜೋಗದ ಹನುಮಂತಪ್ಪ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಸರಕಾರದ ವಿವಿಧ ಸಾಲ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಸಾಲಸೌಲಭ್ಯ ವಿತರಣೆಯಲ್ಲಿ ವಿಳಂಭವಾಗುತ್ತಿದ್ದು ಬ್ಯಾಂಕು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.ಈ ಕುರಿತು ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳಿಗೆ ಮನವಿ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಪಿಎಸೈ ಕಾಮಣ್ಣ, ಎಸ್‌ಬಿಐ ಬ್ಯಾಂಕಿನ ಎಂ.ನರೇಶಕುಮಾರ, ಬ್ರಹ್ಮಂದೇವ ಸಿಂಗ್, ಕರ್ನಾಟಕ ಬ್ಯಾಂಕಿನ ವಿವೇಕಾನಂದ, ಮುಖಂಡರಾದ ಯು.ಲಕ್ಷ್ಮಣ , ದೊಡ್ಡಭೋಜಪ್ಪ, ಹನುಮಂತ ಮೂಳೆ, ಬಸವರಾಜಮ್ಯಾಗಳಮನಿ, ಶಿವಪ್ಪ, ದೇವಣ್ಣ ಸಂಗಾಪೂರ ಸೇರಿ ವಿವಿಧ ಬ್ಯಾಂಕು ಹಾಗೂ ಸಂಘಟನೆಗಳ ಮುಖಂಡರಿದ್ದರು.