Advertisement

ಹೆಚ್ಚುವರಿ ದಂಡಕ್ಕೂ ಸವಾರರ ನಿರ್ಲಕ್ಷ್ಯ

12:54 PM Nov 01, 2020 | Suhan S |

ಉಡುಪಿ, ಅ. 31:   ಕೇಂದ್ರ ಸರಕಾರ ಟ್ರಾಫಿಕ್‌ ನಿಯಮಾವಳಿ ಉಲ್ಲಂಘನೆಗೆ ದಂಡ ಹೆಚ್ಚಳ ಮಾಡಿದರೂ ಉಡುಪಿ ನಗರಾದ್ಯಂತ ಟ್ರಾಫಿಕ್‌ ನಿಯಮಾವಳಿ ಉಲ್ಲಂಘನೆ ಪ್ರಕರಣ ಗಳು ಹೆಚ್ಚಳವಾಗುತ್ತಿವೆ.

Advertisement

ವೇಗದ ಚಾಲನೆ, ಮದ್ಯಪಾನ ಮಾಡಿ ವಾಹನ ಓಡಿಸುವುದು, ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವುದು, ಹೆಲ್ಮೆಟ್‌ ಧರಿಸದಿರುವುದು, ಅನಧಿಕೃತ ಪ್ರದೇಶಗಳಲ್ಲಿ ವಾಹನ ನಿಲ್ಲಿಸುವುದು ಸಹಿತ ವಿವಿಧ ಕಾರಣಗಳಿಗೆ ಸವಾರರು ದಂಡ ಪಾವತಿಸುತ್ತಿದ್ದಾರೆ.

ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ನಗರದಲ್ಲಿ ಜನವರಿಯಿಂದ ಅಕ್ಟೋಬರ್‌ 30ರ ವರೆಗೆ ಒಟ್ಟು 7,756 ಪ್ರಕರಣ ದಾಖಲಾಗಿದ್ದು, 44,54,000 ರೂ. ದಂಡವನ್ನು ಸ್ಥಳದಲ್ಲೇ ವಿಧಿಸಲಾಗಿದೆ. ಮದ್ಯಸೇವಿಸಿ ವಾಹನ ಚಲಾವಣೆ ಹಾಗೂ ಸ್ಥಳದಲ್ಲಿ ದಂಡ ಪಾವತಿಸದವರ ವಾಹನ  ದಾಖಲೆ ನಿಷ್ಕ್ರಿಯಗೊಳಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇದುವರೆಗೆ 229 ಪ್ರಕರಣಗಳನ್ನು  ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅದರಲ್ಲಿ 13  ಪ್ರಕರಣಗಳು ಇತ್ಯರ್ಥಗೊಂಡು 69,500 ರೂ.  ದಂಡ ಸಂಗ್ರಹಿಸಲಾಗಿದೆ. ಕೋವಿಡ್‌-19ನಿಂದಾಗಿ  ಉಳಿದ ಪ್ರಕರಣಗಳು ವಿಚಾರಣೆಗೆ ಬಾಕಿಯಿದ್ದು, ಶೀಘ್ರದಲ್ಲಿ ಇತ್ಯರ್ಥವಾಗಲಿದೆ.

ಆಯಕಟ್ಟಿನ ಭಾಗದಲ್ಲಿ ಪೊಲೀಸ್‌ ನಿಗಾ :  ಟ್ರಾಫಿಕ್‌ ಪೊಲೀಸರ ಕಣ್ತಪ್ಪಿಸಿಕೊಂಡು ಮಾರ್ಗ ಬದಲಿಸಿ ಸಂಚಾರ ಮಾಡುವವರ ಮೇಲೆಯೂ ಟ್ರಾಫಿಕ್‌ ಪೊಲೀಸರು ನಿಗಾ ಇರಿಸಿದ್ದಾರೆ. ನಗರದ ಕಲ್ಸಂಕ ವೃತ್ತ, ಸಿಟಿ ಬಸ್‌ನಿಲ್ದಾಣ, ಕೆಎಂ ಮಾರ್ಗ, ಕರಾವಳಿ ಬೈಪಾಸ್‌, ಸಂತೆಕಟ್ಟೆ ಜಂಕ್ಷನ್‌, ಕ್ಲಾಕ್‌ ಟವರ್‌ ಭಾಗದಲ್ಲಿ ದಿನಂಪ್ರತಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿಯೂ ಪೊಲೀಸರು ದಿಢೀರ್‌ ಕಾರ್ಯಾಚರಣೆ ಮಾಡಿ ನಿಯಮಾವಳಿ ಉಲ್ಲಂ ಸುವವರ ಮೇಲೆ ಕ್ರಮ ಜರಗಿಸುತ್ತಿದ್ದಾರೆ.

ದ್ವಿಚಕ್ರ ವಾಹನ ಸವಾರರೇ ಅಧಿಕ : ದ್ವಿಚಕ್ರ ವಾಹನ ಸವಾರರು ಕಡ್ಡಾಯ ವಾಗಿ ಹೆಲ್ಮೆಟ್‌ ಧರಿಸಬೇಕು ಎಂಬ ನಿಯಮ ವಿದ್ದರೂ ಹಲವು ಮಂದಿ ನಿಯಮ ಉಲ್ಲಂ ಸಿ ದಂಡ ಪಾವತಿಸುತ್ತಿದ್ದಾರೆ. ವಾಹನಗಳಲ್ಲಿ ಇಂಡಿಕೇಟರ್‌ ಇಲ್ಲದಿರುವುದು, ವಾಯು ಮಾಲಿನ್ಯ ತಪಾಸಣೆ ಮಾಡಿಸದಿರುವುದು, ಅವಧಿ ಮುಗಿದ ಇನ್ಶೂರೆನ್ಸ್‌ ಸಹಿತ ದ್ವಿಚಕ್ರ ವಾಹನ ಸವಾರರು ಅತ್ಯಧಿಕ ಪ್ರಮಾಣದಲ್ಲಿ ದಂಡ ಪಾವತಿಸುತ್ತಿದ್ದಾರೆ.

Advertisement

ನಗರಸಭೆಯಿಂದ ಶೀಘ್ರ ಮಾರ್ಕಿಂಗ್‌ :  ನಗರದ ಆಯಕಟ್ಟಿನ ಭಾಗದಲ್ಲಿ ಸುಗಮ ವಾಹನ ನಿಲುಗಡೆ ದೃಷ್ಟಿಯಿಂದ ನಗರಸಭೆಯ ವತಿಯಿಂದ ಮಾರ್ಕಿಂಗ್‌ ಮಾಡುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಮುಂದಿನ ದಿನಗಳಲ್ಲಿ ಮಾರ್ಕಿಂಗ್‌ ನಡೆಸಲಿ ದ್ದಾರೆ. ಆ ವ್ಯಾಪ್ತಿ ಬಿಟ್ಟು ಹೊರಭಾಗದಲ್ಲಿ ವಾಹನಗಳನ್ನು ನಿಲ್ಲಿಸಿದರೆ ಲಾಕ್‌ ಮಾಡಿ ಮಾಲಕರಿಗೆ ದಂಡ ವಿಧಿಸಲಾಗುವುದು ಎನ್ನುತ್ತಾರೆ ಟ್ರಾಫಿಕ್‌ ಪೊಲೀಸರು.

ನಿಯಮಾವಳಿ ಪಾಲಿಸಿ :  ಪೊಲೀಸರು ತಪಾಸಣೆ ಮಾಡುತ್ತಾರೆ ಎಂದು  ತಿಳಿದಿದ್ದರೂ ಹಲವು ಮಂದಿ ಟ್ರಾಫಿಕ್‌  ನಿಯಮಾವಳಿ  ಉಲ್ಲಂಘಿಸುತ್ತಿದ್ದಾರೆ. ಲಾಕ್‌ಡೌನ್‌  ಬಳಿಕ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿವೆ. ಸ್ಥಳದಲ್ಲಿಯೇ ಪೊಲೀಸರು ದಂಡ ವಿಧಿಸುತ್ತಿದ್ದಾರೆ.  ವಾಹನ ಮಾಲಕರು ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಸಂಚಾರ ನಿಯಮ ಪಾಲಿಸಿದರೆ ಉತ್ತಮ.  -ಅಬ್ದುಲ್‌ ಖಾದರ್‌,  ಪೊಲೀಸ್‌ ನಿರೀಕ್ಷಕರು, ಉಡುಪಿ ಸಂಚಾರ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next