Advertisement

ಕಿರಿಯರ ನಿರ್ಲಕ್ಷ್ಯ ಹಿರಿಯರ ಸಾವಿಗೆ ಕಾರಣವಾದೀತು: ಡಿಸಿ

11:08 PM Sep 05, 2020 | mahesh |

ಉಡುಪಿ: ಸಾರ್ವಜನಿಕರು ಜ್ವರ, ಶೀತ, ಕೆಮ್ಮು ಇತ್ಯಾದಿ ಲಕ್ಷಣಗಳಿದ್ದರೆ ಸ್ವಯಂಪ್ರೇರಿತರಾಗಿ ಜಿಲ್ಲಾಡಳಿತ ವ್ಯವಸ್ಥೆಗೊಳಿಸಿದ 20 ಮೊಬೈಲ್‌ ಟೀಮ್‌, 10 ಫೀವರ್‌ ಕ್ಲಿನಿಕ್‌ಗಳಲ್ಲಿ ಗಂಟಲ ದ್ರವ ಪರೀಕ್ಷಿಸಿಕೊಳ್ಳಬೇಕು. ಕೋವಿಡ್ ಪಾಸಿಟಿವ್‌ ಬಂದಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಇಲ್ಲವಾದರೆ ಅಂಥವರು ತಂದೆ, ತಾಯಿ, ಅಜ್ಜ, ಅಜ್ಜಿಯರಿಗೆ ಹಬ್ಬಿಸಿ ಅವರ ಸಾವಿಗೆ ಕಾರಣರಾಗುತ್ತಾರೆ. ಕೊನೆಯ ಕ್ಷಣದವರೆಗೆ ಮನೆಯಲ್ಲಿದ್ದು ಮಾತ್ರೆ, ಕಷಾಯ ತಿಂದು ಉಸಿರಾಟದ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಸೇರಿದರೆ ಅವರನ್ನು ಬದುಕಿಸುವುದು ಕಷ್ಟ. ಈಗಾಗಲೇ ಎಲ್ಲ ಐಸಿಯು, ವೆಂಟಿಲೇಟರ್‌ ಬೆಡ್‌ಗಳು ಭರ್ತಿಯಾಗಿವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಸಿದ್ದಾರೆ.

Advertisement

ಅವರು ಶನಿವಾರ ಜಿ.ಪಂ. ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ, ಸರಕಾರಿ ವೈದ್ಯರು, ಜನಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ತಳೆದ ನಿರ್ಣಯವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಸಾಮಾನ್ಯ ಬೆಡ್‌ ಉಚಿತ
ಇನ್ನೂ 22 ಮೊಬೈಲ್‌ ಟೀಂಗಳಿಗೆ ಸರಕಾರ ಮಂಜೂರು ಮಾಡಿದೆ. ಅಂಗಡಿ, ಮಾಲ್‌, ಹೊಟೇಲ್‌ ನೌಕರರಿಗೆ ಒಂದು ವೇಳೆ ಪಾಸಿಟಿವ್‌ ಇದ್ದು ಕೊರೊನಾ ಲಕ್ಷಣವಿಲ್ಲದಿದ್ದರೆ ಅಂಥವರಿಂದ ದಿನವೂ ನೂರಾರು ಜನರಿಗೆ ಸೋಂಕು ಹಬ್ಬುತ್ತದೆಯಾದ ಕಾರಣ ಅವರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಸರಕಾರದಿಂದ ಮಾಡುವ ಪರೀಕ್ಷೆಗಳೆಲ್ಲವೂ ಉಚಿತವಾಗಿರುತ್ತವೆ. ಪಾಸಿಟಿವ್‌ ಬಂದು ಜಿಲ್ಲಾಡಳಿತದ ನಿರ್ದೇಶನದಂತೆ ಖಾಸಗಿ ಆಸ್ಪತ್ರೆಯ ಜನರಲ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆದುಕೊಂಡರೆ ಅವರಿಗೆ ದಿನಕ್ಕೆ 5,200 ರೂ.ಗಳನ್ನು ರಾಜ್ಯ ಸರಕಾರ ಭರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಸ್ಪೆಶಲ್‌ ಬೆಡ್‌ಗೆ ಮಾತ್ರ ಶುಲ್ಕ
ಜನರು ಸ್ವಯಂ ಆಸಕ್ತಿಯಿಂದ ಸ್ಪೆಶಲ್‌ ಬೆಡ್‌ ಬೇಕೆಂದು ಬಯಸಿದರೆ ಮಾತ್ರ ಸರಕಾರ ನಿಗದಿಪಡಿಸಿದ 10,400 ರೂ.ಗಳನ್ನು ಪಾವತಿಸಬೇಕು. ಸ್ಪೆಶಲ್‌ ಬೆಡ್‌ನ‌ಲ್ಲಿಯೂ ನಿಗದಿಗಿಂತ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡುವುದಿಲ್ಲ ಎಂದರು.

ಕೊನೆ ಕ್ಷಣದಲ್ಲಿ ಆಸ್ಪತ್ರೆಗೆ ಬಂದರೆ ಉಳಿಸುವುದು ಕಷ್ಟ
ಸರಕಾರದಿಂದ ಈಗಷ್ಟೇ ಸಾಮಾನ್ಯ ಬೆಡ್‌ ರೋಗಿಗೆ ಶುಲ್ಕವನ್ನು ಪಾವತಿಸು ತ್ತಿದೆ. ಅಲ್ಲಿಯವರೆಗೆ ಮಣಿಪಾಲ ಮಾಹೆ ವಿ.ವಿ.ಯಿಂದ ನಮ್ಮ ಆಸ್ಪತ್ರೆಯ ರೋಗಿಗಳಿಗಾಗಿ 1.5 ಕೋ.ರೂ. ಖರ್ಚು ಮಾಡಲಾಗಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ವೇಳೆ 8 ಲ.ರೂ. ಬಿಲ್‌ ಆದರೂ ಸರಕಾರ ರೂಪಿಸಿದ ಮಿತಿ ಪ್ರಕಾರ ಆಯುಷ್ಮಾನ್‌ ಯೋಜನೆಯಡಿ ಬರುವ ಹಣ ಸುಮಾರು 2.5 ಲ.ರೂ. ಮಾತ್ರ. ಉಳಿದ ಮೊತ್ತ ಬರುವುದಿಲ್ಲ. ಒಂದು ವೇಳೆ ಹೆಚ್ಚಿನ ಶುಲ್ಕ ಕೊಟ್ಟದ್ದಿದ್ದರೆ ಯೋಜನೆ ಮುಖ್ಯಸ್ಥರಿಗೆ ದೂರು ಕೊಡಬಹುದು. ಹಾಗೆ ಮಾಡಿದರೆ ಹತ್ತು ಪಟ್ಟು ದಂಡ ವಿಧಿಸಲಾಗುತ್ತದೆ. ನಷ್ಟ ಮಾಡಿಕೊಂಡೂ ಅಪಪ್ರಚಾರ ಮಾಡಿದರೆ ನೈತಿಕ ಸ್ಥೈರ್ಯ ಕುಂಠಿತವಾಗುತ್ತದೆ. ಆರೋಗ್ಯ ಹದಗೆಟ್ಟ ಬಳಿಕ ಬಂದು ಐಸಿಯು ಬೆಡ್‌ ಕೇಳಿದರೆ ನಾವು ಏನು ಮಾಡಲು ಸಾಧ್ಯ? ಮೂರ್‍ನಾಲ್ಕು ವಾರಗಳಿಂದ ಕೊನೆ ಕ್ಷಣದಲ್ಲಿ ಬರುವವರ ಸಂಖ್ಯೆ ಹೆಚ್ಚಿಗೆ ಆಗಿದೆ. ಕೊನೆಯವರೆಗೂ ದೇಹದಲ್ಲಿ ಆಮ್ಲಜನಕ ಕಡಿಮೆಯಾದರೆ ಗೊತ್ತಾಗದೆ ಇರುವುದು ಕೊರೊನಾದ ಲಕ್ಷಣಗಳಲ್ಲಿ ಒಂದು. ಇದನ್ನು ಹ್ಯಾಪಿ ಹೈಪೋಕ್ಸಿಯ ಎಂದು ಕರೆಯು ತ್ತಾರೆ. ಇದರ ಬಗ್ಗೆ ಗೂಗಲ್‌ನಲ್ಲಿ ಅರಿಯಬಹುದು. ಏನೂ ಚಿಕಿತ್ಸೆ ಇಲ್ಲವೆನ್ನುವಂತೆಯೂ ಇಲ್ಲ. ರಕ್ತ ಹೆಪ್ಪುಗಟ್ಟುವಿಕೆ ತಡೆಗೆ, ಆದಷ್ಟು ಶೀಘ್ರ ಆಸ್ಪತ್ರೆಗೆ ದಾಖ ಲಾದರೆ ವೆಂಟಿಲೇಟರ್‌ಗೆ ಹೋಗದಂತೆ ಕೊಡುವ 30,000 ರೂ. ಬೆಲೆಯ ಚುಚ್ಚುಮದ್ದುಗಳನ್ನು ಉಚಿತವಾಗಿ ಸರಕಾರದಿಂದ ಕೊಡುತ್ತಿದ್ದೇವೆ.
– ಡಾ| ಶಶಿಕಿರಣ್‌ ಉಮಾಕಾಂತ್‌, ನೋಡಲ್‌ ಅಧಿಕಾರಿ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next