Advertisement
ಮಂಚಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ತಾಲೂಕು ಕೇಂದ್ರದಿಂದ ಸುಮಾರು 8 ಕಿಮೀ ದೂರದಲ್ಲಿದ್ದು, ವಿದ್ಯಾರ್ಥಿಗಳ ಸಂಖ್ಯೆಗೇನು ಕೊರತೆಯಿಲ್ಲ. ಆದರೆ, ಶಾಲಾ ಕಟ್ಟಡ ಅಸಮರ್ಪಕ ನಿರ್ವಹಣೆಯಿಂದ ಶಿಥಿಲಾವಸ್ಥೆ ತಲುಪಿದ್ದು, ಶಿಕ್ಷಣ ಇಲಾಖೆ ಇದುವರೆಗೂ ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ಇದ್ದೂ ಇಲ್ಲದಂತಿರುವ ಕಟ್ಟಡದಿಂದಾಗಿ ಮಕ್ಕಳು ರಸ್ತೆ ಬದಿಯಲ್ಲಿ ಕುಳಿತು ಪಾಠ ಕೇಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
Related Articles
Advertisement
ಫೋಟೋಗಳು ವಾಟ್ಸಾಪ್ ಗ್ರೂಪ್‌ಗ್ಳಿಗಷ್ಟೇ ಸೀಮಿತ: ಶಾಲಾ ಕಟ್ಟಡ ದುಸ್ಥಿತಿ ಬಗ್ಗೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರು ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ, ಡಿಡಿಪಿಐ ಅಧಿಕಾರಿಗಳಿಗೆ 10 ವರ್ಷಗಳಿಂದಲೂ ಮನವಿ ಸಲ್ಲಿಸುತ್ತಿ ದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನವಿ ಕೊಟ್ಟಾ ಗೆಲ್ಲ ಶಾಲೆಗೆ ಭೇಟಿ ಕೊಡುವ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ಶಾಲೆಯ ಫೋಟೋ ಸೆರೆಹಿಡಿದು ವಾಟ್ಸಾಪ್ ಗ್ರೂಪ್‌ಗ್ಳಲ್ಲಿ ಶೇರ್ ಮಾಡುವುದಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಆದರೆ, ಇದುವರೆಗೂ ಇಲಾಖೆ ಯಿಂದ ಶಾಲೆಯ ಅಭಿ ವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳಾಗಿಲ್ಲ.
ವರದಿ ನೀಡಿದರೂ ಇಲಾಖೆಯ ಮೊಂಡುತನ: ಮಂಚಹಳ್ಳಿಯಲ್ಲಿ 1995ರಲ್ಲಿ ಸರ್ಕಾರಿ ಶಾಲೆ ಕಟ್ಟಡವನ್ನು ಮಣ್ಣಿನಿಂದ ನಿರ್ಮಿಸಲಾಯಿತು. ಈ ವೇಳೆ ಅಳವಡಿಸಿದ್ದ ಬಾಗಿಲು, ಕಿಟಕಿಗಳು ಸಂಪೂರ್ಣ ಶಿಥಿಲಗೊಂಡಿದ್ದವು. ಬಳಿಕ ಶಾಲಾಭಿವೃದ್ಧಿ ಸಮಿತಿ ಕೆಲ ವರ್ಷಗಳ ಹಿಂದೆ ದುರಸ್ತಿಗೆ ಕ್ರಮ ಕೈಗೊಂಡು ಕಬ್ಬಿಣದ ಕಿಟಕಿ, ಬಾಗಿಲು ಹಾಕಿಸಿತು. ಆದರೆ, ಅಸಮರ್ಪಕ ನಿರ್ವಹಣೆ ಕೊರತೆಯಿಂದ ಅವು ತುಕ್ಕು ಹಿಡಿದಿವೆ. ಕಟ್ಟಡದ ಮೇಲ್ಛಾವಣಿಯ ಪದರು ಉದುರಿತ್ತಿವೆ. ಕೆಳಗಡೆಗೆ ಬಗ್ಗಿರುವುದರಿಂದ ಎರಡು ಪಿಲ್ಲರ್‌ಗಳ ಆಧಾರದಲ್ಲಿ ನಿಲ್ಲಿಸಲಾಗಿದೆ. ಸಂಪೂರ್ಣ ಶಿಥಿಲಗೊಂಡಿರುವ ಮೇಲ್ಛಾವಣಿ ಯಾವುದೇ ಸಂದರ್ಭದಲ್ಲೂ ಬೀಳಬಹುದು. ಕಟ್ಟಡವು ಶಿಥಿಲಗೊಂಡಿದ್ದು, ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡಲು ಯೋಗ್ಯವಿಲ್ಲ ಎಂದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು 5 ವರ್ಷಗಳ ಹಿಂದೆಯೇ ವರದಿ ನೀಡಿದ್ದರೂ ಶಿಕ್ಷಣ ಇಲಾಖೆ ಮೊಂಡುತನ ಮುಂದುವರಿದಿದೆ.
ಮಂಚಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಕಟ್ಟಡಗಳಿಲ್ಲದೇ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಲು ಆತಂಕ ಎದುರಿಸುತ್ತಿದ್ದಾರೆ. ನೂತನ ಕಟ್ಟಡ ನಿರ್ಮಾಣದ ಬಗ್ಗೆ ಶಿಕ್ಷಣ ಇಲಾಖೆಗೆ ನೂರಾರು ಬಾರಿ ಮನವಿ ಮಾಡಿದರೂ ಯಾರೂ ಸ್ಪಂದಿಸಲಿಲ್ಲ. ಈ ಕಟ್ಟಡದಿಂದ ಅನಾಹುತವಾದರೆ ಶಿಕ್ಷಣ ಇಲಾಖೆಯೇ ನೇರಹೊಣೆ. ಮತ್ತೂಂದು ಕಟ್ಟಡವೂ ಇದೇ ರೀತಿ ದುಸ್ಥಿತಿಗೆ ಹೋಗುವುದನ್ನು ತಪ್ಪಿಸಲು ಮಾವಹಳ್ಳಿ ಗ್ರಾಪಂನ 15ನೇ ಹಣಕಾಸು ಯೋಜನೆಯಲ್ಲಿ ಹಂತ ಹಂತವಾಗಿ ಅಭಿವೃದ್ದಿಪಡಿಸಿರುವುದರಿಂದ ಮಕ್ಕಳಿಗೆ ಅನುಕೂಲವಾಗಿದೆ. 10 ವರ್ಷಗಳಿಂದ ಕಟ್ಟಡ ಶಿಥಿಲಗೊಂಡಿದ್ದರೂ ಶಿಕ್ಷಣ ಇಲಾಖೆ ಬೇಜವಾಬ್ದಾರಿ ಯಿಂದ ನಡೆದುಕೊಳ್ಳುತ್ತಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. – ಎನ್.ರಾಧಾ ಮುನಿರಾಜು, ಮಾವಹಳ್ಳಿ ಗ್ರಾಪಂ ಸದಸ್ಯೆ, ಮಂಚಹಳ್ಳಿ
ಬಂಗಾರಪೇಟೆ ವಲಯಕ್ಕೆ ಸೇರಿರುವ ಮಂಚಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ತೀವ್ರವಾಗಿ ಶಿಥಿಲಗೊಂಡಿರುವುದನ್ನು ಪರಿಶೀಲನೆ ಮಾಡಲಾಗಿದೆ. ಸರ್ಕಾರದಿಂದ ಯಾವುದೇ ಅನುದಾನ ಬಾರದೇ ಇರುವುದರಿಂದ ಹೊಸ ಕಟ್ಟಡ ನಿರ್ಮಾಣ ಮಾಡಲು ಸಾಧ್ಯವಿಲ್ಲ. ನೂತನ ಕಟ್ಟಡ ನಿರ್ಮಾಣ ಮಾಡಲು ಬೇರೆ ಒಂದು ನಿವೇಶನ ನೀಡಿದರೆ ಕಟ್ಟಡ ನಿರ್ಮಾಣ ಮಾಡಬಹುದಾಗಿದ್ದು, ಹಳೆಯ ಕಟ್ಟಡವನ್ನು ಕೆಡವಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಇಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರ್ಕಾರದಿಂದ ಮಂಜೂರಾದರೆ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. – ಡಿ.ಎನ್.ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಂಗಾರಪೇಟೆ
– ಎಂ.ಸಿ.ಮಂಜುನಾಥ್