ವಿಜಯಪುರ: ಸರ್ಕಾರ ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆ ಆದೇಶ ಹೊರಡಿಸಿರುವುದು ಕರವೇ ಹೋರಾಟದ ಫಲ. ಆದರೆ ಜಿಲ್ಲೆಯಲ್ಲಿ ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಕ್ರಮ ಕೈಗೊಂಡಿಲ್ಲ. ತ್ವರಿತವಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಮಾಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಶೈಲ ಮಳಜಿ ಎಚ್ಚರಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ಮಾತ್ರವಲ್ಲದೆ ರೈತರ ಸಂಕಷ್ಟದ ನೋವಿಗೆ ಧ್ವನಿಯಾಗಲು ಕೂಡ ಕರವೇ ಎಂದಿಗೂ ಹೋರಾಟ ಮಾಡುತ್ತಲೇ ಇರುತ್ತದೆ ಎಂದರು.
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವ ಕುರಿತು ಶಿವಾನಂದ ಪಾಟೀಲ ಅವರು ಆರೋಗ್ಯ ಸಚಿವರಾಗಿದ್ದಾಗ ಪ್ರಸ್ತಾವನೆ ಕಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೂಡಲೇ ವೈದ್ಯಕೀಯ ಮಹಾವಿದ್ಯಾಲಯ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿದರು
ಜಿಲ್ಲೆಯಲ್ಲಿ ವಾರ, ಹದಿನೈದು ದಿನಗಳಲ್ಲಿ ಹತ್ತೆ, ಸುಲಿಗೆ, ದರೋಡೆಯಂತಹ ಕೃತ್ಯಗಳು ಸಾಮಾನ್ಯ ಎಂಬಂತಾಗಿದೆ. ಪೊಲೀಸರು ಹಿಂದಿನ ಅಧಿಕಾರಿಗಳಂತೆ ರೌಡಿಶೀಟರಗಳು, ಕಾನೂನು ಬಾಹಿರ ಕೃತ್ಯ ಎಸಗುವವರ ಪರೇಡ್ ನಡೆಸಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಂಗಾರು ಬಿತ್ತನೆ ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ನೀಡಬೇಕು. ನೀರಾವರಿ ಸೌಲಭ್ಯ ಇಲ್ಲದ ಬರಡು ನೆಲದಲ್ಲಿ ರೈತರ ಸಹಭಾಗಿತ್ವದಲ್ಲಿ ಸೋಲಾರ್ ಪಾರ್ಕ್, ಫುಡ್ ಪಾರ್ಕ್ ಸೇರಿದಂತೆ ಇತರೆ ಯೋಜನೆಗಳನ್ನು ವಿಜಯಪುರ ಭಾಗಕ್ಕೂ ತರಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಸಾಯಬಣ್ಣ ಮಡಿವಾಳರ, ಪ್ರಧಾನ ಕಾರ್ಯದರ್ಶಿ ಸುರೇಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.