Advertisement
ಬೆಂಗಳೂರು: ಸಾಲು ಸಾಲು ಐಟಿ ಸಂಸ್ಥೆಗಳು, ಬಹುರಾಷ್ಟ್ರೀಯ ಕಂಪೆನಿಗಳಿಂದ ಹೈಟೆಕ್ ಸ್ಪರ್ಶ ಪಡೆದುಕೊಂಡಿರುವ ಕೋರಮಂಗಲ, ಬೊಮ್ಮನಹಳ್ಳಿ ಭಾಗದಲ್ಲಿ ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಮಳೆಗಾಲ ಬಂತೆಂದರೆ ಇಲ್ಲಿ ಪ್ರವಾಹ ಭೀತಿ ಆವರಿಸುತ್ತದೆ.
Related Articles
ನಗರದ ಪ್ರಮುಖ ಭಾಗಗಳಿಂದ ಕೋರಮಂಗಲ ಕಣಿವೆಯನ್ನು ಸಂಪರ್ಕಿಸುವ ಮಧ್ಯಮ ಹಾಗೂ ಕಿರು ಕಾಲುವೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ಸಂಗ್ರಹವಾಗಿದೆ. ಇದರಿಂದಾಗಿ ನೀರು ಸಮರ್ಪಕವಾಗಿ ಕಾಲುವೆಗಳಲ್ಲಿ ಹರಿಯದೆ ಸುತ್ತಮುತ್ತಲಿನ ಪ್ರದೇಶ, ರಸ್ತೆಗಳಿಗೆ ಬರುತ್ತಿದೆ. ಹೀಗಾಗಿ ಪಾಲಿಕೆಯ ಅಧಿಕಾರಿಗಳು ಮಳೆಗಾಲ ಆರಂಭವಾಗುವುದರೊಳಗಾಗಿ ಕಾಲುವೆಯಲ್ಲಿ ಹೂಳೆತ್ತಲು ಕ್ರಮಕೈಗೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ.
Advertisement
ಕಾಯಂ ಪ್ರವಾಹ ಭೀತಿ ಪ್ರದೇಶ!: ಮಳೆಗಾಲಕ್ಕೆ ಮುನ್ನ ಪಾಲಿಕೆಯಿಂದ ಗುರುತಿಸಲಾಗುವ ಅನಾಹುತ ಸಂಭಾವ್ಯ ಸ್ಥಳಗಳ ಪಟ್ಟಿಯಲ್ಲಿ ಪ್ರತಿವರ್ಷ ಬೊಮ್ಮನಹಳ್ಳಿ ಹಾಗೂ ಕೋರಮಂಗಲ ಭಾಗದ ಹಲವು ಪ್ರದೇಶಗಳು ಸೇರಿಸಿಕೊಳ್ಳುತ್ತಿವೆ. ದಶಕಗಳಿಂದಲೂ ಬೊಮ್ಮನಹಳ್ಳಿ ಹಾಗೂ ಕೋರಮಂಗಲ ಭಾಗಗಳಲ್ಲಿ ಪ್ರವಾಹ ಸಂಭವಿಸುತ್ತಲೇ ಇದ್ದರೂ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ.
2006ರ ಭಾರಿ ಮಳೆಗೆ ಮಡಿವಾಳ ಕೆರೆ ಉಕ್ಕಿಹರಿದ ಪರಿಣಾಮ ಸಿಲ್ಕ್ ಬೋರ್ಡ್ ಜಂಕ್ಷನ್ ಸಂಪೂರ್ಣ ಜಲಾವೃತಗೊಂಡಿತ್ತು. ಅದಾದ ಬಳಿಕವೂ ಹಲವಾರು ಬಾರಿ ಈ ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಜತೆಗೆ ಕಳೆದ ವರ್ಷವೂ ಕೋಡಿಚಿಕ್ಕನಹಳ್ಳಿ, ಅರಕೆರೆ ಭಾಗದ ಹಲವಾರು ಪ್ರದೇಶಗಳು ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಒತ್ತುವರಿ ತೆರವು ಬಳಿಕವೂ ಪ್ರವಾಹ ಭೀತಿ: ಕೋಡಿಚಿಕ್ಕನಹಳ್ಳಿ ಭಾಗದಲ್ಲಿ ಕಳೆದ ಆಗಸ್ಟ್‌ನಲ್ಲಿ ಅವನಿ ಶೃಂಗೇರಿ ನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿದ್ದವು. ರಾಜಕಾಲುವೆ ಒತ್ತುವರಿಯೇ ಸಮಸ್ಯೆಗೆ ಮೂಲ ಎಂಬ ಕಾರಣಕ್ಕೆ ಕಾಲುವೆ ಜಾಗದಲ್ಲಿದ್ದ ಹತ್ತಾರು ಮನೆಗಳನ್ನು ತೆರವು ಮಾಡಲಾಯಿತು.
ಜತೆಗೆ ಪ್ರವಾಹವಾದ ಪ್ರದೇಶದ ಸಮೀಪದಲ್ಲಿ ಕಾಲುವೆಯನ್ನೂ ನಿರ್ಮಿಸಲಾಗಿದೆ. ಹಾಗಾದರೂ ಈ ಭಾಗದ ಶ್ರೀನಿವಾಸ ಬಡಾವಣೆ, ರಾಯಲ್ಸ್ ರೆಸಿಡೆನ್ಸಿ ಬಡಾವಣೆ, ಶಾಂತಿನಿಕೇತನ ಬಡಾವಣೆ ಸೇರಿದಂತೆ ಹಲವು ಸ್ಥಳಗಳು ಪ್ರವಾಹ ಭೀತಿ ಎದುರಿಸುತ್ತಿವೆ.
ಅರ್ಧಕ್ಕೆ ನಿಂತ ಕಾಮಗಾರಿಗಳು: ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ ಕೋರಮಂಗಲ ಕಣಿವೆಯ ಪ್ರಮುಖ ಭಾಗಗಳಲ್ಲಿ ಹೂಳೆತ್ತುವ ಹಾಗೂ ತಡೆಗೋಡೆಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇನ್ನು ಕೆಲವು ಭಾಗಗಳಲ್ಲಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಹೀಗಾದರೂ ಕಾಮಗಾರಿ ಆರಂಭವಾಗಿರುವ ಪ್ರದೇಶಗಳಲ್ಲಿ ಗುತ್ತಿಗೆದಾರರು ಕೆಲವನ್ನು ಅರ್ಧಕ್ಕೆ ಬಿಟ್ಟಿದ್ದಾರೆ.
* ವೆಂ.ಸುನೀಲ್ ಕುಮಾರ್