ಸಾಗರ: ಕಾಗೋಡು ಚಳುವಳಿಯಿಂದ ಉಪಕೃತರಾಗಿ ಭೂಮಿ ಪಡೆದ ಗೇಣಿದಾರರು ಈಗ ಭೂಒಡೆಯರಾಗಿ ಕುಳಿತಿದ್ದಾರೆ. ಹೋರಾಟದ ಫಲದಿಂದ ನಾವು ಭೂಒಡೆಯರಾಗಿದ್ದೇವೆ ಎಂದು ಮರೆತಿರುವುದು ದುರದೃಷ್ಟಕರ ಸಂಗತಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಸೋಮವಾರ ಡಾ. ಎಚ್. ಗಣಪತಿಯಪ್ಪ ಸೇವಾ ಟ್ರಸ್ಟ್, ತಾಲೂಕು ರೈತ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಿದ್ದ ನೇಗಿಲ ಯೋಗಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೊಳಗದ ಮೂಲಕ ಭತ್ತ ಸುರಿದು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗೇಣಿ ಹೋರಾಟದ ಭೂಮಿ ಪಡೆದವರಿಗೆ ಒಡೆಯನಾಗುವ ಚಿಂತೆ ಹೆಚ್ಚಿದೆಯೇ ವಿನಾ ಹಳೆಯ ಇತಿಹಾಸ ಬೇಡವಾಗಿದೆ. ಇಂದು ಗೇಣಿದಾರರು ಭೂಒಡೆಯರಾಗಿದ್ದಾರೆ ಎಂದರೆ ಅದಕ್ಕೆ ಚಳುವಳಿಯನ್ನು ರೈತ ಸಂಘದ ಮೂಲಕ ಹುಟ್ಟು ಹಾಕಿದ ಗಣಪತಿಯಪ್ಪ ಕಾರಣವಾಗಿದ್ದಾರೆ. ಗೇಣಿ ಭೂಮಿ ಪಡೆದವರು ಗಣಪತಿಯಪ್ಪ ಅವರ ಫೋಟೋವನ್ನು ಹೃದಯದಲ್ಲಿ ಶಾಶ್ವತವಾಗಿ ಇರಿಸಿಕೊಳ್ಳಬೇಕು. ಕಾಗೋಡು ಭೂಮಿ ಹೋರಾಟಕ್ಕೆ ಧ್ವನಿ ನೀಡಿದವರು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು. ಕಾಗೋಡು ಸತ್ಯಾಗ್ರಹ ಜನರ ಸ್ಮೃತಿಪಟಲದಿಂದ ದೂರವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ ಎಂದು ಹೇಳಿದರು.
ನೇಗಿಲ ಯೋಗಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಾಜಿ ಶಾಸಕ ಬಿ. ಸ್ವಾಮಿರಾವ್, ಹೋರಾಟದಿಂದ ಉಪಕೃತರಾದವರು ಹೋರಾಟವನ್ನು ಮರೆತಿದ್ದು ವಿಪರ್ಯಾಸದ ಸಂಗತಿ. ಕಾಗೋಡು ಸತ್ಯಾಗ್ರಹದಲ್ಲಿ ಗಣಪತಿಯಪ್ಪ ಅವರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಜೊತೆಗೆ ಭೂಮಾಲೀಕರ ದಾಸ್ಯದಿಂದ ಗೇಣಿದಾರರನ್ನು ಹೊರಗೆ ತರುವಲ್ಲಿ ಗಣಪತಿಯಪ್ಪ ಪ್ರಮುಖಪಾತ್ರ ವಹಿಸಿದ್ದರು. ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ನೇಗಿಲಯೋಗಿ ಪ್ರಶಸ್ತಿ ನೀಡುತ್ತಿರುವುದು ಸ್ಮರಣೀಯ ಸಂಗತಿ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಷ್ಣುನಾಯ್ಕ್ ಅಂಕೋಲ, ನಮಗೆ ನೆರಳು ಮತ್ತು ಭೂಮಿ ನೀಡಿದ ಹೋರಾಟವನ್ನು ಎಂದಿಗೂ ಮರೆಯಬಾರದು. 1936ರಲ್ಲಿ ದಿನಕರ ದೇಸಾಯಿ ದಕ್ಷಿಣ ಕನ್ನಡದಲ್ಲಿ ಹೋರಾಟಕ್ಕೆ ಚಾಲನೆ ನೀಡಿದರು. ಇದರಿಂದ ಪ್ರೇರೇಪಿತರಾದ ಗಣಪತಿಯಪ್ಪ ಅವರು 1945 ರಲ್ಲಿ ದಿನಕರ ದೇಸಾಯಿ ಅವರನ್ನು ಕಾಗೋಡು ಗ್ರಾಮಕ್ಕೆ ಕರೆಸಿ ರೈತರಲ್ಲಿ ಪ್ರೇರಣೆ ನೀಡಿದ್ದರು. ಕಾಗೋಡು ಹೋರಾಟ ಸಹಸ್ರಾರು ರೈತರ ಬದುಕಿಗೆ ಬೆಳಕು ನೀಡಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಿದರು. ವೇದಿಕೆಯಲ್ಲಿ ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಪರಮೇಶ್ವರಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ರೈತ ಸಂಘದ ಅಧ್ಯಕ್ಷ ದಿನೇಶ್ ಸಿರವಾಳ, ಸಂಚಾಲಕ ರಮೇಶ್ ಕೆಳದಿ ಉಪಸ್ಥಿತರಿದ್ದರು. ಗವಿಯಪ್ಪ ಎಲ್.ಟಿ. ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹೊಯ್ಸಳ ಗಣಪತಿಯಪ್ಪ ಸ್ವಾಗತಿಸಿದರು. ಕಿರಣ್ ವಂದಿಸಿದರು. ಬಿ.ಡಿ.ರವಿಕುಮಾರ್ ನಿರೂಪಿಸಿದರು.