ಚಾಮರಾಜನಗರ: ಮಹಾರಾಷ್ಟ್ರದ ಮುಂಬೈ ಮೂಲದ ಕೋವಿಡ್ ಸೋಂಕು ದೃಢೀಕೃತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮೂವರು ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ 23 ಜನರು ಸೇರಿದಂತೆ ಒಟ್ಟು 26 ಜನರ ಗಂಟಲಿನ ದ್ರವ ಮಾದರಿಯ ಪರೀಕ್ಷಾ ವರದಿಯು ನೆಗೆಟಿವ್ ಬಂದಿದೆ.
ಸೋಂಕು ದೃಢೀಕೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಒಟ್ಟು 26 ಜನರ ವರದಿಯು ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಇವರನ್ನು ಕ್ವಾರೆಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ.
ಇದರಿಂದಾಗಿ, ಮುಂಬೈನಿಂದ ಬಂದಿದ್ದ ಸೋಂಕಿತನ ಜೊತೆಯಲ್ಲಿದ್ದ ಉಳಿದವರಿಗೆ ಸೋಂಕು ಹರಡಿರಬಹುದೆಂಬ ಆತಂಕ ದೂರವಾಗಿದೆ. ಸೋಂಕಿತ ಯುವಕನ ತಾಯಿ, ತಮ್ಮ ಮತ್ತು ಸೋದರಮಾವ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಸೋದರಮಾವ ಸ್ಥಳೀಯರಾಗಿದ್ದರು. ಅವರ ವರದಿ ಸಹ ನೆಗೆಟಿವ್ ಬಂದಿದೆ.
ಮುಂಬೈ ನಿವಾಸಿ ವೈದ್ಯಕೀಯ ವಿದ್ಯಾರ್ಥಿ ಜಿಲ್ಲೆಯ ಹನೂರು ತಾಲೂಕಿನ ಪಾಲಿಮೇಡು ಗ್ರಾಮಕ್ಕೆ ಆತನ ತಾಯಿ ಮತ್ತು ತಮ್ಮನೊಡನೆ ಬಂದಿದ್ದ. ಆತನಿಗೆ ಕೋವಿಡ್ ಸೋಂಕು ಇರುವುದು ಜೂನ್ 9 ರಂದು ದೃಢಪಟ್ಟಿತ್ತು. ಈಗ ಆತ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾನೆ.
ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಬಂದಿರುವ 38 ಜನರನ್ನು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧ ಹಾಸ್ಟೆಲ್‌ಗಳಲ್ಲಿ ಇರಿಸಿ ನಿಗಾವಣೆ ಮಾಡಲಾಗುತ್ತಿದೆ. ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.