ಪುತ್ತೂರು: ಮುಂಡೂರು ಬಂಗಾರಡ್ಕದ ಸಿಂಚನಾಲಕ್ಷ್ಮೀ ಅವರು ಪ್ರಸ್ತುತ ವರ್ಷದ ನೀಟ್ ಪ್ರವೇಶ ಪರೀಕ್ಷೆಯ ಅಂಗವೈಕಲ್ಯವುಳ್ಳವರ ವಿಭಾಗ (ಪಿಡಬ್ಲ್ಯೂಡಿ)ದಲ್ಲಿ ರಾಷ್ಟ್ರಮಟ್ಟ ದಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ.
ಈಕೆ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿ. ಇವರು ನೀಟ್ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 658 ಅಂಕಗಳನ್ನು ಪಡೆದಿದ್ದು, ಅಖಿಲ ಭಾರತ ಮಟ್ಟದ ಸಾಮಾನ್ಯ ವಿಭಾಗದಲ್ಲಿ 2,856ನೇ ರ್‍ಯಾಂಕ್ ಗಳಿಸಿದ್ದಾರೆ. ಬಂಗಾರಡ್ಕ ಮುರಳೀಧರ ಭಟ್-ಶೋಭಾ ದಂಪತಿಯ ಪುತ್ರಿ ಸಿಂಚನಾಲಕ್ಷ್ಮೀ ಈ ಹಿಂದೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದಿದ್ದರು. ಜೆಇಇ ಮತ್ತು ಸಿಇಟಿಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಈಕೆಯ ಸಹೋದರಿ ಸಿಂಧೂರ ಸರಸ್ವತಿ ಕೂಡ ಪ್ರತಿಭಾವಂತೆಯಾಗಿದ್ದು, ವಿಶ್ವೇಶ್ವರಯ್ಯ ತಂತ್ರಜ್ಞಾನ ಶಿಕ್ಷಣ ವಿ.ವಿ.ಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಮೊದಲ ರ್‍ಯಾಂಕ್ ಜತೆಗೆ ಆರು ಚಿನ್ನದ ಪದಕ ಪಡೆದಿದ್ದರು.
ಸಿಂಚನಾಲಕ್ಷ್ಮೀ ಅವರಿಗೆ ಜನ್ಮಜಾತ ಬೆನ್ನು ಮೂಳೆಯ ವೈಕಲ್ಯವಿದ್ದು, 5ನೇ ತರಗತಿಯಿಂದ 9ನೇ ತರಗತಿಯವರೆ ಗಿನ ಅವಧಿಯಲ್ಲಿ ಸರಣಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಈಗ ನೀಟ್‌ನಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈ ಮೂಲಕ ದೇಶದ ಅಗ್ರಮಾನ್ಯ ಕಾಲೇಜಿನಲ್ಲಿ ವೈದಕೀಯ ಶಿಕ್ಷಣ ಪಡೆಯಲು ಅವಕಾಶ ಹೊಂದಿದ್ದಾರೆ.
ಇದನ್ನೂ ಓದಿ:ದ್ವೀಪರಾಷ್ಟ್ರಗಳಿಗೆ ಮೋದಿ ಗಿಫ್ಟ್ : ಪ್ರಾಕೃತಿಕ ವಿಕೋಪ ತಡೆಯಲು ಇಸ್ರೋದಿಂದ ವಿಶೇಷ ವ್ಯವಸ್ಥೆ
ನೀಟ್‌ಗೆ ತಯಾರಿ ನಡೆಸಲು ವಿವೇಕಾನಂದ ಕಾಲೇಜಿನಿಂದ ವಿಶೇಷ ಕೋಚಿಂಗ್ ವ್ಯವಸ್ಥೆ ಮಾಡಲಾಗಿತ್ತು. ನಿರ್ದಿಷ್ಟ ವೇಳಾಪಟ್ಟಿ ಹಾಕಿಕೊಳ್ಳದಿದ್ದರೂ ಸತತವಾಗಿ ಪ್ರಯತ್ನ ನಡೆಸಿದ್ದೇನೆ. ವೈದ್ಯಳಾಗಿ ಬಡಜನರ ಸೇವೆ ಮಾಡಬೇಕೆಂಬುದು ನನ್ನ ಹಂಬಲ. ದಿಲ್ಲಿ ಏಮ್ಸ್‌ನಲ್ಲಿ ಪ್ರವೇಶಾವಕಾಶ ಸಿಗುವ ನಿರೀಕ್ಷೆ ಇದೆ.
–
ಸಿಂಚನಾಲಕ್ಷ್ಮೀ