ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ 1500 ಮಂದಿಗೆ ಕೃಪಾಂಕ (ಗ್ರೇಸ್ ಮಾರ್ಕ್ಸ್) ನೀಡಲಾಗಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅದಕ್ಕಾಗಿ ನಾಲ್ವರು ಸದಸ್ಯರ ಸಮಿತಿ ರಚಿಸಿ, ಅದರ ಮೂಲಕ ತನಿಖೆ ನಡೆಸಲಾಗುತ್ತದೆ ಎಂದು ಶನಿವಾರ ಪ್ರಕಟಿಸಿದೆ. ಇದೇ ವೇಳೆ, ಪರೀಕ್ಷೆಯಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗಿಲ್ಲ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಸ್ಪಷ್ಟಪಡಿಸಿದೆ.
ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಆದ ಬದಲಾವಣೆ, ಪರೀಕ್ಷಾ ಕೇಂದ್ರಗಳಲ್ಲಿ ಕಾಲಹರಣವಾಗಿದ್ದಕ್ಕೆ ಕೃಪಾಂಕ ನೀಡಲಾಗಿದ್ದು, ಇವು ಅಭ್ಯರ್ಥಿಗಳು ಹೆಚ್ಚು ಅಂಕ ಗಳಿಸಲು ಮುಖ್ಯ ಕಾರಣಗಳಾಗಿವೆ ಎಂದು ಹೇಳಿದೆ.
ಇಷ್ಟಲ್ಲದೇ ಈ ಆರೋಪವು ರಾಜಕೀಯ ಬಣ್ಣ ಪಡೆದಿದ್ದು, ಆಮ್ ಆದ್ಮಿ ಪಕ್ಷವು ಸುಪ್ರೀಂನಲ್ಲಿ ಎಸ್‌ಐಟಿ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಒತ್ತಾಯಿಸಿದೆ.
ಇತ್ತ ಕಾಂಗ್ರೆಸ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಭ್ರಷ್ಟಾಚಾರ ಬಹುತೇಕ ಪರೀಕ್ಷೆಗಳಲ್ಲಿ ಅವಿಬಾಜ್ಯ ಅಂಗವಾಗಿದೆ ಎಂದು ಆರೋಪಿಸಿದ್ದು, ಬಿಜೆಪಿ ಯುವಜನತೆಗೆ ಮೋಸ ಮಾಡಿ ಅವರ ಭವಿಷ್ಯದೊಂದಿಗೆ ಆಟವಾಡುತ್ತಿದೆ ಎಂದು ಹೇಳಿದೆ.