Advertisement

NEET ಮರುಪರೀಕ್ಷೆಗೆ ಶೇ. 50 ಮಂದಿ ಗೈರು!

01:21 AM Jun 24, 2024 | Team Udayavani |

ಹೊಸದಿಲ್ಲಿ: ನೀಟ್‌-ಯುಜಿ ಅಕ್ರಮ ಭಾರೀ ಸದ್ದು ಮಾಡಿದ ಹಿನ್ನೆಲೆಯಲ್ಲಿ ಕೃಪಾಂಕ ಪಡೆದಿದ್ದ ಅಭ್ಯರ್ಥಿಗಳಿಗೆಂದೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ರವಿವಾರ ನಡೆಸಿದ್ದ ಮರುಪರೀಕ್ಷೆಗೆ ಅರ್ಧದಷ್ಟು ಅಭ್ಯರ್ಥಿಗಳು ಗೈರಾಗಿದ್ದಾರೆ.

Advertisement

4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಒಟ್ಟು 6 ಕೇಂದ್ರಗಳಲ್ಲಿ ಮರುಪರೀಕ್ಷೆಗೆ ಎಲ್ಲ ತಯಾರಿ ನಡೆಸಲಾಗಿತ್ತು. ಆದರೆ 1,563 ಅಭ್ಯರ್ಥಿಗಳ ಪೈಕಿ ಕೇವಲ 813 ಮಂದಿ ಮಾತ್ರ ಪರೀಕ್ಷೆ ಬರೆದಿದ್ದಾರೆ. 750 ಮಂದಿ ಚಕ್ಕರ್‌ ಹಾಕಿದ್ದಾರೆ ಎಂದು ಎನ್‌ಟಿಎ ಮೂಲಗಳು ತಿಳಿಸಿವೆ.

ಮೇಘಾಲಯ, ಹರಿಯಾಣ, ಛತ್ತೀಸ್‌ಗಢ, ಗುಜರಾತ್‌ ಮತ್ತು ಚಂಡೀಗಢದ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಆದ ಸಮಯದ ನಷ್ಟವನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಈ 1,563 ಮಂದಿಗೆ ಎನ್‌ಟಿಎ ಗ್ರೇಸ್‌ ಅಂಕಗಳನ್ನು ನೀಡಿತ್ತು. ಪ್ರಕರಣವು ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇವರಿಗೆ ನೀಡಲಾಗಿದ್ದ ಕೃಪಾಂಕ ರದ್ದು ಮಾಡಿ, ಈ ಎಲ್ಲ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಎನ್‌ಟಿಎ ಮಾಹಿತಿ ನೀಡಿತ್ತು. ಅದರಂತೆ ರವಿವಾರ ಪರೀಕ್ಷೆ ಏರ್ಪಡಿಸಲಾಗಿತ್ತು.

ಛತ್ತೀಸ್‌ಗಢದಲ್ಲಿ 602 ಅಭ್ಯರ್ಥಿಗಳು ಮರುಪರೀಕ್ಷೆ ಬರೆಯಬೇಕಾಗಿತ್ತು. ಆದರೆ 291 ಮಂದಿ ಮಾತ್ರ ಹಾಜರಾಗಿದ್ದರು. ಹರಿಯಾಣದಲ್ಲಿ 494ರ ಪೈಕಿ 287 ಮಂದಿ, ಮೇಘಾಲಯದಲ್ಲಿ 464ರ ಪೈಕಿ 234 ಮಂದಿ ಪರೀಕ್ಷೆ ಬರೆದಿದ್ದಾರೆ. ಗುಜರಾತ್‌ನಲ್ಲಿ ಒಬ್ಬ ಅಭ್ಯರ್ಥಿಗಾಗಿ ಪರೀಕ್ಷೆ ಆಯೋಜಿಸಲಾಗಿತ್ತು. ಜೂ.30ರಂದು ಫ‌ಲಿತಾಂಶ ಪ್ರಕಟವಾಗಲಿದೆ.

ವಿದ್ಯಾರ್ಥಿಗಳು ಬರಲೇ ಇಲ್ಲ: ಚಂಡೀಗಢದಲ್ಲಿ ಇಬ್ಬರು ಅಭ್ಯರ್ಥಿಗಳಿಗಾಗಿ ಮರುಪರೀಕ್ಷೆ ಆಯೋಜಿಸಲಾಗಿತ್ತು. ಪರೀಕ್ಷಾ ಮೇಲ್ವಿಚಾರಕರು, ಪೊಲೀಸರು, ಸಿಬಂದಿ ಎಲ್ಲರೂ ಬಂದರೂ ಅಭ್ಯರ್ಥಿಗಳು ಮಾತ್ರ ಬರಲೇ ಇಲ್ಲ. ಅವರಿಗಾಗಿ ಕಾದು ಕಾದು ಅಧಿಕಾರಿಗಳು ಸುಸ್ತಾದರು.

Advertisement

ಎನ್‌ಟಿಎ ವೆಬ್‌ಸೈಟ್‌ ಹ್ಯಾಕ್‌ ಆಗಿಲ್ಲ: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಟಿಎ) ವೆಬ್‌ಸೈಟ್‌ ಮತ್ತು ಅದರ ಇತರ ಎಲ್ಲ ವೆಬ್‌ ಪೋರ್ಟಲ್‌ಗಳು ಸುರಕ್ಷಿತವಾಗಿದ್ದು, ಅವುಗಳು ಹ್ಯಾಕ್‌ ಆಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವೆಬ್‌ಸೈಟ್‌ ಹ್ಯಾಕ್‌ ಆಗಿದೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಪ್ರಶ್ನೆಪತ್ರಿಕೆ ಬಾಕ್ಸ್‌ ಡಿಜಿಟಲ್‌ ಲಾಕ್‌ಗಳೇ ಅಸಮರ್ಪಕ!

ಹಲವು ಪರೀûಾ ಕೇಂದ್ರಗಳಲ್ಲಿ ನೀಟ್‌ ಯುಜಿ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡ ಪೆಟ್ಟಿಗೆಗಳ ಡಿಜಿಟಲ್‌ ಲಾಕ್‌ಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಸಂಗತಿಯು ಬಿಹಾರ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ. ಪರೀಕ್ಷೆ ಆರಂಭವಾಗುವ ಮುಂಚೆ ಡಿಜಿಟಲ್‌ ಲಾಕ್‌ ಸ್ವಯಂ ಆಗಿ ಓಪನ್‌ ಆಗಬೇಕಿತ್ತು. ಆದರೆ ಬಹಳಷ್ಟು ಕೇಂದ್ರಗಳಲ್ಲಿ ಮ್ಯಾನುಯೆಲ್‌ ಆಗಿ ತೆರೆಯಬೇಕಾಯಿತು. ಹಾಗಾಗಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ವಿತರಣೆ ವಿಳಂಬವಾದ್ದರಿಂದ ತೊಂದರೆಯಾಗಿದೆ ಎಂದು ಗೊತ್ತಾಗಿದೆ.

ಅಕ್ರಮದ ಹೊಣೆಯನ್ನು  ದೊಡ್ಡವರು ಹೊರಲಿ: ಖರ್ಗೆ

ಪರೀಕ್ಷೆಗಳ ಅಕ್ರಮ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ)ಯ ಮುಖ್ಯಸ್ಥ ರನ್ನು ಬದಲಿಸಿದ ಬೆನ್ನಲ್ಲೇ ಕೇಂದ್ರ ಸರಕಾರದ ವಿರುದ್ಧ ಕೆಂಡ ಕಾರಿರುವ ಕಾಂಗ್ರೆಸ್‌, ಮೋದಿ ಆಡಳಿತದ ಉನ್ನತ ಶ್ರೇಣಿಯವರ ಬಳಿಗೆ ಅಕ್ರಮದ ಹಣವು ಬಂದು ನಿಲ್ಲುತ್ತದೆ

ಎಂದಿದೆ. ಈ ಕುರಿತು ಟ್ವೀಟ್‌ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನೀಟ್‌ ಹಗರಣದಲ್ಲಿ, ಮೋದಿ ಸರಕಾರದ ಉನ್ನತ ಅಧಿಕಾರಿಗಳ ಮನೆ ಬಾಗಿಲಿಗೆ ಹಣ ಬಂದು ನಿಲ್ಲುತ್ತದೆ. ಬಿಜೆಪಿಯಿಂದ ಹಾಳಾಗಿ ಹೋಗಿರುವ ಶಿಕ್ಷಣ ವ್ಯವಸ್ಥೆಯಲ್ಲಿನ ಸ್ಥಳೀಯ ಸಮಸ್ಯೆಗೆ ಅಧಿಕಾರಶಾಹಿಗಳನ್ನು ಹೊಣೆಯಾಗಿಸು ವುದು ಪರಿಹಾರವಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಎನ್‌ಟಿಎಯನ್ನು ಸ್ವಾಯತ್ತ ಸಂಸ್ಥೆ ಎಂದು ಹೇಳಲಾಗುತ್ತದೆ. ಆದರೆ ಅದು ವಾಸ್ತವದಲ್ಲಿ ಬಿಜೆಪಿ, ಆರೆಸ್ಸೆಸ್‌ ಹಿತಾಸಕ್ತಿ ಕಾಪಾಡುವ ಸಂಸ್ಥೆಯಾಗಿ ಮಾರ್ಪಟ್ಟಿದೆ ಎಂದಿದ್ದಾರೆ.

”ಇಡೀ ಶಿಕ್ಷಣ ವ್ಯವಸ್ಥೆಯನ್ನು ಸರಕಾ ರವು ಮಾಫಿಯಾ ಕೈಗೆ ನೀಡಿದೆ. ಮಕ್ಕಳ ಭವಿಷ್ಯವನ್ನು ದುರಾಸೆಯ ಮತ್ತು ಅಸಮರ್ಥರಿಗೆ ಹಸ್ತಾಂತರಿಸುವ ರಾಜಕೀಯ ಮೊಂಡುತನ, ದುರಹಂಕಾರ ದಿಂದ ಪತ್ರಿಕೆ ಸೋರಿಕೆಗಳಾಗುತ್ತಿವೆ.”- ಪ್ರಿಯಾಂಕಾ ವಾದ್ರಾ,ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

”ಪರೀಕ್ಷೆ ಅಕ್ರಮಗಳು ಕೇಂದ್ರೀಕೃತ ಆಯ್ಕೆ ಮತ್ತು ಅಸಮರ್ಥ ವ್ಯವಸ್ಥೆಯ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಗಿದೆ.”-ಎಂ.ಕೆ. ಸ್ಟಾಲಿನ್‌, ತಮಿಳುನಾಡು ಸಿಎಂ

ದಿಢೀರ್‌ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ: ಅಭ್ಯರ್ಥಿಗಳ ಬೇಸರ

ರವಿವಾರ ನಡೆಯಬೇಕಿದ್ದ ನೀಟ್‌ ಪಿಜಿ ಪರೀಕ್ಷೆ ಯನ್ನು ದಿಢೀರ್‌ ಮುಂದೂಡಿದ್ದಕ್ಕೆ ಅಭ್ಯರ್ಥಿಗಳು ತೀವ್ರ ಬೇಸರ ಹೊರಹಾಕಿದ್ದಾರೆ. ಪರೀಕ್ಷೆಗೆ 8 ಗಂಟೆ ಬಾಕಿ  ಇರುವಾಗಲೇ ಪರೀಕ್ಷೆ ಮುಂದೂಡಿದ್ದನ್ನು ಪ್ರಶ್ನಿಸಿ ಹಲವರು ಸೋಶಿಯಲ್‌ ಮೀಡಿಯಾಗಳಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಬಹಳಷ್ಟು ಜನರು ದೂರದ ಊರುಗಳಿಂದ ಪರೀûಾ ಕೇಂದ್ರ ಗಳಿಗೆ ತೆರಳಿದ್ದರು. ವಿದ್ಯಾರ್ಥಿಗಳ ಭವಿಷ್ಯದ ಜತೆ ಸರಕಾರ ಚೆಲ್ಲಾಟವಾಡುತ್ತಿದೆ. ಕಷ್ಟಪಟ್ಟು ಅಧ್ಯಯನ ಮಾಡಿದ್ದು ಹಾಳಾಯಿತು ಎಂಬ ರೀತಿಯಲ್ಲಿ ಪೋಸ್ಟ್‌ಗಳನ್ನು ಹಾಕಿದ್ದು, ಹಲವರು ವೀಡಿಯೋ ಸಂದೇಶಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next