ಹೊಸದಿಲ್ಲಿ: ನೀಟ್-ಯುಜಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮತ್ತು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 2 ವಾರಗಳೊಳಗಾಗಿ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆಯೂ ಸೂಚಿಸಿದೆ.
ಇನ್ನೊಂದೆಡೆ ನೀಟ್ ಅಕ್ರಮ ಕುರಿತು ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನೆಲ್ಲ ಸುಪ್ರೀಂ ಕೋರ್ಟ್‌ಗೆ ವರ್ಗಾಯಿ ಸುವಂತೆ ಕೋರಿ ಎನ್‌ಟಿಎ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿ ಸುಪ್ರೀಂ ನ್ಯಾಯಪೀಠ ಖಾಸಗಿ ಅರ್ಜಿದಾರರ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಜತೆಗೆ ನೀಟ್‌ನ 1,563 ಅಭ್ಯರ್ಥಿಗಳಿಗೆ ಕೃಪಾಂಕ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನೂ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಇತ್ತೀಚೆಗೆ ಎನ್‌ಟಿಎ ಅರ್ಜಿ ಸಲ್ಲಿಸಿತ್ತು. ಆದರೆ ಈಗ ಕೃಪಾಂಕ ರದ್ದು ಮಾಡಿ, ಮರುಪರೀಕ್ಷೆಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಅರ್ಜಿಗಳನ್ನು ಹಿಂಪಡೆಯು ತ್ತಿರುವುದಾಗಿ ಎನ್‌ಟಿಎ ತಿಳಿಸಿದೆ.
ವಿವಾದಕ್ಕೆ ಕೋಚಿಂಗ್ ಸೆಂಟರ್‌ಗಳು ಕಾರಣ?
ಹೊಸದಿಲ್ಲಿ: ನೀಟ್ ವಿವಾದ ಉಲ್ಬಣಕ್ಕೆ ಕೋಚಿಂಗ್ ಸೆಂಟರ್‌ಗಳು ಕಾರಣ ಎಂದು ಸರಕಾರದ ಮೂಲಗಳು ಹೇಳುತ್ತಿವೆ. ಪ್ರಸಕ್ತ ನೀಟ್ ಪರೀಕ್ಷೆಯಲ್ಲಿ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳ ಕಡಿಮೆ ಸಾಧನೆ ಮಾಡಿದ್ದಾರೆ. ಪರಿಣಾಮ ಅವರಿಗೆ ಆದಾಯ ಕೊರತೆಯಾಗಿದೆ ಎಂದು ಆಂಗ್ಲ ಸುದ್ದಿವಾಹಿನಿ ಯೊಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.