ಹೊಸದಿಲ್ಲಿ: ನೀಟ್ ಪಿಜಿಯ 1,456 ಸೀಟುಗಳ ಭರ್ತಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾ ಮಾಡಿದೆ. ವೈದ್ಯಕೀಯ ಶಿಕ್ಷಣ ಮತ್ತು ಸಾರ್ವಜನಿಕರ ಆರೋಗ್ಯದ ಹಿತಾಸಕ್ತಿಯಿಂದ ಕೇಂದ್ರ ಸರಕಾರ ಮತ್ತು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಈ ನಿರ್ಧಾರ ಕೈಗೊಂಡಿರುವ ಕಾರಣ ಅರ್ಜಿಗಳನ್ನು ತಿರಸ್ಕರಿಸುತ್ತಿರುವುದಾಗಿ ನ್ಯಾಯಪೀಠ ಹೇಳಿದೆ.
ಸ್ನಾತಕೋತ್ತರ ಕೋರ್ಸ್‌ನ ಈ ಸೀಟು ಗಳನ್ನು ಅರ್ಹರಿಗೆ ಮಾತ್ರ ನೀಡಬೇಕು ಎನ್ನುವುದು ಕೇಂದ್ರ ಸರಕಾರದ ನಿರ್ಧಾರವಾಗಿದೆ. ಸೀಟುಗಳು ಭರ್ತಿಯಾಗದೇ ಉಳಿದಿವೆ ಎಂಬ ಕಾರಣಕ್ಕಾಗಿ ನೀಟ್‌ಗೆ ಅರ್ಹತೆ ಪಡೆಯದವರಿಗೆ ನೀಡಲು ಸಾಧ್ಯವಿಲ್ಲ.
ವೈದ್ಯಕೀಯ ಶಿಕ್ಷಣದ ಗುಣ ಮಟ್ಟದಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಮಾಡಿ ಕೊಳ್ಳ ಬಾರದು ಎಂದು ನ್ಯಾ| ಎಂ.ಆರ್.ಶಾ ಮತ್ತು ನ್ಯಾ| ಅನಿರುದ್ಧ ಬೋಸ್ ಅವರನ್ನೊ ಳ ಗೊಂಡ ನ್ಯಾಯ ಪೀಠ ಹೇಳಿದೆ. ಜತೆಗೆ ಯಾವುದೇ ವಿಶೇಷ ಸ್ಟ್ರೇ ಸುತ್ತಿನ ಕೌನ್ಸೆಲಿಂಗ್ ನಡೆಸದೇ ಇರಲು ಭಾರತ ಸರಕಾರ ಮತ್ತು ಎಂಸಿಸಿ ಪ್ರಜ್ಞಾಪೂರ್ವಕ ನಿರ್ಧಾರ ಕೈ ಗೊಂಡಿದೆ ಎಂದ ಮೇಲೆ ಅದನ್ನು ನಾವು ನಿರಂಕುಶ ಎಂದು ಪರಿಗಣಿಸಲು ಸಾಧ್ಯ ವಿಲ್ಲ ಎಂದೂ ಪೀಠ ಅಭಿಪ್ರಾಯಪಟ್ಟಿದೆ.
ಈಗ ಹೊಸದಾಗಿ ಹೆಚ್ಚುವರಿ ವಿಶೇಷ ಸುತ್ತಿನ ಕೌನ್ಸೆಲಿಂಗ್ ನಡೆಸಿದರೆ, ನೀಟ್-ಪಿಜಿ 2022ರ ಪ್ರವೇಶ ಪ್ರಕ್ರಿಯೆಯ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಬಹುದು ಎಂದೂ ಸರ್ವೋಚ್ಚ ನ್ಯಾಯಪೀಠ ಹೇಳಿದೆ.