ಭರೂಚ್ : ಗುಜರಾತಿನ ಭರೂಚ್ ನಲ್ಲಿರುವ ಈ ಪೆಟ್ರೋಲ್ ಬಂಕ್ ವಿಶೇಷ ಆಫರ್ ವೊಂದನ್ನು ಘೋಷಿಸಿದೆ. ನೀರಜ್ ಹೆಸರಿನವರಿಗೆ 500 ರೂ. ವರೆಗೆ ಉಚಿತ ಪೆಟ್ರೋಲ್-ಡಿಸೇಲ್ ನೀಡಿದೆ. ಈ ಉಚಿತ ಆಫರ್ ಗೆ ಕಾರಣ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ.
ಹೌದು, ಟೋಕಿಯೊ ಒಲಿಂಪಿಕ್ ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಕೋಟ್ಯಂತರ ಭಾರತೀಯರ ಪಾಲಿಗೆ ಹೀರೋ ಆಗಿದ್ದಾರೆ. 120 ವರ್ಷಗಳ ಬಳಿಕ ಅಂಥ್ಲೆಟಿಕ್ ನಲ್ಲಿ ಭಾರತಕ್ಕೆ ಬಂಗಾರ ತಂದಿರುವ 23 ವರ್ಷ ವಯಸ್ಸಿನ ಚೋಪ್ರಾ ಚಿನ್ನದ ಜೋತೆಗೆ ಭಾರತೀಯರ ಹೃದಯವನ್ನೂ ಗೆದ್ದಿದ್ದಾರೆ.
ನೀರಜ್ ಚೋಪ್ರಾ ಗೋಲ್ಡ್ ಮೆಡೆಲ್ ಗೆದ್ದಿದ್ದಕ್ಕೆ ಭಾರತೀಯರ ಸಂಭ್ರಮಕ್ಕೆ ಪಾರವೆ ಇರಲಿಲ್ಲ. ನಾನಾ ಬಗೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಗುಜರಾತಿನ ಭರೂಚ್ ನಲ್ಲಿ ಪೆಟ್ರೋಲ್ ಬಂಕ್ ಮಾಲೀಕ ಆಯುಬ್ ಪಠಾಣ್, ತನ್ನ ಗ್ರಾಹಕರಿಗೆ ಉಚಿತ ಪೆಟ್ರೋಲ್ ಆಫರ್ ಘೋಷಿಸುವ ಮೂಲಕ ಚೋಪ್ರಾ ಅವರ ಸಾಧನೆಯನ್ನು ಸಂಭ್ರಮಿಸಿದ್ದಾರೆ.
ಎರಡು ದಿನಗಳ ವರೆಗೆ ( ಆ.9 ಸಂಜೆ 5 ಗಂಟೆವರೆಗೆ) ತನ್ನ ಬಂಕ್ ನಲ್ಲಿ ನೀರಜ್ ಹೆಸರಿನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ನೀಡಿದ್ದಾನೆ. ತಮ್ಮ ಹೆಸರಿನ ಗುರುತಿನ ಚೀಟಿ ತೋರಿಸಿದರೆ ಈ ಪೆಟ್ರೋಲ್ ತುಂಬಿಸಿ ಕಳುಹಿಸಲಾಗಿದೆ. ಈ ಕೊಡುಗೆಯನ್ನು ಸಾಕಷ್ಟು ಗ್ರಾಹಕರು ಸದುಪಯೋಗ ಪಡಿಸಿಕೊಂಡಿದ್ದಾರೆ.