Advertisement
ಪದಕ ಗೆದ್ದ ಬಳಿಕ ಪಿಟಿಐ ವಿಶೇಷ ಸಂದರ್ಶನದಲ್ಲಿ ಮಾತಾಡಿದ ನೀರಜ್ ಚೋಪ್ರಾ ತನ್ನ ಮುಂದಿನ ಗುರಿಯನ್ನು ತೆರೆದಿರಿಸಿದ್ದಾರೆ. ಅದು, ಈಟಿಯನ್ನು 90 ಮೀಟರ್ ಗಡಿ ದಾಟಿಸುವುದು. ಒಲಿಂಪಿಕ್ಸ್ ದಾಖಲೆ 90.57 ಮೀಟರ್ ಆಗಿದೆ. ಆದರೆ ಫೈನಲ್ ಸ್ಪರ್ಧೆಗೆ ಇಳಿಯುವ ಮೊದಲೇ ನೀರಜ್ ಒಂದು ಅಂಶವನ್ನು ಸ್ಪಷ್ಟಪಡಿಸಿದ್ದರು. ನನ್ನ ಗುರಿ ಚಿನ್ನದ ಪದಕ ಗೆಲ್ಲುವುದಲ್ಲ, ಒಲಿಂಪಿಕ್ಸ್ ದಾಖಲೆ ಸ್ಥಾಪಿಸುವುದು ಎಂದು! ಅಷ್ಟೊಂದು ಆತ್ಮವಿಶ್ವಾಸ ಅವರಲ್ಲಿತ್ತು. ಹೀಗಾಗಿ ಅವರ ಪಾಲಿಗೆ ಚಿನ್ನ ಗೆದ್ದದ್ದು ಅಚ್ಚರಿಯೇನಲ್ಲ!
Related Articles
Advertisement
ಇಲ್ಲ. ಎಲ್ಲ ಕ್ರೀಡಾಕೂಟಗಳಂತೆ ಒಲಿಂಪಿಕ್ಸ್ ಕೂಡ ಒಂದು ಎಂದು ಭಾವಿಸಿಯೇ ಸ್ಪರ್ಧೆಗಿಳಿದೆ. ಇಲ್ಲಿನ ಆ್ಯತ್ಲೀಟ್ಸ್ ವಿರುದ್ಧ ನಾನು ಸಾಕಷ್ಟು ಸಲ ಸ್ಪರ್ಧಿಸಿದ್ದೆ. ಹೀಗಾಗಿ ಚಿಂತೆಗಾಗಲಿ, ಒತ್ತಡಕ್ಕಾಗಲಿ ಆಸ್ಪದವೇ ಇರಲಿಲ್ಲ. ಕೇವಲ ನನ್ನ ನಿರ್ವಹಣೆಯ ಮೇಲಷ್ಟೇ ಗಮನ ಕೇಂದ್ರೀಕರಿಸಿದೆ. ಹೀಗಾಗಿ ಚಿನ್ನ ಗೆಲ್ಲಲು ಸಾಧ್ಯವಾಯಿತು.
ಗೋಲ್ಡ್ ಗೆಲ್ಲುವ ನಿರೀಕ್ಷೆ ಇತ್ತೇ?
ಖಂಡಿತ ಇತ್ತು. ಭಾರತ ಒಲಿಂಪಿಕ್ಸ್ ಆ್ಯತ್ಲೆಟಿಕ್ಸ್‌ನಲ್ಲಿ ಈ ವರೆಗೆ ಬಂಗಾರ ಗೆದ್ದಿರಲಿಲ್ಲ ಎಂಬುದೊಂದು ಮೈನಸ್ ಪಾಯಿಂಟ್ ಆಗಿತ್ತು. ಆದರೆ ಒಮ್ಮೆ ಜಾವೆಲಿನ್ ಹಿಡಿದ ಕೂಡಲೇ ಇದನ್ನೆಲ್ಲ ತಲೆಯಿಂದ ಅಳಿಸಿ ಹಾಕಿದೆ. ನಾನುಂಟು, ಈ ಈಟಿ ಉಂಟು… ನೋಡಿಯೇ ಬಿಡೋಣ ಎಂದು ಹೊರಟೆ. ಫಲಿತಾಂಶ ನಿಮ್ಮ ಮುಂದಿದೆ.
ನಿಮಗೆ ದೊಡ್ಡ ಸವಾಲಾಗಿದ್ದ ನೆಚ್ಚಿನ ಸ್ಪರ್ಧಿ ಜೊಹಾನ್ನೆಸ್ ವೆಟರ್ ಬಗ್ಗೆ ಏನು ಹೇಳುತ್ತೀರಿ?
ವೆಟರ್ ಮಾಜಿ ವಿಶ್ವ ಚಾಂಪಿಯನ್. ಆದರೆ ಅವರೇಕೋ ಪರದಾಡುತ್ತಿದ್ದರು. ಒತ್ತಡದಲ್ಲಿದ್ದರೋ ಅಥವಾ ಸತತ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರಿಂದ ಈ ಸಂಕಟಕ್ಕೆ ಸಿಲುಕಿದರೋ ಗೊತ್ತಿಲ್ಲ. ಅಲ್ಲದೇ ವೆಟರ್ ಫಾರ್ಮ್ನಲ್ಲೂ ಇರಲಿಲ್ಲ. ಅವರು ಅಂತಿಮ ಎಂಟರ ಸುತ್ತಿನ ಫೈನಲ್‌ಗೆ ಆಯ್ಕೆಯಾಗದಿದ್ದುದು ದುರದೃಷ್ಟ. ಗೆದ್ದ ಬಳಿಕ ಅವರು ನನ್ನನ್ನು ಪ್ರಶಂಸಿಸಿದ್ದನ್ನು ಮರೆಯುವಂತಿಲ್ಲ. ನಾವಿಬ್ಬರೂ ಉತ್ತಮ ಗೆಳೆಯರು.
ನಿಮ್ಮ ಯಶಸ್ಸಿನಲ್ಲಿ ಕೋಚ್ ಪಾತ್ರವನ್ನು ಮರೆಯುವಂತಿಲ್ಲ ಅಲ್ಲವೇ?
ಬಾಲ್ಯದ ಮೆಂಟರ್ ಜೈವೀರ್ ಚೌಧರಿ ಅವರ ಮಾರ್ಗದರ್ಶನ ನನ್ನ ಮೇಲೆ ವಿಪರೀತ ಪ್ರಭಾವ ಬೀರಿದೆ. ಪಾಣೀಪತ್‌ನ ಶಿವಾಜಿ ಸ್ಟೇಡಿಯಂನಲ್ಲಿ ನನ್ನ ಕೈಗೆ ಮೊದಲು ಜಾವೆಲಿನ್ ಕೊಟ್ಟವರೇ ಅವರು. ಬಳಿಕ ವಿದೇಶಿ ಕೋಚ್ ಲಭಿಸಿದರು. ಹಾಲಿ ಕೋಚ್ ಜರ್ಮನಿಯ ಉವೆ ಹಾನ್ ಪ್ರಮುಖರು. ಅವರು ಈಟಿಯನ್ನು 100 ಮೀಟರ್ ಗಡಿ ದಾಟಿಸಿದ (104.80 ಮೀ.) ವಿಶ್ವದ ಏಕೈಕ ಎಸೆತಗಾರ. ನನ್ನ ತಾಂತ್ರಿಕ ದೋಷಗಳೆಲ್ಲ ಇವರಿಂದ ನಿವಾರಣೆಯಾಯಿತು.
ನಿಮ್ಮ ಯಶಸ್ಸಿನಲ್ಲಿ ವೃತ್ತಿಯ ಪಾತ್ರ ಏನಿದೆ?
ನಾನು 2016ರಲ್ಲಿ ಸೇನೆ ಸೇರಿದೆ. ಅಲ್ಲಿ ನಿಯಮ ಬಹಳ ಸರಳ. ನಿಮ್ಮ ಮನೋಭಾವ ಬಹಳ ಕಠಿನವಾಗಿರಬೇಕು, ಶಿಸ್ತುಬದ್ಧವಾಗಿರಬೇಕು, ನಿಮ್ಮ ಸಂಪೂರ್ಣ ಶಕ್ತಿ ಹಾಕಿ ಕೆಲಸ ಮಾಡಬೇಕೆಂದು ಸೇನೆ ಹೇಳುತ್ತದೆ, ಒಬ್ಬ ಆ್ಯತ್ಲೀಟ್‌ನ ಜೀವನವೂ ಅದೇ ಆಗಿದೆ. ಯೋಧರು ಮತ್ತು ಕ್ರೀಡಾಪಟುಗಳು ತಮ್ಮ ಕುಟುಂಬದಿಂದ ದೂರ ಇರಬೇಕಾಗುತ್ತದೆ. ಕ್ರೀಡೆಯ ಬಗ್ಗೆ ನಾನೆಷ್ಟೇ ಗಮನ ಕೇಂದ್ರೀಕರಿಸಲಿ, ನಾನೊಬ್ಬ ಯೋಧನೆಂಬುದೂ ಅಷ್ಟೇ ಮುಖ್ಯ.