Advertisement

ತೇರದಾಳ ಆರೋಗ್ಯ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ 

03:19 PM Sep 03, 2018 | Team Udayavani |

ತೇರದಾಳ: ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ನಾಲ್ಕು ಎಕರೆ ವಿಶಾಲ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಅಧುನಿಕ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಆದರೆ ಹೊಸ ಕಟ್ಟಡದ ಎದುರು ಹಳೆಯ ಕಟ್ಟಡಗಳು, ಗಿಡಗಂಟಿಗಳು, ಕಲ್ಲು-ಮಣ್ಣು ತುಂಬಿಕೊಂಡಿರುವುದರಿಂದ ಆಸ್ಪತ್ರೆ ಯಾರಿಗೂ ಕಾಣಿಸುತ್ತಿಲ್ಲ. ಹೊಸ ಕಟ್ಟಡಕ್ಕೆ ಸಾರ್ವಜನಿಕರು ಸಂಚರಿಸಲು ದಾರಿ ಸರಿಯಾಗಿಲ್ಲ. ಹಳೆಯ ಕಟ್ಟಡದ ಹಾಳು ಬಿದ್ದಿರುವ ಭಾಗಗಳನ್ನು ತೆರವುಗೊಳಿಸಬೇಕಾಗಿದೆ.

Advertisement

ಪಟ್ಟಣದ ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ತೇರದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಸಾರ್ವಜನಿಕರಲ್ಲಿ ಸಂತಸ ತಂದಿತ್ತು. ಸಾಲದ್ದಕ್ಕೆ 24/7ಹೆರಿಗೆ ಆಸ್ಪತ್ರೆ ಎಂದು ನಾಮಫಲಕವಿದೆ. ಆದರೆ ಕಟ್ಟಡ ಮಾತ್ರವಿದೆ. ವೈದ್ಯರ, ಸಿಬ್ಬಂದಿ ಕೊರತೆ ಸೇರಿದಂತೆ ಆಸ್ಪತ್ರೆಯಲ್ಲಿ ಹಲವಾರು ಸಮಸ್ಯೆಗಳಿವೆ.

ವೈದ್ಯರು-ಸಿಬ್ಬಂದಿ ಕೊರತೆ: ಸರಕಾರಿ ಆಸ್ಪತ್ರೆಯಲ್ಲಿ ಎಂಬಿಬಿಎಸ್‌ ಹೊಂದಿದ ವೈದ್ಯಾಧಿಕಾರಿ ಹಾಗೂ ಒಬ್ಬರು ಆಯುಷ್‌ ವೈದ್ಯರು ಇರಬೇಕು. ಆದರೆ ಈಗ ಕೇವಲ ಒಬ್ಬ ಆಯುರ್ವೇದ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಎಂಬಿಬಿಎಸ್‌ ವೈದ್ಯರೆ ಇಲ್ಲ. ಪೂರ್ಣಪ್ರಮಾಣದ ವೈದ್ಯಾ ಧಿಕಾರಿಗಳೆ ಇಲ್ಲ. ಆರೋಗ್ಯ ಹಿರಿಯ ಸಹಾಯಕ 1, ಕಿರಿಯ 3, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಫಾರ್ಮಾಸಿಸ್ಟ್‌, ಎಎನ್‌ಎಂ 5 ಸಿಬ್ಬಂದಿ ಕೊರತೆಯಿದೆ. ಕೆಲವರು ಗುತ್ತಿಗೆ ಆಧಾರದಿಂದ ಕಾರ್ಯನಿರ್ವಹಿಸುತ್ತಾರೆ. ವೈದ್ಯ ಹಾಗೂ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಬರುವ ಪಟ್ಟಣ ಸೇರಿದಂತೆ ಗ್ರಾಮಗಳ ರೋಗಿಗಳಿಗೆ ತೀವ್ರ ತೊಂದರೆ ಆಗುತ್ತಿದೆ.

ಶವಪರೀಕ್ಷಾ ಕೊಠಡಿ ಇಲ್ಲ: ಸರಕಾರಿ ಆಸ್ಪತ್ರೆಗಳಿಗೆ ಅವಶ್ಯಕವಾಗಿ ಇರಬೇಕಾದ ಶವ ಪರೀಕ್ಷೆಯ ಕೊಠಡಿಯಿಲ್ಲದೆ ಹೊಸ ಕಟ್ಟಡ ನಿರ್ಮಿಸಿದ್ದಾರೆ. ಪಟ್ಟಣದಲ್ಲಿ ಶವ ಪರೀಕ್ಷಾ  ಕೊಠಡಿ ಇಲ್ಲ. ಸದ್ಯಕ್ಕೆ ಶವ ಪರೀಕ್ಷೆಗೆ ಬಂದರೆ ಬನಹಟ್ಟಿ ಸಮುದಾಯ ಆಸ್ಪತ್ರೆಗೆ ಕಳುಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸಲಿ: ಪ್ರಾಥಮಿಕ ಆರೋಗ್ಯ ಕೇಂದ್ರ ಪಟ್ಟಣ ಸೇರಿದಂತೆ ಸುತ್ತಲಿನ ಏಳು ಹಳ್ಳಿಗಳ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ದಿನಕ್ಕೆ 120ರಿಂದ 200ರ ವರೆಗೆ ಹೊರರೋಗಿಗಳ ತಪಾಸಣೆ ನಡೆಯುತ್ತದೆ. ಸೋಮವಾರ, ಬುಧವಾರ ಮತ್ತು ಸಂತೆಯ ದಿನವಾದ ಗುರುವಾರ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಮತ್ತು ತಿಂಗಳಿಗೆ 20ರಿಂದ 25ರಷ್ಟು ಹೆರಿಗೆಗಳು ಆಗುತ್ತವೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರವಾದ್ದರಿಂದ 1.20 ಲಕ್ಷ ರೂ.ಗಳ ಅನುದಾನದಲ್ಲಿನ ಔಷಧಗಳು ಮಾತ್ರ ಬರುತ್ತವೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಜನಸಂಖ್ಯೆ ಸೇರಿದಂತೆ ಎಲ್ಲ ಅರ್ಹತೆ ಹೊಂದಿದೆ. ಮತಕ್ಷೇತ್ರ ಹಾಗೂ ಹೋಬಳಿ ಕೇಂದ್ರವಾದ್ದರಿಂದ ಆಸ್ಪತ್ರೆ ಮೇಲ್ದರ್ಜೆಗೇರಿ ಸಮೂದಾಯ ಆರೋಗ್ಯ ಕೇಂದ್ರವಾಗಿ ಮಾರ್ಪಾಡಾಗಬೇಕಿದೆ.

ವಸತಿ ಗೃಹಗಳಿಲ್ಲ: ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ವಾಸಿಸಲು ಯೋಗ್ಯ ವಸತಿ ಗೃಹಗಳಿಲ್ಲ. ಎಲ್ಲ ಕಟ್ಟಡಗಳು ಮಳೆಗೆ ಸೋರುತ್ತವೆ. ಕೆಲ ಸಿಬ್ಬಂದಿ ಮಾತ್ರ ಹಾಳು ಬಿದ್ದಿರುವ ಮನೆಗಳಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ವೈದ್ಯಾಧಿಕಾರಿಗಳು ಕೇಂದ್ರದಲ್ಲಿ ವಸತಿ ಮಾಡದೆ, ಬೇರೆ ಊರುಗಳಿಗೆ ಹೋಗುತ್ತಾರೆ. ನೀರಿನ ಅವ್ಯವಸ್ಥೆ: ಆಸ್ಪತ್ರೆಯಲ್ಲಿ ಶಾಶ್ವತ ನೀರಿನ ವ್ಯವಸ್ಥೆ ಇಲ್ಲ. ಆಸ್ಪತ್ರೆಯಲ್ಲಿ ಕೊಳವೆ ಬಾವಿ ಕೊರೆಸಿದ್ದಾರೆ. ನೀರು ಮಾತ್ರ ದೊರೆತಿಲ್ಲ. ಬೇಸಿಗೆಯಲ್ಲಿ ತೊಂದರೆಯಾಗದಂತೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ.

Advertisement

ಅನೈತಿಕ ಚಟುವಟಿಕೆಗಳು:ಆಸ್ಪತ್ರೆಯ ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದರಿಂದ ಹಾಗೂ ಹಾಳಾದ ಕಟ್ಟಡಗಳು ಇರುವುದರಿಂದ ಜೂಜಾಟ, ಪಾನಪ್ರಿಯರು ಸೇರಿದಂತೆ ವಿವಿಧ ರೀತಿಯ ಅನೈತಿಕ ಚಟುವಟಿಕೆ ನಡೆಯುತ್ತವೆ ಎಂದು ಸಾರ್ವಜನಿಕ ಆರೋಪವಾಗಿದೆ.

ತೇರದಾಳ ಆರೋಗ್ಯ ಕೇಂದ್ರವನ್ನು ಶೀಘ್ರ ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಹೊರಡಿಸಲಿದೆ. ರೋಗಿಗಳ ಸಂಖ್ಯೆಗನುಗುಣವಾಗಿ ಇಲಾಖೆಯು ಔಷಧ ಪೂರೈಸುತ್ತದೆ. ಮೇಲಧಿಕಾರಿಗಳ ಆದೇಶ ಬಂದ ಬಳಿಕ ಹಳೆಯ ಕಟ್ಟಡ ತೆರವುಗೊಳಿಸಲಾಗುವುದು.
ಡಾ| ಜಿ.ಎಸ್‌. ಗಲಗಲಿ,
ತಾಲೂಕಾ ಆರೋಗ್ಯಾಧಿಕಾರಿ ಜಮಖಂಡಿ.

Advertisement

Udayavani is now on Telegram. Click here to join our channel and stay updated with the latest news.

Next