ಜಗಳೂರು: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಬಿಳಿಚೋಡು ಗ್ರಾಮದ ಸೇತುವೆ ತುಂಬಾ ಹಳೆಯದಾಗಿದ್ದು, ಅದಕ್ಕಿಂತ ಮುಖ್ಯವಾಗಿ ಕಿರಿದಾಗಿದೆ. ಯಾವುದೇ ಅವಘಡ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ದುರಸ್ತಿ ಮಾಡಬೇಕಾಗಿದೆ.
ತಾಲೂಕಿನ ಬಿಳಿಚೊಡು ಗ್ರಾಮದಲ್ಲಿರುವ ಈ ಸೇತುವೆ ಸುಮಾರು 90 ವರ್ಷ ಹಳೆಯದಾಗಿದ್ದು, ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಸೇತುವೆಯು ತಾಲೂಕು ಕೇಂದ್ರದಿಂದ ಜಿಲ್ಲಾ ಕೆಂದ್ರವನ್ನು ಸಂಪರ್ಕಿಸುತ್ತಿದ್ದು, ದಾವಣಗೆರೆಯಿಂದ ಜಗಳೂರು, ಪಾವಗಡ, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಇತರೆ ಊರುಗಳಿಗೆ ತೆರಳಲು ವಾಹನಗಳು ಇದೇ ಸೇತುವೆ ಮೇಲೆ ಸಾಗಬೇಕು.
ಬೈಕ್, ಕಾರು ಸೇರಿದಂತೆ ಲಾರಿ ಮೊದಲಾದ ನೂರಾರು ಭಾರಿ ವಾಹನಗಳ ಸಂಚಾರದಿಂದ ದಿನೇ ದಿನೇ ಸೇತುವೆ ಶಿಥಿಲಾವಸ್ಥೆ ತಲುಪುತ್ತಿದ್ದು, ಅಲ್ಲಲ್ಲಿ ಚಿಕ್ಕಪುಟ್ಟ ಬಿರುಕುಗಳು ಕಾಣುತ್ತಿವೆ. ಯಾವುದೇ ಅನಾಹುತ ಸಮಭವಿಸುವ ಮುನ್ನ
ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಂಡು ಹೊಸ ಸೇತುವೆ ನಿರ್ಮಾಣ ಮಾಡಬೇಕಿದೆ.
ಕಿರಿದಾದ ಸೇತುವೆ: 90 ವರ್ಷಗಳ ಹಿಂದಿನ ಅಗತ್ಯಗಳಿಗೆ ತಕ್ಕಂತೆ ಸೇತುವೆಯನ್ನು ವಿನ್ಯಾಸ ಮಾಡಿ ನಿರ್ಮಿಸಲಾಗಿದ್ದು, ಅಗಲಕ್ಕೆ ಕಿರಿದಾಗಿರುವುದರಿಂದ ಎರಡು ವಾಹನಗಳು ಏಕಕಾಲದಲ್ಲಿ ಎದುರುಬದರು ಸಂಚರಿಸಲು ಸಾಧ್ಯವಿಲ್ಲದಾಗಿದೆ. ಎದುರಿನಿಂದ ಒಂದು ವಾಹನ ಬರುತ್ತಿದ್ದರೆ, ಆ ವಾಹನ ಸೇತುವೆ ದಾಟುವವರೆಗೆ ಇನ್ನೊಂದು ವಾಹನ ನಿಲ್ಲುವ ಪರಿಸ್ಥಿತಿ ಇದೆ.
ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ: ಲೋಕೋಪಯೋಗಿ ಇಲಾಖೆ ವತಿಯಿಂದ 15 ಕೋಟಿ ರೂ. ವೆಚ್ಚದಲ್ಲಿ ಜಗಳೂರಿನಿಂದ ಬಿಳಿಚೋಡುವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಮಲ್ಪೆ – ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಇದಾಗಿದ್ದರೂ ಸೇತುವೆ ಅಭಿವೃದ್ಧಿಗೆ ಯಾವುದೇ ಒತ್ತು ನೀಡಿಲ್ಲ.
ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ: ತೀರಾ ಹಳೆಯದಾಗಿರುವ ಸೇತುವೆಯ ಮೇಲೆ ಲಾರಿ ಸೇರಿದಂತೆ ಮರಳು, ಇಟ್ಟಿಗೆ ಸಾಗಣೆ ಮಾಡುವ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿ ನೂತನ ಸೇತುವೆಯಾಗುವವರೆಗೆ ಅನ್ಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
90 ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ನೂತನ ಸೇತುವೆ ನಿರ್ಮಿಸಬೇಕು.
ಗಿರೀಶ್ ಒಡೆಯರ್, ಬಿಳಿಚೋಡು ಗ್ರಾಮದ ಮುಖಂಡ
ಕೆಲವು ದಿನಗಳ ಹಿಂದಷ್ಟೇ ವರ್ಗಾವಣೆಯಾಗಿ ಬಂದಿದ್ದು, ಈ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ.
ಸುರೇಶ್, ಎಇಇ, ಲೋಕೋಪಯೋಗಿ ಇಲಾಖೆ
ಸುರೇಶ್, ಎಇಇ, ಲೋಕೋಪಯೋಗಿ ಇಲಾಖೆ
2 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಈ ಹಿಂದೆ ಇದ್ದ ಅಧಿಕಾರಿಗಳು ಸರಕಾರಕ್ಕೆ ಎರಡು, ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಯಾವುದೇ ಉತ್ತರ ಬಂದಿಲ್ಲ.
ಪ್ರಭು , ಅಭಿಯಂತರ, ಲೋಕೋಪಯೋಗಿ ಇಲಾಖೆ
ರವಿಕುಮಾರ ಜೆ.ಓ ತಾಳಿಕೆರೆ